Advertisement

ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌: ಸಿಂಧು ಫೈನಲ್‌ ಸವಾರಿ

06:40 AM Sep 17, 2017 | |

ಸಿಯೋಲ್‌: ಒಲಿಂಪಿಕ್‌ ಬೆಳ್ಳಿತಾರೆ ಪಿ.ವಿ. ಸಿಂಧು “ಕೊರಿಯಾ ಓಪನ್‌ ಸೂಪರ್‌ ಸಿರೀಸ್‌ ಬ್ಯಾಡ್ಮಿಂಟನ್‌’ ಕೂಟದ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿದ್ದಾರೆ. ಶನಿವಾರದ ಸೆಮಿಫೈನಲ್‌ ಸೆಣಸಾಟದಲ್ಲಿ ಅವರು ಚೀನದ ಹಿ ಬಿಂಗ್‌ಜಿಯಾವೊ ವಿರುದ್ಧ 21-10, 17-21, 21-16 ಅಂತರದ ಜಯ ಸಾಧಿಸಿದರು.

Advertisement

ವಿಶ್ವದ 4ನೇ ರ್‍ಯಾಂಕಿಂಗ್‌ ಆಟಗಾರ್ತಿಯಾಗಿರುವ ಸಿಂಧು ರವಿವಾರದ ಪ್ರಶಸ್ತಿ ಕಾಳಗದಲ್ಲಿ ಜಪಾನಿನ 8ನೇ ಶ್ರೇಯಾಂಕಿತೆ ನಜೊಮಿ ಒಕುಹರಾ ಅವರನ್ನು ಎದುರಿಸಲಿದ್ದಾರೆ. ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಒಕುಹರಾ ಇನ್ನೊಂದು ಸೆಮಿಫೈನಲ್‌ನಲ್ಲಿ ತನ್ನದೇ ದೇಶದ, ವಿಶ್ವದ ನಂ.2 ಆಟಗಾರ್ತಿ ಅಕಾನೆ ಯಮಾಗುಚಿ ಅವರನ್ನು 21-17, 21-18 ಅಂತರದಿಂದ ಪರಾಭವಗೊಳಿಸಿದರು.

ಮತ್ತೆ ಸಿಂಧು-ಒಕುಹರಾ!
ವಿಶೇಷವೆಂದರೆ, ಎರಡೇ ವಾರದ ಅಂತರದಲ್ಲಿ ಪಿ.ವಿ. ಸಿಂಧು ಮತ್ತು ನಜೊಮಿ ಒಕುಹರಾ ಪ್ರತಿಷ್ಠಿತ ಬ್ಯಾಡ್ಮಿಂಟನ್‌ ಕೂಟದ ಫೈನಲ್‌ನಲ್ಲಿ ಪರಸ್ಪರ ಎದುರಾಗುತ್ತಿರುವುದು! ಇವರಿಬ್ಬರು ಕಳೆದ ತಿಂಗಳಾಂತ್ಯ ಗ್ಲಾಸೊYàದಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ ಪ್ರಶಸ್ತಿ ಕಾಳಗದಲ್ಲಿ ಜಿದ್ದಾಜಿದ್ದಿ ಹೋರಾಟ ನಡೆಸಿದ್ದರು. ಒಂದು ಗಂಟೆ, 50 ನಿಮಿಷಗಳ ಈ ಮ್ಯಾರಥಾನ್‌ ಕಾಳಗದಲ್ಲಿ ಸಿಂಧು 19-21, 22-20, 20-22 ಅಂತರದ ಸೋಲು ಕಾಣಬೇಕಾಯಿತು. ಇದಕ್ಕೆ ಸೇಡು ತೀರಿಸಿಕೊಳ್ಳುವ ಉತ್ತಮ ಅವಕಾಶ ಭಾರತೀಯ ಆಟಗಾರ್ತಿಗೆ ಎದುರಾಗಿದೆ.

ಬಿಂಗ್‌ಜಿಯಾವೊ ಅವರನ್ನು ಸೋಲಿಸುವ ಮೂಲಕ ಸಿಂಧು ಸೇಡಿನ ಮೊದಲ ಹಂತವನ್ನು ಯಶಸ್ವಿಯಾಗಿ ದಾಟಿದ್ದಾರೆ. ಇದೇ ವರ್ಷದ ಏಶ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಬಿಂಗ್‌ಜಿಯಾವೊ ವಿರುದ್ಧ ಸಿಂಧು ಸೋತಿದ್ದರು.

ಸಿಂಧು ಭರ್ಜರಿ ಆರಂಭ
ಬಿಂಗ್‌ಜಿಯಾವೊ ವಿರುದ್ಧ ಆಕ್ರಮಣಕಾರಿ ಆರಂಭ ಕಂಡುಕೊಳ್ಳುವಲ್ಲಿ ಯಶಸ್ವಿಯಾದ ಸಿಂಧು 9-1ರ ಭರ್ಜರಿ ಮುನ್ನಡೆ ಸಾಧಿಸಿದರು. ಬ್ರೇಕ್‌ ವೇಳೆ ಈ ಲೀಡ್‌ 11-4 ಅಂತರದಲ್ಲಿತ್ತು. ಸಿಂಧು ಗೆಲುವು ಖಚಿತವಾಗಿತ್ತು.
ದ್ವಿತೀಯ ಗೇಮ್‌ ವೇಳೆ ಸಿಂಧು ಕೆಲವು ತಪ್ಪುಗಳನ್ನೆಸಗಿದ್ದು ಚೀನೀ ಆಟಗಾರ್ತಿಗೆ ಲಾಭವಾಯಿತು. ಬ್ರೇಕ್‌ ವೇಳೆ ಸಿಂಧು 5 ಅಂಕಗಳ ಮುನ್ನಡೆಯಲ್ಲಿದ್ದರೂ ಇದನ್ನು ಉಳಿಸಿಕೊಳ್ಳಲಾಗಲಿಲ್ಲ. 15-15ರ ಸಮಬಲದ ಬಳಿಕ ಬಿಂಗ್‌ಜಿಯಾವೊ ಮೇಲುಗೈ ಸಾಧಿಸಿದರು.

Advertisement

ನಿರ್ಣಾಯಕ ಗೇಮ್‌ನಲ್ಲಿ ಇಬ್ಬರೂ ಆಕರ್ಷಕ ರ್ಯಾಲಿಗಳ ಮೂಲಕ ಗಮನ ಸೆಳೆದರು. 7-4, 9-6ರ ಅಲ್ಪ ಮುನ್ನಡೆಯೊಂದಿಗೆ ಸಿಂಧು ಓಟ ಬೆಳೆಸಿದರು. ಕೆಲವು ವೈಡ್‌ ಹೊಡೆತಗಳು ಚೀನೀ ಆಟಗಾರ್ತಿಗೆ ಮುಳುವಾದವು. ಸಿಂಧು ತನ್ನ ಮುನ್ನಡೆಯನ್ನು 19-15 ಅಂಕಗಳಿಗೆ ವಿಸ್ತರಿಸಿದಾಗ ಹಿಡಿತವನ್ನು ಬಿಗಿಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next