Advertisement

ಪುತ್ತೂರು: ಜಲಸಿರಿ ಯೋಜನೆಗೆ ವಿಘ್ನ

12:36 AM May 15, 2020 | Sriram |

ವಿಶೇಷ ವರದಿ- ಪುತ್ತೂರು: ಪುತ್ತೂರಿಗೆ ಮಂಜೂರುಗೊಂಡು ಆರಂಭವಾಗಿರುವ 113.08 ಕೋಟಿ ರೂ. ವೆಚ್ಚದ ನಗರದ ಎಲ್ಲ ಪ್ರದೇಶಗಳಿಗೆ ನಿರಂತರ ನೀರು ಸರಬರಾಜು ಮಾಡುವ ಜಲಸಿರಿ ಯೋಜನೆಯ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲು ಲಾಕ್‌ಡೌನ್‌, ಕಾರ್ಮಿಕರ ಕೊರತೆ ಅಡ್ಡಿಯಾಗಿದೆ.

Advertisement

24×7 ನಿರಂತರ ನೀರು ಸರಬರಾಜು ಮಾಡುವ ಮೂಲಕ ಸೇವಾ ಮಟ್ಟವನ್ನು ಉತ್ತಮಪಡಿಸುವ ಯೋಜನೆ ಇದಾಗಿದ್ದು, 71.46 ಕೋಟಿ ರೂ. ಕಾಮಗಾರಿ ವೆಚ್ಚ ಮತ್ತು 41.62 ಕೋಟಿ ರೂ. 8 ವರ್ಷದ ನಿರ್ವಹಣ ವೆಚ್ಚವಿರಲಿದೆ. 2020ರ ಡಿಸೆಂಬರ್‌ ಒಳಗಾಗಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ನಗರಸಭೆ ಹೇಳಿದ್ದರೂ ಕೋವಿಡ್ 19 ಹಿನ್ನೆಲೆಯಲ್ಲಿ ಸಂದೇಹ ಕಾಡುತ್ತಿದೆ.

ಕಾಮಗಾರಿ ಸ್ಥಗಿತ
ಜಲಸಿರಿ ಯೋಜನೆಯಂತೆ ಈಗ ಇರುವುದಕ್ಕಿಂತಲೂ ಹೆಚ್ಚುವರಿ ಸಾಮರ್ಥ್ಯದ ಯಂತ್ರ ಬಳಸಿ ನೆಕ್ಕಿಲಾಡಿ ಅಣೆಕಟ್ಟಿನಿಂದ ಎತ್ತಲಾಗುವ ನೀರನ್ನು ರೇಚಕ ಸ್ಥಾವರದಲ್ಲಿ ಶುದ್ಧೀಕರಿಸಿ ನಗರಕ್ಕೆ ಪೂರೈಸಲಾಗುತ್ತದೆ. ಈ ಯೋಜನೆಯಲ್ಲಿ ನೆಕ್ಕಿಲಾಡಿಯಿಂದ ಎಕ್ಸ್‌ಪ್ರೆಸ್‌ ಫೀಡರ್‌ನ ವಿದ್ಯುತ್‌ ಬಳಸಿ ನೀರು ಸರಬರಾಜಾಗಲಿದೆ. ಆದರೆ ನಗರ ವ್ಯಾಪ್ತಿಯೊಳಗೆ ವಿದ್ಯುತ್‌ ಬಳಸದೆ ಭೌಗೋಳಿಕವಾದ ಇಳಿಜಾರನ್ನು ಬಳಸಿ ನೀರು ಪೂರೈಸಲಾಗುವುದು. ನಗರದೊಳಗೆ ಮಾತ್ರ ಪ್ರತ್ಯೇಕ ಪೈಪ್‌ಲೈನ್‌ ಅಳವಡಿಕೆ, 4 ಓವರ್‌ಹೆಡ್‌ ಟ್ಯಾಂಕ್‌ ನಿರ್ಮಾಣ ನಡೆಯಲಿದೆ. 2019ರ ಸೆಪ್ಟಂಬರ್‌ನಲ್ಲಿ ಆರಂಭಗೊಂಡ ನೆಕ್ಕಿಲಾಡಿ ಯಿಂದ ನಗರದವರೆಗೆ ಅಳವಡಿ ಸುವ ಪೈಪ್‌ಲೈನ್‌ ಕಾಮಗಾರಿ ಫೆ. ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಕಾರ್ಮಿಕರ ಕೊರತೆ, ಸ್ಥಗಿತಗೊಂಡಿದ್ದ ಕಾಮಗಾರಿಗೆ ಅನುಮತಿ ಸಿಗದೆ ಅರ್ಧಕ್ಕೆ ನಿಂತಿದೆ. ಶೇ. 50 ಪೈಪ್‌ ಅಳವಡಿಸುವ ಕಾಮಗಾರಿ ಪೂರ್ಣಗೊಂಡರೂ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಉಳಿದ ಕಾಮಗಾರಿ ಸ್ಥಗಿತವಾಗಿದೆ.

ಸೋರಿಕೆಯೂ ಸಮಸ್ಯೆ
2003-04ರಲ್ಲಿ ಪುತ್ತೂರು ಪುರಸಭೆ (ಇಂದಿನ ನಗರಸಭೆ) ಏಶ್ಯನ್‌ ಡೆವಲಪ್‌ ಮೆಂಟ್‌ ಬ್ಯಾಂಕ್‌ನಿಂದ ಸಾಲ ಪಡೆದು ನಿರ್ಮಿಸಿದ ನೆಕ್ಕಿಲಾಡಿ ಕುಮಾರಧಾರಾ ಅಣೆ ಕಟ್ಟಿನಲ್ಲಿ ನೀರು ನಿರಂತರ ಸೋರಿಕೆಯಾಗಿ 630 ಎಂಎಲ್‌ಡಿ ನೀರು ಶೇಖರಣೆ ಸಾಮರ್ಥ್ಯದ ನೆಕ್ಕಿಲಾಡಿ ಡ್ಯಾಂ ಖಾಲಿಯಾಗುತ್ತಿದೆ. 67 ಕೋಟಿ ರೂ.ಯೋಜನೆ ಈಗ 113.08 ಕೋಟಿ ರೂ.ಗೆ ಏರಿಕೆಯಾದರೂ ನೆಕ್ಕಿಲಾಡಿ ಡ್ಯಾಂ ದುರಸ್ತಿ,ನೆಕ್ಕಿಲಾಡಿಯಿಂದ ನಗರದ ವರೆಗಿನ ಪೈಪ್‌ಲೈನ್‌ ಬದ ಲಾವಣೆ ಇಲ್ಲ. ಜತೆಗೆ ಸೋರುತ್ತಿರುವ ನೆಕ್ಕಿಲಾಡಿ ಡ್ಯಾಂ ದುರಸ್ತಿಗೆ ಇನ್ನೂ ಕ್ರಮ ಕೈಗೊಂಡಿಲ್ಲ.

 ನಿರೀಕ್ಷಿತ ವೇಗ ದೊರೆತಿಲ್ಲ
ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೆಲವು ದಿನ ಕಾಮಗಾರಿ ಸ್ಥಗಿತಗೊಂಡಿದ್ದು, ಈಗ ಆರಂಭಗೊಂಡಿದೆ. ಆದರೆ ಕಾರ್ಮಿಕರ ಕೊರತೆ ಇದೆ. ಈ ಕಾರಣ ದಿಂದ ನಿರೀಕ್ಷಿತ ವೇಗದಲ್ಲಿ ಕಾಮಗಾರಿ ಮುಗಿಸಲು ಅಸಾಧ್ಯ.
-ರೂಪಾ ಟಿ. ಶೆಟ್ಟಿ,
ಪೌರಾಯುಕ್ತೆ, ಪುತ್ತೂರು ನಗರಸಭೆ

Advertisement
Advertisement

Udayavani is now on Telegram. Click here to join our channel and stay updated with the latest news.

Next