Advertisement
ಪ್ರಕರಣದ ವಿವರಪುತ್ತೂರು ತಾಲೂಕಿನ ಗಡಿಭಾಗದ ರೆಂಜದಿಂದ ಒಂದೂವರೆ ಕಿ.ಮೀ. ದೂರದ ಕಾಡಿನ ಮಧ್ಯೆ ಇರುವ ವೆಂಕಟರಮಣ ಭಟ್ಟರ ಮನೆಯಲ್ಲಿ 2012ರ ಜೂ. 12ರಂದು ನಾಲ್ವರ ಕೊಲೆ ನಡೆದಿತ್ತು. ಜೋತಿಷಿ ಮತ್ತು ನಾಟಿ ವೈದ್ಯರಾಗಿದ್ದ ಕಕ್ಕೂರು ವೆಂಕರಮಣ ಭಟ್ ಅವರ ಪತ್ನಿ, ಶಿಕ್ಷಕಿ ಸಂಧ್ಯಾ, ಪುತ್ರ ಹರಿಗೋವಿಂದ, ಪುತ್ರಿಯರಾದ ವೇದ್ಯಾ, ವಿನುತಾ ಮನೆಯೊಳಗೆ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ವೆಂಕಟರಮಣ ಭಟ್ ಮಾತ್ರ ನಾಪತ್ತೆಯಾಗಿದ್ದರು. ಕೊಲೆ ಪ್ರಕರಣ ನಡೆದು 3 ದಿನಗಳ ಅನಂತರ ವಿದ್ಯುತ್ ಮೀಟರ್ ರೀಡರ್ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿತ್ತು.
ಘಟನೆ ನಡೆದ 5 ತಿಂಗಳ ಬಳಿಕ, 2012ರ ನ. 13ರಂದು ಕಕ್ಕೂರಿನ ದಟ್ಟ ಕಾಡಿನ ಮರವೊಂದರಲ್ಲಿ ಮಾನವ ಅಸ್ಥಿಪಂಜರವೊಂದು ಪತ್ತೆಯಾಗಿತ್ತು. ಇದು ನಾಪತ್ತೆಯಾಗಿದ್ದ ವೆಂಕಟರಮಣ ಅವರದ್ದಾಗಿರಬಹುದು ಎಂದು ಶಂಕಿಸಲಾಗಿತ್ತು. ಅದನ್ನು ಖಚಿತಪಡಿಸಿಕೊಳ್ಳಲು ಎಲುಬು ಹಾಗೂ ಸಹೋದರರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪುಣೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರ ವರದಿಯಲ್ಲಿ ಅಸ್ಥಿಪಂಜರ ವೆಂಕಟರಮಣ ಭಟ್ಟರದ್ದಲ್ಲ ಅನ್ನುವುದು ಸ್ಪಷ್ಟವಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖೀಸಿದ್ದಾರೆ. ಕೊಲೆಗಾರ ಯಾರು?
ನಾಲ್ವರನ್ನು ಕೊಂದ ವ್ಯಕ್ತಿ ಈ ತನಕ ಪತ್ತೆಯಾಗಿಲ್ಲ. ಮನೆ ಯಜಮಾನನ ಸುಳಿವೂ ಇಲ್ಲ. ಘಟನೆ ನಡೆದು 2 ವರ್ಷಗಳ ಬಳಿಕ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿದ್ದರೂ ಆ ತನಿಖೆಯಿಂದಲೂ ಪ್ರಕರಣವನ್ನು ಭೇದಿಸಲು ಸಾಧ್ಯವಾಗಿಲ್ಲ.
Related Articles
ಕೊಲೆ ನಡೆಯುವ ಒಂದು ವಾರದ ಮೊದಲು ಭಟ್ಟರ ಮನೆಯಲ್ಲಿ ದರೋಡೆ ನಡೆದಿತ್ತು. ಪತ್ನಿಯ 7 ಪವನ್ ಚಿನ್ನ ಹಾಗೂ ಮಕ್ಕಳ ಶಿಕ್ಷಣಕ್ಕೆ ತೆಗೆದಿರಿಸಿದ್ದ 50 ಸಾವಿರ ರೂ. ಕಳವಾಗಿದ್ದ ಬಗ್ಗೆ ಭಟ್ ಅವರು ಸಂಪ್ಯ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದಾದ ಒಂದು ವಾರದೊಳಗೆ ಸಾಮೂಹಿಕ ಕೊಲೆ, ವೆಂಕಟರಮಣ ಭಟ್ ನಾಪತ್ತೆ ಪ್ರಕರಣ ಸಂಭವಿಸಿತ್ತು.
ದರೋಡೆ ಕಟ್ಟುಕಥೆ ಎಂಬ ಅನುಮಾನ ಸಾರ್ವಜನಿಕರು, ಪೊಲೀಸರಿಂದಲೂ ವ್ಯಕ್ತವಾಗಿತ್ತು. ಆದರೆ ಕೊನೆಗೆ ದರೋಡೆ ನಿಜ ಅನ್ನುವುದು ಬಹಿರಂಗಗೊಂಡಿತ್ತು. ಕೊಲೆಯ ಬಳಿಕ ಜಿಲ್ಲೆಯಲ್ಲಿ ಅಂತಾರಾಜ್ಯ ದರೋಡೆ ಪ್ರಕರಣದ ತಂಡದ ಬಂಧನ ಆಗಿ ಕಕ್ಕೂರು ಮನೆಯಲ್ಲಿ ದರೋಡೆ ನಡೆಸಿದ್ದ ತಾವೇ ಎಂದು ಒಪ್ಪಿಕೊಂಡಿದ್ದರು. ಈ ತಂಡವೇ ಕೊಲೆ ನಡೆಸಿದ್ದಿರಬಹುದೆ ಎಂಬ ದಿಕ್ಕಿನಲ್ಲೂ ತನಿಖೆ ನಡೆದಿತ್ತು. ಆದರೆ ಅವರು ಕೃತ್ಯ ಎಸಗಿಲ್ಲ ಎನ್ನುವುದು ತನಿಖೆಯಲ್ಲಿ ಸ್ಪಷ್ಟವಾಗಿತ್ತು.
Advertisement
ಅಸ್ಥಿಪಂಜರ ಹೋಲಿಕೆ ಆಗಿದ್ದರೆ ಪ್ರಕರಣ ಮುಕ್ತಾಯಕೊಲೆ ನಡೆದ ಬಳಿಕ ಸಾವಿಗೆ ನಾಗಮಣಿ ದೋಷ ಕಾರಣ ಎನ್ನುವ ಸುದ್ದಿ ಹಬ್ಬಿತ್ತು. ಕೇರಳದಲ್ಲಿ ಪ್ರಶ್ನಾ ಚಿಂತನೆ ನಡೆಸಲು ನಿರ್ಧರಿಸಲಾಗಿತ್ತು ಎನ್ನಲಾಗಿದೆ. ಅಸ್ಥಿಪಂಜರ ವೆಂಕಟರಮಣ ಭಟ್ಟರದ್ದೇ ಆಗಿದ್ದರೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗುವ ಸಾಧ್ಯತೆ ಇತ್ತು. ಅಂದರೆ ಭಟ್ ಅವರು ಮನೆ ಮಂದಿಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದಾಖಲಿಸಿ ಪ್ರಕರಣಕ್ಕೆ ತೆರೆ ಎಳೆಯುವ ಸಾಧ್ಯತೆ ಇತ್ತು. ಆದರೆ ಡಿಎನ್‌ಎ ವರದಿಯ ಬಳಿಕ ಕೊಲೆಗಾರ ಯಾರು ಹಾಗೂ ನಾಪತ್ತೆಯಾದ ಭಟ್ಟರು ಎಲ್ಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ.