Advertisement
ಪುತ್ತೂರ ಉಳ್ಳಾಯನಾಗಿ ಭಕ್ತರ ನಂಬಿಕೆ, ಪ್ರೀತಿ, ಗೌರವಕ್ಕೆ ಪಾತ್ರವಾಗಿರುವ ಶ್ರೀ ಮಹಾಲಿಂಗೇಶ್ವರನ ದೇಗುಲವು ಕೇವಲ 273 ದಿನಗಳಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಭಕ್ತ ಸಮುದಾಯದ ನಿತ್ಯ ಕರಸೇವೆಯ ಜತೆಗೆ ನಿರ್ಮಾಣಗೊಂಡಿರುವುದು ಒಂದು ಚರಿತ್ರೆ. ಇಂತಹ ಹಲವು ಐತಿಹಾಸಿಕ ಕಾರಣದಿಂದಲೇ ಪುತ್ತೂರು ಜಾತ್ರೆ ಕೂಡ ಭಕ್ತ ಸಮುದಾಯದಲ್ಲಿ ವಿಶೇಷ ಮಹತ್ವವನ್ನು ಪಡೆದಿದೆ.
ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆ ಪ್ರತಿವರ್ಷ ಎ. 10ರಿಂದ 20ರ ತನಕ ನಡೆಯುತ್ತದೆ. ಜಾತ್ರೆಯ ಸಂದರ್ಭ ದೇವರು ದಶ ದಿಕ್ಕುಗಳಿಗೆ ಪೇಟೆ ಸವಾರಿ ಉತ್ಸವದಲ್ಲಿ ತೆರಳಿ ಭಕ್ತರ ಕಟ್ಟೆ ಪೂಜೆ ಸೇವೆಯನ್ನು ಸ್ವೀಕರಿಸುವುದು ಮತ್ತು ವರ್ಷ ಕಳೆದಂತೆ ಕಟ್ಟೆಪೂಜೆ ಸೇವೆಗಳು ಮತ್ತಷ್ಟು ವಿಜ್ರಂಭಣೆಯಿಂದ ನಡೆಯುತ್ತಿರುವುದು ಪುತ್ತೂರು ಜಾತ್ರೆಯ ವಿಶೇಷತೆಗಳಲ್ಲಿ ಒಂದು. 10 ದಿನಗಳ ಕಾಲ ಪೇಟೆ ಸವಾರಿ ನಡೆಯುವ ಜಾತ್ರೆ ದ. ಕ. ಜಿಲ್ಲೆಯ ಮಟ್ಟಿಗೆ ಧಾರ್ಮಿಕ ಚರಿತ್ರೆಯೂ ಹೌದು. ಜಾತ್ರೆಯ ವಿಶೇಷ
ಎ. 10ರಂದು ಧ್ವಜಾರೋಹಣದೊಂದಿಗೆ ಜಾತ್ರೆಗೆ ಅಧಿಕೃತ ಚಾಲನೆ ನೀಡಲಾಗುತ್ತದೆ. ಎ. 14ರಂದು ಶ್ರೀ ದೇಗುಲದಲ್ಲಿ ವಿಷು ಕಣಿ ಉತ್ಸವ ವಿಶೇಷವಾಗಿ ನಡೆದು ಅಂದು ರಾತ್ರಿ ದೇಗುಲದಲ್ಲಿ ಚಂದ್ರಮಂಡಲ ರಥೋತ್ಸವ ನಡೆಯುತ್ತದೆ. ಎ. 16ರಂದು ದೇಗುಲದ ಹೊರಾಂಗಣದಲ್ಲಿ ಸಣ್ಣ ರಥೋತ್ಸವ, ಪಲ್ಲಕ್ಕಿ ಉತ್ಸವ, ಮುತ್ತು ಬೆಳೆದ ಪುತ್ತೂರಿನ ಕೆರೆಯಲ್ಲಿ ಶ್ರೀ ದೇವರ ಕೆರೆ ಅಯನ, ಎ. 17ರ ಬೆಳಗ್ಗೆ ಶ್ರೀ ದೇಗುಲದಲ್ಲಿ ದರ್ಶನ ಬಲಿ, ಬಟ್ಟಲು ಕಾಣಿಕೆ, ಸಂಜೆ ಶ್ರೀ ದೇವರ ಬ್ರಹ್ಮರಥೋತ್ಸವ ಮತ್ತು ಸುಡುಮದ್ದು ಪ್ರದರ್ಶನ ನಡೆಯುತ್ತದೆ. ಎ. 18ರಂದು ಸಂಜೆ ವೀರಮಂಗಲ ಕುಮಾರಧಾರಾ ನದಿಗೆ ಶ್ರೀ ದೇವರ ಅವಭೃಥ ಸವಾರಿ ತೆರಳುತ್ತದೆ. ಎ. 19ರಂದು ಅವಭೃಥ ಸವಾರಿ ಮುಗಿಸಿ ದೇವರು ದೇಗುಲಕ್ಕೆ ಬಂದ ಬಳಿಕ ಧ್ವಜಾವರೋಹಣ ನಡೆಯುತ್ತದೆ. ಎ. 19ರ ರಾತ್ರಿ ಮತ್ತು ಎ. 20ರ ರಾತ್ರಿ ಮಂತ್ರಾಕ್ಷತೆ, ಅಂಕುರ ಪ್ರಸಾದ ಮತ್ತು ದೈವಗಳ ನೇಮ ನಡೆಯುತ್ತದೆ.
Related Articles
Advertisement
ಪೇಟೆ ಸವಾರಿ ಆರಂಭರಾತ್ರಿ ಅಂಕುರಾರ್ಪಣೆಯ ಬಳಿಕ ಶ್ರೀ ದೇವರ ಬಲಿ ಉತ್ಸವ ಹೊರಡುತ್ತದೆ. ಬಳಿಕ ಪೇಟೆ ಸವಾರಿಯು ಬೊಳುವಾರು, ಶ್ರೀರಾಮ ಪೇಟೆ, ಕಾರ್ಜಾಲು, ರಕ್ತೇಶ್ವರಿ ದೇವಸ್ಥಾನ, ಕಲ್ಲೇಗ, ಕರ್ಮಲ ತನಕ ತೆರಳಿ ತಡರಾತ್ರಿ ದೇವಾಲಯಕ್ಕೆ ತಲುಪಲಿದೆ. ನಲ್ಕುರಿ ಸಂಪ್ರದಾಯ
ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ ತುಳು ಪಂಚಾಂಗದಂತೆ ಹಿಂದಿನಿಂದಲೂ ನಿಗದಿತ ದಿನಗಳಂದೇ ನಡೆಯುತ್ತದೆ. ತುಳು ಧಾರ್ಮಿಕ ಸಂದರ್ಭ ಇದನ್ನು ನಲ್ಕುರಿ ಸಂಪ್ರದಾಯ ಎಂದು ಕರೆಯಲಾಗುತ್ತದೆ. ನಿಗದಿತ ದಿನಗಳಂದೇ ಧಾರ್ಮಿಕ ಉತ್ಸವಗಳು ನಡೆಯುವುದೇ ನಲ್ಕುರಿ ಸಂಪ್ರದಾಯ.