Advertisement

ಪುತ್ತೂರು ದೇಗುಲದ ಧ್ವಜಮರ ಕೆಲಸ ಶುರು

02:57 PM Nov 05, 2018 | |

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧ್ವಜಮರದ ಕೆಲಸ ಭರದಿಂದ ಸಾಗುತ್ತಿದೆ. ಸುಳ್ಯದ ಕುಕ್ಕುಜಡ್ಕದಿಂದ ದರ್ಬೆಗೆ ಮರವನ್ನು ತಂದು, ಅಲ್ಲಿಂದ ಮೆರವಣಿಗೆ ಮೂಲಕ ದೇಗುಲದ ವಠಾರಕ್ಕೆ ಅ. 29 ರಂದು ತರಲಾಗಿತ್ತು. ದೇವಸ್ಥಾನದ ಎಡಬದಿಯಲ್ಲಿ ಇರಿಸಲಾಗಿದ್ದ ಮರಕ್ಕೆ, 70 ಅಡಿ ಉದ್ದ ಹಾಗೂ 10 ಅಡಿ ಅಗಲದ ಶೀಟ್‌ಗಳ ಛಾವಣಿ ಮಾಡಲಾಗಿದೆ. ಬಿಸಿಲಿನ ಝಳಕ್ಕೆ ಮರ ಹಾಳಾಗದಂತೆ ಹಾಗೂ ಕೆಲಸಕ್ಕೆ ತೊಂದರೆ ಆಗದಂತೆ ತಾತ್ಕಾಲಿಕ ಛಾವಣಿ ನಿರ್ಮಿಸಲಾಗಿದೆ.

Advertisement

ಮರದ ಪ್ರಾಥಮಿಕ ಹಂತದ ಕೆಲಸವಷ್ಟೇ ಇದೀಗ ನೆರವೇರಿದೆ. ಶ್ರೀ ಮಹಾಲಿಂಗೇಶ್ವರ ದೇವರ ನಡೆಯಲ್ಲಿ ಪ್ರಾರ್ಥನೆ ಸಲ್ಲಿಸಿ, ಬಳಿಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್‌. ಸುಧಾಕರ ಶೆಟ್ಟಿ ಚಾಲನೆ ನೀಡಿದರು. ಇದೀಗ ಧ್ವಜ ಮರವನ್ನು ಚೌಕಾಕಾರದಲ್ಲಿ ಕೆತ್ತನೆ ಮಾಡಲಾಗಿದೆ. ಮುಂದೆ ಇದನ್ನು ವೃತ್ತಾಕಾರಕ್ಕೆ ಕೆತ್ತನೆ ಮಾಡಲಾಗುವುದು. ಕೊಡಿ ಮರವನ್ನು ಅಂತಿಮವಾಗಿ ಸಿದ್ಧಪಡಿಸಲು ಯಂತ್ರದ ಸಹಾಯದಿಂದ ಕೆತ್ತನೆ ಕೆಲಸಗಳು ನಡೆಯಲಿವೆ.

ಕಿರಾಲ್‌ಬೋಗಿ ಮರ
ಧ್ವಜಮರಕ್ಕೆ ಚೆನ್ನಾಗಿ ಬಲಿತಿರುವ ಕಿರಾಲ್‌ಬೋಗಿ ಮರವನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಕೆತ್ತನೆಯ ಕೆಲಸವನ್ನು ತ್ವರಿತವಾಗಿ ಮಾಡಿ ಮುಗಿಸುವ ಸನ್ನಾಹ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಎಪ್ರಿಲ್‌ ನಲ್ಲಿ ನಡೆಯುವ ಜಾತ್ರೆಗೆ ಮೊದಲು ಧ್ವಜಮರದ ಪ್ರತಿಷ್ಠೆ ನಡೆಸುವ ಬಗ್ಗೆ ಮಾತುಕತೆ ನಡೆದಿದೆ. ಇನ್ನೊಂದೆಡೆ ಧ್ವಜಮರ ಪ್ರತಿಷ್ಠಾಪಿಸಲು ತರಾತುರಿ ಏಕೆ ಎಂಬ ಪ್ರಶ್ನೆಯೂ ಮೂಡಿದೆ. ಒಂದು ಧ್ವಜಮರ ಕೆಲವೇ ವರ್ಷಗಳಲ್ಲಿ ಹಾಳಾಗಿ ಹೋಗಿದೆ. ಮತ್ತೊಮ್ಮೆ ಇಂತಹ ಪ್ರಮಾದಕ್ಕೆ ಅವಕಾಶ ಮಾಡಿಕೊಡ ಬಾರದು ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ನುರಿತ ಶಿಲ್ಪಿಗಳು
ಕೊಡಿಮರದ ಕೆತ್ತನೆಯ ಕೆಲಸವನ್ನು ನುರಿತ ಶಿಲ್ಪಿ ಹರೇಕಳ ಬಾಲಕೃಷ್ಣ ಆಚಾರ್ಯ ಮತ್ತು ತಂಡದವರು ನಡೆಸುತ್ತಿದ್ದಾರೆ. ಕೊಡಿಪ್ಪಾಡಿ  ಧೀರಜ್‌ ಗೌಡ ಮತ್ತು ತಂಡದವರು ಕೆತ್ತನೆಯ ಕಾಮಗಾರಿಗೆ ಸಹಕಾರ ನೀಡುತ್ತಿದ್ದಾರೆ. ದೇವಸ್ಥಾನದ ವಾಸ್ತು ಎಂಜಿನಿಯರ್‌ ಪಿ.ಜಿ. ಜಗನ್ನಿವಾಸ್‌ ರಾವ್‌ ಮಾರ್ಗದರ್ಶನದಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಮರದ ಮೇಲ್ಮೈಯನ್ನು ಸವರಲಾಗಿದೆ. ಮರದ ತಿರುಳು ಹಾಗೂ ತಿರುಳಿನ ಹೊರ ಕವಚ ಸರಿಯಾಗಿ ಒಣಗಲು ಸಹಾಯ ಆಗುವಂತೆ ಕೆತ್ತನೆ ಕೆಲಸಗಳು ನಡೆಯುತ್ತಿವೆ. ಮರವನ್ನು ಅಂತಿಮವಾಗಿ ನುಣುಪು ಮಾಡಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next