ಮಂಗಳೂರು: ಕರಾವಳಿ ಮತ್ತು ಮಲೆನಾಡಿನ ನಡುವೆ, ಎರಡೂ ಪ್ರದೇಶಗಳ ವೈಶಿಷ್ಟ್ಯಗಳನ್ನು ತನ್ನ ಮಡಿಲಲ್ಲಿ ತುಂಬಿಕೊಂಡಿದೆ ಪುತ್ತೂರು ವಿಧಾನಸಭಾ ಕ್ಷೇತ್ರ. ಪುತ್ತೂರಿನ ಚುನಾವಣಾ ಕಣವೆಂದರೆ ಅದು ರಾಷ್ಟ್ರ ಮತ್ತು ರಾಜ್ಯ ರಾಜಕಾರಣದ ಗಮನ ಸೆಳೆಯುವಷ್ಟು ಪ್ರಮುಖವಾಗಿರುತ್ತದೆ.
ತೆಂಗು ಕಂಗು ಬಾಳೆ ಗೇರು ಭತ್ತ ಕೋಕೋ ಬೆಳೆಗಳ ಸಮೃದ್ಧಿ. ಅಡಿಕೆ ಕೃಷಿಯೇ ಪ್ರಧಾನ. ಈ ಮೂಲಕ ದೇಶದ ಆರ್ಥಿಕತೆಗೆ ಗಣನೀಯ ಕೊಡುಗೆ ಇಲ್ಲಿಂದ ದೊರೆಯುತ್ತದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಪುರಾಣ-ಇತಿಹಾಸ ಪ್ರಸಿದ್ಧಿ. ಸರ್ವ ಧರ್ಮ ಸಮನ್ವಯ ಪ್ರದೇಶ. ಶಿಕ್ಷಣ ಕ್ಷೇತ್ರದಲ್ಲಿಯೂ ಸಾಧನೆ. ಪ್ರತಿಷ್ಠಿತ ಕ್ಯಾಂಪ್ಕೋ ಚಾಕ್ಲೇಟ್ ಫ್ಯಾಕ್ಟರಿಯೂ ಇಲ್ಲಿದೆ. ಪ್ರವಾಸೋದ್ಯಮ ಅಭಿವೃದ್ಧಿಗೂ ವ್ಯಾಪಕ ಅವಕಾಶಗಳಿವೆ.
80ರ ದಶಕದ ಅವಿಭಜಿತ ಜಿಲ್ಲೆಯ ಅನೇಕ ರಾಜಕೀಯ ಸ್ಥಿತ್ಯಂತರಗಳು ಪುತ್ತೂರು ಕ್ಷೇತ್ರವನ್ನು ಕೂಡ ಪ್ರಭಾವಿಸಿದವು. ಪುತ್ತೂರಿನ ಶಾಸಕರಾಗಿದ್ದ ವಿನಯ ಕುಮಾರ್ ಸೊರಕೆ (ಕಾಂಗ್ರೆಸ್) ಮುಂದೆ ಸಂಸದರಾಗಿದ್ದರು. ಅಂತೆಯೇ ಡಿ. ವಿ. ಸದಾನಂದ ಗೌಡ (ಬಿಜೆಪಿ) ಅವರು ಮುಂದೆ ಮುಖ್ಯಮಂತ್ರಿಯಾದರು; ಸಂಸದರಾಗಿ ಈಗ ಕೇಂದ್ರ ಸಚಿವರು. ಹಾಲಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿಯಾಗಿದ್ದಾರೆ. ಪುತ್ತೂರು ಕ್ಷೇತ್ರವೆಂದಾಗ ಉರಿಮಜಲು ರಾಮ ಭಟ್ ಅವರ ಹೆಸರು ಉಲ್ಲೇಖವಾಗುತ್ತದೆ: 1957ರಿಂದ 1985ರವರೆಗೆ ಅವರು 7 ಬಾರಿ; ಲೋಕಸಭೆಗೆ 2 ಬಾರಿ ಸ್ಪರ್ಧಿಸಿದವರು.
ಬಿ. ವಿಠಲದಾಸ ಶೆಟ್ಟಿ, ಎ. ಶಂಕರ ಆಳ್ವ ಅವರು ಪುತ್ತೂರಿನಿಂದ ಗೆದ್ದು, ಸೊರಕೆ ಅವರು ಕಾಪುವಿನಿಂದ ಗೆದ್ದು ಸಚಿವರಾದವರು. 1952ರಲ್ಲಿ ಆಗಿನ ಸುಳ್ಯ ಸಹಿತ ಇದು ದ್ವಿಸದಸ್ಯ (ಎರಡು ಸ್ಥಾನ) ಕ್ಷೇತ್ರವಾಗಿತ್ತು. 1957ರಲ್ಲೂ ಇದೇ ಸ್ವರೂಪವಿದ್ದು 1962ರಲ್ಲಿ ಪುತ್ತೂರು ಕ್ಷೇತ್ರ ಪ್ರತ್ಯೇಕವಾಯಿತು.
ಈವರೆಗೆ ಇಲ್ಲಿ ಕೂಜುಗೋಡು ವೆಂಕಟರಮಣ ಗೌಡರು 3 ಬಾರಿ, ಡಿ.ವಿ. ಸದಾನಂದ ಗೌಡ, ವಿನಯ ಕುಮಾರ್ ಸೊರಕೆ, ಶಕುಂತಳಾ ಶೆಟ್ಟಿ ತಲಾ 2 ಬಾರಿ; ಕೆ. ಈಶ್ವರ, ಬಿ. ವಿಠಲದಾಸ ಶೆಟ್ಟಿ, ಕೆ. ರಾಮ ಭಟ್, ಸುಬ್ಬಯ್ಯ ನಾಯ್ಕ, ಮಲ್ಲಿಕಾ ಪ್ರಸಾದ್ ತಲಾ ಒಂದು ಬಾರಿ ಜಯಿಸಿದ್ದಾರೆ. ಈ ಬಾರಿ ಪುತ್ತೂರಿನಲ್ಲಿ ಸ್ಪರ್ಧಾ ಕಣದಲ್ಲಿರುವವರು: ಶಕುಂತಳಾ ಶೆಟ್ಟಿ (ಕಾಂ.), ಸಂಜೀವ ಮಠಂದೂರ್ (ಬಿಜೆಪಿ), ಐ.ಸಿ. ಕೈಲಾಸ್ (ಜೆಡಿಎಸ್), ಶೇಖರ (ಪ್ರ.ಪ. ಪಕ್ಷ), ಮಜೀದ್ (ಜೆಡಿಯು), ಸೇಷಪ್ಪ ರಾವ್ (ಸಾ. ಜನತಾಪಕ್ಷ), ಶಬನಾ (ಎಂಇಪಿ), ಅಮರನಾಥ ಬಪ್ಪಳಿಗೆ, ಅಬ್ದುಲ್ ಬಶೀರ್, ಬುಡಿಯಾರ್, ಬಿ.ಎಸ್. ಚೇತನ್ ಕುಮಾರ್, ವಿದ್ಯಾಶ್ರೀ (ಪಕ್ಷೇತರರು). 2004ರಲ್ಲಿ ಇಲ್ಲಿ 1,62,895 ಮತದಾರರಿದ್ದರು. ಈ ಬಾರಿ 2,01,884 ಮತದಾರರಿದ್ದಾರೆ.
ಅಂದ ಹಾಗೆ …
ಪುತ್ತೂರು ಕ್ಷೇತ್ರದಲ್ಲಿ 2004ರಿಂದ ಈವರೆಗೆ ಮಹಿಳಾ ಪ್ರಾತಿನಿಧ್ಯ! 2004ರಲ್ಲಿ ಬಿಜೆಪಿಯಿಂದ ಶಕುಂತಳಾ ಶೆಟ್ಟಿ; 2008ರಲ್ಲಿ ಬಿಜೆಪಿಯಿಂದ ಮಲ್ಲಿಕಾ ಪ್ರಸಾದ್ ಜಯಿಸಿದರೆ 2013ರಲ್ಲಿ ಶಕುಂತಳಾ ಶೆಟ್ಟಿ ಕಾಂಗ್ರೆಸ್‌ನಿಂದ ಗೆದ್ದರು. ಶೆಟ್ಟಿ ಈ ಬಾರಿ ಸತತ 4ನೆಯ ಬಾರಿ ಕಣದಲ್ಲಿದ್ದಾರೆ. 2008ರಲ್ಲಿ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಇಲ್ಲಿ ಪುರುಷರಿಗಿಂತ 643 ಹೆಚ್ಚು ಮಹಿಳಾ ಮತದಾರರಿದ್ದಾರೆ (1,01,262).
ಮನೋಹರ ಪ್ರಸಾದ್