ಪುತ್ತೂರು : ಅಧಿಕಾರ ಸ್ವೀಕರಿಸಿದ ನಾಲ್ಕೇ ತಿಂಗಳಲ್ಲಿ ಪುಡಾ ಅಧ್ಯಕ್ಷ ಸ್ಥಾನಕ್ಕೆ ಭಾಸ್ಕರ ಕೋಡಿಂಬಾಳ ರಾಜೀನಾಮೆ ಸಲ್ಲಿಸಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಮಾತಿನಿಂದ ಬೇಸರಗೊಂಡು ಈ ನಿರ್ಧಾರ ತಳೆದಿರು ವುದಾಗಿ ಹೇಳಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಶನಿವಾರ ಪತ್ರಿಕಾಗೋಷ್ಠಿ ನಡೆಸಿ ತಮ್ಮ ರಾಜೀನಾಮೆ ನಿರ್ಧಾರ ಪ್ರಕ ಟಿಸಿದ ಭಾಸ್ಕರ್, ಜು.11ರಂದು ಶಾಸಕರು ನನಗೆ ಕರೆ ಮಾಡಿ, ಪುಡಾ ಸತ್ತಿದೆ, ನಿಮ್ಮ ಕೆಲಸ ಸಾಲದು ಎಂದರು ನಾನು ಸ್ವಾಭಿಮಾನಿ. ಇಂದು ನನ್ನನ್ನು ಯಾರು ನೇಮಿಸಿದರೋ ಅವರಿಗೆ ಅಸಮಾಧಾನ ಇದೆಯೋ ಗೊತ್ತಿಲ್ಲ. ಆದರೆ ಶಾಸಕರ ಮಾತಿನಿಂದ ನನಗೆ ನೋವಾಗಿದೆ ಎಂದರು.
ನಾನು ಪದಗ್ರಹಣ ಸ್ವೀಕರಿಸಿದ್ದು ಮಾ.16ರಂದು. ಬಳಿಕ ಜಾರಿಯಾದ ಚುನಾವಣೆ ನೀತಿ ಸಂಹಿತೆ ಜೂ.5 ರ ವರೆಗೆ ಇತ್ತು. 22 ದಿನದಲ್ಲಿ ಕಟ್ ಕನ್ವರ್ಶನ್ ಸಹಿತ ಹಲವು ಕೆಲಸಗಳನ್ನು ಮಾಡಿದ್ದೇನೆ ಎಂದು ಹೇಳಿದರು. ನಾನು ಪುಡಾ ಅಧ್ಯಕ್ಷತೆಗೆ ಆಸೆ ಪಟ್ಟವನಲ್ಲ. ನನ್ನನ್ನು ಶಾಸಕರೇ ಆಯ್ಕೆ ಮಾಡಿದ್ದರು. ಅವರಿಗೆ ನನ್ನ ಕಾರ್ಯವೈಖರಿ ಇಷ್ಟವಾಗದಿದ್ದಾಗ ರಾಜೀನಾಮೆ ಸೂಕ್ತ. ಹಾಗಾಗಿ ರಾಜೀ ನಾಮೆ ಪತ್ರವನ್ನು ಸರಕಾರಕ್ಕೆ ರಿಜಿಸ್ಟರ್ ಪೋಸ್ಟ್ ಮೂಲಕ ಕಳುಹಿಸಿದ್ದೇನೆ. ಅದನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಪಕ್ಷವು ನನಗೆ ಹಲವು ಹುದ್ದೆ ನೀಡಿದ್ದು, ನಿಭಾಯಿಸಿದ್ದೇನೆ ಎಂದರು.
ನೋವು ತರುವ ಹೇಳಿಕೆ ನೀಡಿಲ್ಲ:
ಕಟ್ ಕನ್ವರ್ಶನ್ ಸಮಸ್ಯೆ ಸಹಿತ ಹಲವು ವಿಷಯಗಳ ಬಗ್ಗೆ ನಿರ್ಣಯ ಕೈಗೊಂಡು ಸರಕಾರಕ್ಕೆ ಕಳುಹಿಸುವಂತೆ 3 ವಾರಗಳ ಹಿಂದೆಯೇ ತಿಳಿಸಿದ್ದೆ. ಆ ಕೆಲಸ ಆಗಿಲ್ಲ. ಇದನ್ನು ದೂರವಾಣಿ ಮೂಲಕ ಕೇಳಿದ್ದು ಬಿಟ್ಟರೆ, ನೋವಾ ಗುವಂತೆ ವರ್ತಿಸಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.
ಕಟ್ ಕನ್ವರ್ಶನ್ ಸಮಸ್ಯೆ ಬಗ್ಗೆ ನಿತ್ಯವೂ ನನಗೆ ಹತ್ತಾರು ಕರೆಗಳು ಬರುತ್ತಿದ್ದು, ಅವರ ಗಮನಕ್ಕೆ ತಂದಿ ದ್ದೇನೆ. ಇದು ನನ್ನ ಜವಾಬ್ದಾರಿ. ನಾನೂ ಸೇರಿದಂತೆ ಬೇರೆ ಬೇರೆ ಸಮಿತಿ ಅಧ್ಯಕ್ಷ, ಸದಸ್ಯರು ಜನರ ಸಮಸ್ಯೆಗೆ ಸ್ಪಂದಿಸಬೇಕು. ಅದರಲ್ಲಿ ವಿಳಂಬವಾದರೆ ನಾನು ಸುಮ್ಮನಿ ರಲಾರೆ. ಇದರಲ್ಲಿ ರಾಜಿ ಇಲ್ಲ ಎಂದು ತಿಳಿಸಿದ್ದಾರೆ. ಭಾಸ್ಕರ ಪಕ್ಷದ ಶಿಸ್ತಿನ ಕಾರ್ಯಕರ್ತ. ಅವರೊಂದಿಗೆ ಮಾತನಾಡುವೆ. ನೋವಾಗಿದ್ದರೆ ಕ್ಷಮೆ ಯಾಚಿಸುವೆ ಎಂದೂ ತಿಳಿಸಿದ್ದಾರೆ.
ಶಾಸಕರ ಸಮ್ಮುಖವೇ ಅಧಿಕಾರ ಸ್ವೀಕಾರ
ಭಾಸ್ಕರ ಕೋಡಿಂಬಾಳ ಅವರನ್ನು ಖುದ್ದು ಶಾಸಕರೇ ಪುಡಾ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಿದ್ದರು. ನ್ಯಾಯವಾದಿ ಆಗಿರುವ ಅವರು ಚುನಾವಣ ಸಂದರ್ಭದಲ್ಲಿ ಶಾಸಕರ ಪರವಾಗಿ ಕೆಲಸ ಮಾಡಿದ್ದರು. ಇಬ್ಬರೂ ಆತ್ಮೀಯರಾಗಿದ್ದರು. ಮಾ.16ರಂದು ಪುಡಾ ಅಧ್ಯಕ್ಷರಾಗಿ ಶಾಸಕರ ಉಪಸ್ಥಿತಿಯಲ್ಲೇ ಅಧಿಕಾರ ಸ್ವೀಕರಿಸಿದ್ದರು.