Advertisement
ಬಂಟ್ವಾಳ ತಾಲೂಕಿನ ಬಹಳ ಒಳಭಾಗ ದಲ್ಲಿರುವ ಪುಣಚ, ಕೇಪು, ಕರೋಪಾಡಿ, ಕನ್ಯಾನ ಮೊದಲಾದ ಗ್ರಾಮಗಳು ಪುತ್ತೂರಿಗೆ ಹತ್ತಿರದಲ್ಲಿದೆ. ಒಂದು ಗ್ರಾಮೀಣ ಭಾಗ ಜಿಲ್ಲೆಯಾಗಿ ಘೋಷಣೆಯಾದಾಗ ಅಭಿವೃದ್ಧಿಯ ದೃಷ್ಟಿಯಿಂದಲೂ ಬಹಳ ಪ್ರಯೋಜನ ಎನಿಸಿಕೊಳ್ಳಲಿದೆ. ಹೀಗಾಗಿ ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ, ಬಂಟ್ವಾಳ ತಾಲೂಕು ಸೇರಿಕೊಂಡು ಒಂದು ಜಿಲ್ಲೆಯಾದರೆ ಬಹಳ ಅನುಕೂಲವಾಗಲಿದೆ.
Related Articles
Advertisement
ಜಿಲ್ಲಾ ಕಚೇರಿ ಹಾಗೂ ಇತರ ಅಗತ್ಯ ವ್ಯವಸ್ಥೆಗಳಿಗೆ ಕನಿಷ್ಠ 50 ಎಕರೆ ಜಮೀನು ಗುರುತಿಸಿ ಕಾದಿರಿಸಬೇಕು. ಈಗಾಗಲೇ ಮಂಗಳೂರು ಕೇಂದ್ರ ಕಮಿಷನರೇಟ್ ವ್ಯಾಪ್ತಿಯೊಳಗೆ ಸೇರಿದ್ದು ಭವಿಷ್ಯದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಗ್ರಾಮಾಂತರ ವ್ಯಾಪ್ತಿಗೆ ವರ್ಗ ಆಗಲೆಬೇಕಿದೆ. ಏಕೆಂದರೆ ಈಗಾಗಲೇ ಎಸ್ಪಿ ಕಚೇರಿ ವ್ಯಾಪ್ತಿ ಸಂಪಾಜೆ, ಗುಂಡ್ಯ ಘಾಟಿ ತನಕವಿದೆ. ಜನರಿಗೆ ಸಂಪಾಜೆಯಿಂದ ಮಂಗಳೂರಿಗೆ ಹೋಗಿ ಬರುವುದೇ ದೊಡ್ಡ ಸವಾಲು. ಪುತ್ತೂರು ಕೇಂದ್ರ ಸ್ಥಾನವಾಗಿ ಎಸ್ಪಿ ಕಚೇರಿ ಸ್ಥಾಪನೆಯಾದರೆ ಜನಸಾಮಾನ್ಯರಿಗೆ, ಆಡಳಿತ ನಿರ್ವಹಣೆಗೆ ಅನುಕೂಲ.
ಈ ಹಿಂದೆ ಜಿಲ್ಲೆಗೆ ಪೂರಕವಾಗಿ ಮಹಿಳಾ ಕಾಲೇಜು ಕಟ್ಟಡಕ್ಕೆ 5 ಕೋ.ರೂ., ಕ್ರೀಡಾಂಗಣ ನಿರ್ಮಾಣಕ್ಕೆ 3 ಕೋ. ರೂ.ಅನುದಾನ ಮಂಜೂರು ಮಾಡಿಸಿದ್ದೆ. ಆದರೆ ಆ ಕಾಮಗಾರಿ ವೇಗ ಪಡೆದಿಲ್ಲ. ಜಿಲ್ಲಾ ಕೇಂದ್ರ ರಚನೆಯನ್ನು ರಾಜಕೀಯ ದೃಷ್ಟಿ ಯಿಂದ ನೋಡದೆ ಎಲ್ಲರೂ ಒಮ್ಮತದಿಂದ ಒತ್ತಡ ಹೇರುವ ಕೆಲಸ ಆಗಬೇಕು. -ಶಕುಂತಳಾ.ಟಿ ಶೆಟ್ಟಿ ಮಾಜಿ ಶಾಸಕಿ, ಪುತ್ತೂರು
ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ :
ಸುಳ್ಯ: ಮಂಗಳೂರು ವಾಣಿಜ್ಯವಾಗಿ ಬಹಳ ಮುಂದುವರೆದಿದ್ದು ಅದರ ಮೇಲಿನ ಒತ್ತಡ ಹೆಚ್ಚಾಗಿದೆ. ಮಂಗಳೂರಿನ ವಾತಾವರಣವು ಒತ್ತಡದಿಂದ ಕೂಡಿದ್ದು ಜಿಲ್ಲಾ ಕೇಂದ್ರವಾಗಿ ಅದು ಇನ್ನಷ್ಟು ವಿಸ್ತಾರಗೊಂಡರೆ ಅಲ್ಲಿನ ಬದುಕು ದುಸ್ತರವಾಗುವ ಸಂಭವವಿದೆ. ಎಲ್ಲ ನಿಟ್ಟಿನಲ್ಲಿಯೂ ಮಂಗಳೂರಿನ ಬೆಳವಣಿಗೆ ಪರಿಸರಕ್ಕೆ ಪೂರಕವಾಗಿಲ್ಲ. ಇದು ಮುಂದೆ ಸಮಸ್ಯೆಗೂ ಕಾರಣವಾಗಬಹುದು.
ಇದಕ್ಕೆ ಪರ್ಯಾಯವಾಗಿ ಪುತ್ತೂರನ್ನು ಜಿಲ್ಲಾ ಕೇಂದ್ರ ಮಾಡಿದರೆ ಇಲ್ಲಿನ ಜನಸಾಮಾನ್ಯರಿಗೆ, ರೈತರಿಗೆ ಹಾಗೂ ವಾಣಿಜ್ಯ ಉದ್ಯಮಕ್ಕೂ ಬಹಳ ಪ್ರಯೋಜನವಾಗಲಿದೆ. ಶಿವರಾಮ ಕಾರಂತರು ಓಡಾಡಿದ ಈ ತಪೋ ಭೂಮಿಯಲ್ಲಿ ಕನ್ನಡದ ಪ್ರೇಮವೂ ಉತ್ತಮವಾಗಿದೆ. ಪುತ್ತೂರು ಜಿಲ್ಲೆಯಾದರೆ ಇಲ್ಲಿನ ಸ್ಥಳೀಯ ಸಾಹಿತ್ಯ, ಕಲೆ, ಕ್ರೀಡಾ ಕ್ಷೇತ್ರಗಳು ಅಭಿವೃದ್ಧಿಯಾಗಿ ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ದಂತಾಗುತ್ತದೆ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರಕ್ಕೆ ಹತ್ತಿರವಾಗಿ ಮಂಗಳೂರಿನ ಪ್ರತಿಭೆಗಳಿಗೆ ಉತ್ತಮ ಅವಕಾಶಗಳು ಸಿಗುತ್ತಿವೆ.
ಇತರ ಆರ್ಥಿಕ, ಸಾಮಾಜಿಕ ಅಭಿವೃದ್ಧಿಯ ಜತೆಗೆ ಪುತ್ತೂರಿನಲ್ಲಿ ಒಂದು ಸರಕಾರಿ ಬಾನುಲಿ ಕೇಂದ್ರ, ದೂರದರ್ಶನ ಕೇಂದ್ರ, ಇತರ ಸಾಂಸ್ಕೃತಿಕ-ಕ್ರೀಡಾ ವ್ಯವಸ್ಥೆಗಳು ಆಗಬೇಕು. ಈ ಎಲ್ಲದರಿಂದ ಮಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗಲಿದೆ. ಶೀಘ್ರ ಪುತ್ತೂರು ಜಿಲ್ಲಾ ಕೇಂದ್ರ ವಾಗಲಿ ಎಂಬುದು ನನ್ನ ಆಶಯ. -ಪ್ರಭಾಕರ ಶಿಶಿಲ ಹಿರಿಯ ವಿದ್ವಾಂಸರು
ಸರ್ವಾಂಗೀಣ ಪ್ರಗತಿಗೆ ಹೊಸ ಆಯಾಮ :
ಪುತ್ತೂರು ಜಿಲ್ಲೆಯಾದರೆ ಅಥವಾ ಆಗಲಿ ಎಂಬ ನಿಲುವಿನಲ್ಲಿ ಹತ್ತು ಹಲವಾರು ಆಕಾಂಕ್ಷೆಗಳಿವೆ. ಗ್ರಾಮೀಣ ಭಾಗದ ಪ್ರದೇಶವಾರು ಅಭಿವೃದ್ಧಿಗೆ ಮಹತ್ತರ ಅನುದಾನಗಳು ಲಭ್ಯವಾಗಲಿದೆ. ಬೆಳ್ತಂಗಡಿ ಬಹು ವಿಸ್ತೃತ ಪ್ರದೇಶವಾದ್ದರಿಂದ ಪ್ರಗತಿಗೆ ಹೊಸ ಆಯಾಮ ತರಲಿದೆ. ಜಿಲ್ಲಾ ನ್ಯಾಯಾಲಯ ವ್ಯವಸ್ಥೆ, ಜಿಲ್ಲಾಧಿಕಾರಿಗಳು ಜನರಿಗೆ ಮತ್ತಷ್ಟು ಹತ್ತಿರವಾಗುವ ಜತೆಗೆ, ಒಳ ರಸ್ತೆಗಳು ಮೇಲ್ದರ್ಜೆಗೇರುವುದರೊಂದಿಗೆ ಮೂಲಸೌಕರ್ಯಕ್ಕೆ ಪ್ರತ್ಯೇಕ ಆದ್ಯತೆಗಳು ನಮ್ಮ ಪಾಲಾಗಲಿದೆ. ಪುತ್ತೂರಿಗೆ ಹೊಂದಿಕೊಂಡಂತೆ ಇರುವ ಹಲವು ತಾಲೂಕುಗಳ ಪ್ರಗತಿಗೆ ಹೊಸ ಭಾಷ್ಯ ಬರೆಯಲಿದೆ.-ಬಿ.ಕೆ.ಧನಂಜಯ ರಾವ್, ನ್ಯಾಯವಾದಿಗಳು
ನಿಮ್ಮ ಅಭಿಪ್ರಾಯ :
ಐದು ಗ್ರಾಮಾಂತರ ತಾಲೂಕುಗಳನ್ನು ಒಳಗೊಂಡು ಪುತ್ತೂರು ಜಿಲ್ಲೆಯಾಗಬೇಕೆಂಬುದು ಬಹುಕಾಲದ ಬೇಡಿಕೆ. ಈ ಕುರಿತು ನಿಮ್ಮ ಅಭಿಪ್ರಾಯ ಬರೆದು ನಿಮ್ಮ ಭಾವಚಿತ್ರದೊಂದಿಗೆ ವಾಟ್ಸ್‌ಆ್ಯಪ್ ಮಾಡಿ : 9148594259