Advertisement

ಪುಟ್ಟಿ ಮತ್ತು ಪೆಟ್‌ಕೇರ್‌ ಸೆಂಟರ್‌

07:53 PM Aug 13, 2019 | mahesh |

ಕನ್ಸಲ್ಟೆಶನ್‌ ದುಡ್ಡು, ಪೇಷಂಟ್‌ ವಿವರವನ್ನು ಬರೆದು ಕೌಂಟರ್‌ನಲ್ಲಿ ಇದ್ದಾಕೆಗೆ ಕೊಟ್ಟು, ಆಕೆ ಸೂಚಿಸಿದ ರೂಮ್‌ನತ್ತ ತೆರಳಿದೆ. ಐದು ನಿಮಿಷಗಳಲ್ಲೇ ಡಾಕ್ಟರ್‌ ಬಾಗಿಲು ತೆರೆದು, ನಮ್ಮನ್ನು ಒಳ ಕರೆದರು…

Advertisement

ಮಳೆ ಅಂದರೆ ಯಾರಿಗಿಷ್ಟವಿಲ್ಲ ಹೇಳಿ? ಮಳೆ ಬರುವಾಗ ಹಾಡೋದು, ಕುಣಿಯೋದು ಅಥಾವಾ ಬಿಸಿಬಿಸಿ ಕಾಫಿ ಕುಡೀತಾ ಮೆಚ್ಚಿನ ಲೇಖಕರ ಪುಸ್ತಕ ಓದೋದು ಎಲ್ರಿಗೂ ಪ್ರಿಯವೇ.

ಅದೇ ಮಳೆ ವಾರಗಟ್ಟಲೆ ಬಂದ್ರೆ, ಆ ಜಡಿಮಳೇಲಿ ಸಣ್ಣ ಮಕ್ಕಳ ಆರೋಗ್ಯ ಕೆಟ್ಟು ನೀವು ಡಾಕ್ಟ್ರ ಹತ್ರ ಹೋಗೋಕೂ ಆಗದಿದ್ದರೆ? “ಹಾಳಾದ್‌ ಮಳೆ, ನಿಲ್ಲೋಕೇನು ರೋಗ ಇದಕ್ಕೆ’ ಅನ್ನುವಷ್ಟು ಕೋಪ ಬರಲ್ವಾ.. ಮಳೆಗೆ ಹಿಡಿ ಹಿಡಿಶಾಪ ಹಾಕಲ್ವಾ…?

ಹೂಂ, ನಂಗೂ ಹಾಗೇ ಆಯಿತು. ನನ್ನ ಮಗಳು ಆಗ ಮೂರನೇ ಕ್ಲಾಸು. ವಾರದಿಂದ ಅವಳಿಗೆ ಬಿಟ್ಟು ಬಿಟ್ಟೂ ಜ್ವರ ಬರ್ತಿತ್ತು. ನಾನು ಕ್ರೋಸಿನ್‌, ಕಷಾಯ ಮಾಡಿ ಕೊಟ್ರೂ ಜ್ವರ ಸುಡ್ತಾನೇ ಇದೆ! ಟೆಂಪರೇಚರ್‌ 102, 103 ತೋರಿಸ್ತಿದೆ! ಭಯವಾಗಿ, ಡಾಕ್ಟರ್‌ ಹತ್ತಿರ ಹೋಗೋಣ ಅಂದ್ರೆ ಜಡಿಮಳೆ! ಹನ್ನೆರೆಡು ವರ್ಷಗಳ ಹಿಂದೆ ಈಗಿನಂತೆ ಊಬರ್‌, ಓಲಾ ಇದ್ದಿದ್ದರೆ ತೊಂದ್ರೇನೇ ಇರ್ತಿರಲಿಲ್ಲ!

ಅವಳಿಗೆ ಜೋರು ಜ್ವರ ಬಂದ ನಾಲ್ಕನೇ ಸಂಜೆ ಮಳೆಗೆ ತುಸು ವಿರಾಮ ಸಿಕ್ಕು ಸುಮ್ಮನಾಯಿತು. ನಾನು ತಕ್ಷಣ, ಫ್ಲಾಕ್ಸ್ ನಲ್ಲಿ ಬಿಸಿನೀರು, ಬಿಸ್ಕತ್ತಿನ ಪೊಟ್ಟಣ, ದೊಡ್ಡ ಶಾಲೊಂದನ್ನು ದೊಡ್ಡ ವ್ಯಾನಿಟಿ ಬ್ಯಾಗಿನಲ್ಲಿ ತುಂಬಿಸಿಕೊಂಡು ಮನೆ ಹತ್ತಿರ ಇರೋ ಕ್ಲಿನಿಕ್‌ಗೆ ಮಗಳೊಂದಿಗೆ ಹೋದೆ. ಮಳೆಗಾಲ ನೋಡಿ ಅಲ್ಲೂ ವಿಪರೀತ ರಶ್‌! ಪಾಪ ಪುಟ್ಟಿಗೆ ಸ್ವೆಟರ್‌ ಹಾಕಿ, ಮೇಲೊಂದು ಶಾಲು ಹೊದೆಸಿದ್ರೂ ಚಳಿಗೆ ನಡುಗ್ತಾ ಇದ್ದಳು. ಅವಳನ್ನು ಕೂರಿಸಲೂ ಜಾಗ ಇಲ್ದೆ ಒದ್ದಾಡ್ತಾ ಇರೋವಾಗ, ಎದುರಿಗೇ ರಸ್ತೆಯ ಇನ್ನೊಂದು ಬದಿ ನಿಂತಿದ್ದ ಆಟೋ ಡ್ರೈವರ್‌ ಬಂದು, “ಬನ್ನಿ ಅಕ್ಕ, ಇಲ್ಲೇ ಸ್ವಲ್ಪ ದೂರದಲ್ಲಿ ಇನ್ನೊಂದು ಆಸ್ಪತ್ರೆ ಇದೆ. ಅಲ್ಲಿಗೆ ಕರ್ಕೊಂಡು ಹೋಗ್ತಿನಿ. ಆದರೆ ಡಬಲ್‌ ದುಡ್ಡು ಕೊಡಬೇಕು’ ಅಂದ. ನಾನಿನ್ನೂ ನಿರ್ಧಾರ ಮಾಡುವಷ್ಟರಲ್ಲಿ ಮತ್ತೆ ಗುಡುಗು! ಸರಿ, ಮಗಳನ್ನು ಕೂರಿಸಿಕೊಂಡು ಆ ಇನ್ನೊಂದು ಆಸ್ಪತ್ರೆಗೆ ಹೊರಟೆ.

Advertisement

ಕೆಲ ಆಟೋ ಡ್ರೈವರ್‌ಗಳು ಗೊತ್ತಲ್ಲ, ನಮ್ಮ ಬಗ್ಗೆ ಕನಿಕರ ಇಲ್ಲದೆ ಅದೂ ಇದೂ ಪುರಾಣ ಹೇಳ್ತಾನೇ ಇರ್ತಾರೆ. ಇಳಿಯೋವರೆಗೂ ನಿಲ್ಲಿಸಲ್ಲ. ನನಗೆ ಸಿಕ್ಕಿದ ಆಟೋ ಡ್ರೈವರ್‌ ಕೂಡಾ ಆ ಪೈಕಿಯೇ. ಅದೇನೋ ಹೇಳ್ತಾನೇ ಇದ್ದ, 15 ನಿಮಿಷಗಳಲ್ಲಿ ಬೆಂಗಳೂರಿನ ಡಾಕ್ಟರ್‌ಗಳ ಪ್ರವರವೆಲ್ಲಾ ಒದರಿ, ಒಂದು ಕಡೆ ಆಟೋ ನಿಲ್ಲಿಸಿದ.

ಕೊಡೆ ಬಿಡಿಸಿ, ನಮ್ಮಿಬ್ಬರನ್ನು ಆಸ್ಪತ್ರೆ ಬಾಗಿಲ ಬಳಿ ಹುಷಾರಾಗಿ ಬಿಟ್ಟು ಡಬಲ್‌ ದುಡ್ಡು ವಸೂಲಿ ಮಾಡಿ “ಹುಷಾರಕ್ಕ’ ಅಂತ ಹೇಳಿ ಹೊರಟ ನಂತರ ನಾನು ಅವಸರದಲ್ಲಿ ಒಳಗೆ ಓಡಿದೆ.

ಯಥಾಪ್ರಕಾರ ಕನ್ಸಲ್ಟೆಶನ್‌ ದುಡ್ಡು, ಪೇಷಂಟ್‌ ವಿವರ ಬರೆದು ಕೌಂಟರ್‌ನಲ್ಲಿ ಇದ್ದಾಕೆಗೆ ಕೊಟ್ಟು, ಆಕೆ ಸೂಚಿಸಿದ ರೂಮ್‌ನತ್ತ ತೆರಳಿದೆ. ಐದು ನಿಮಿಷಗಳಲ್ಲೇ ಡಾಕ್ಟರ್‌ ಬಾಗಿಲು ತೆರೆದು ಒಳ ಕರೆದರು.

ಡಾಕ್ಟರ್‌: ಏನಾಗಿದೆ? ಇಷ್ಟೊಂದು ಟೈಟಾಗಿ ಪ್ಯಾಕ್‌ ಮಾಡಬಾರದು..
ನಾನು : ತುಂಬಾ ಶೀತ ಜ್ವರ ಅಲ್ವಾ ಡಾಕ್ಟರೇ.. ಹಾಗಾಗಿ ..
ಡಾಕ್ಟರ್‌: ಇಲ್ಲಿ ಮಲಗಿಸಿ ನೋಡೋಣ..
ನಾನು: ಮಗೂಗೆ ಹತ್ತಕ್ಕೆ ಆಗಲ್ವಂತೆ ಡಾಕ್ಟರೇ, ಪ್ಲೀಸ್‌ ಇಲ್ಲೇ ನೋಡಿ..
(ಇವರ್ಯಾಕೆ ಮಗೂನ ನೋಡ್ತಿಲ್ಲ ಅನಿಸಿ)

ಅಷ್ಟೊತ್ತಿಗೆ ಕೌಂಟರಿನಾಕೆ ಓಡಿ ಬಂದವಳು, “ಇದೇನು ಮೇಡಂ? ನಿಮ್ಮ ಮಗಳ ಡೀಟೇಲ್ಸ್ ಕೊಟ್ಟಿದೀರಾ? ನಾಯಿಮರೀದು ಎಲ್ಲಿದೆ?’ ಅಂದಳು.
ಒಂದೇ ಕ್ಷಣ..ಅವರಿಬ್ಬರ ಜೋರಾದ ನಗು ಆ ಆವರಣವೆಲ್ಲಾ ತುಂಬಿಹೋಯಿತು….
ನಾನು ಅಯೋಮಯವಾಗಿ ಆಚೆ ಬಂದು ನೋಡಲು “ಡಿಂಪಲ್‌ ಪೆಟ್‌ ಕೇರ್‌ ಸೆಂಟರ್‌’ ಎಂದು ಬರೆದಿದ್ದ ಬೋರ್ಡು ಅಣಕಿಸುತ್ತಿತ್ತು.

(ಶಾಲು ಸುತ್ತಿದ್ದ ನನ್ನ ಬ್ಯಾಗಿನಲ್ಲಿ ಜ್ವರ ಬಂದ ನಾಯಿಮರಿ ಇದೆ ಅಂತ ಅವರು ತಿಳಿದದ್ದು, ಬೋರ್ಡು ಸರಿಯಾಗಿ ನೋಡದೆ ಒಳನುಗ್ಗಿದ್ದು ಫ‌ಜೀತಿಗೆ ಕಾರಣವಾಗಿತ್ತು)

– ಜಲಜಾ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next