Advertisement

ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಯಲ್ಲಿ ತಾರತಮ್ಯ

02:15 AM Nov 23, 2018 | Karthik A |

ಪುತ್ತೂರು: ಕ್ರಿಯಾಯೋಜನೆ ತಯಾರಿಸಿ ಕಳುಹಿಸಿಕೊಡುವ ಸಂದರ್ಭ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಾರತಮ್ಯ ಮಾಡಲಾಗಿದೆ ಎನ್ನುವ ವಿಚಾರ ಗುರುವಾರ ಪುತ್ತೂರು ತಾ.ಪಂ. ಸಾಮಾನ್ಯ ಸಭೆಯಲ್ಲಿ ಚರ್ಚೆಯಾಯಿತು. ಸದಸ್ಯರು ಆರೋಪ, ಪ್ರತ್ಯಾರೋಪ ಮಾಡಿದರು. ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ಪಾಲನ ವರದಿಯ ಚರ್ಚೆಗೂ ಮುನ್ನ ವಿಷಯ ಪ್ರಸ್ತಾವಿಸಿದ ಸದಸ್ಯ ಫಝಲ್‌ ಕೋಡಿಂಬಾಳ, ಕಳೆದ ಸಭೆಯ ಕೊನೆಯಲ್ಲಿ ತಾ.ಪಂ.ನ ಕ್ರಿಯಾ ಯೋಜನೆಯ ಕುರಿತು ಮಾತನಾಡುವಾಗ ಉತ್ತರಿಸದೆ ತರಾತುರಿಯಲ್ಲಿ ವಂದನೆ ಹೇಳಿ ಸಭೆಯನ್ನು ಮುಗಿಸಲಾಗಿದೆ ಎಂದರು. ಸಮಯ ಮೀರಿದ ಕಾರಣ ಸಭೆಯನ್ನು ಮುಗಿಸುವ ಅನಿವಾರ್ಯತೆ ಇತ್ತು. ಕ್ರಿಯಾಯೋಜನೆಯನ್ನು ಜಿ.ಪಂ.ಗೆ ಕಳುಹಿಸಿ ಕೊಡಲಾಗಿದೆ ಎಂದು ಇಒ ಜಗದೀಶ್‌ ತಿಳಿಸಿದರು.

Advertisement

ವಂಚನೆಯಾಗಿದೆ
ಕ್ರಿಯಾಯೋಜನೆಯಲ್ಲಿ ಯಾವುದನ್ನು ಸೇರಿಸಲಾಗಿದೆ ಮತ್ತು ಯಾವುದನ್ನು ಸೇರಿಸಿಲ್ಲ ಎನ್ನುವ ಕುರಿತು ನಮಗೆ ಮಾಹಿತಿ ಇಲ್ಲ. ಕ್ರಿಯಾಯೋಜನೆ ಕಳುಹಿಸುವಾಗಲೂ ತುಂಬಾ ತಡವಾಗಿದೆ. ನಮ್ಮ ಭಾಗದ ಅಭಿವೃದ್ಧಿಯ ಕುರಿತು ನಮಗೆ ಒತ್ತಡವಿದೆ. ಇಲ್ಲಿ ವ್ಯವಸ್ಥೆ ತಪ್ಪಿದೆ. ಅನುದಾನ ಹಂಚಿಕೆಯ ಕುರಿತು ನಮಗೆ ಅನುಮಾನವಿದೆ. ಕಡಬಕ್ಕೆ ಬರುವ ಅನುದಾನದಲ್ಲಿ ವಂಚನೆಯಾಗಿದೆ ಎಂದು ಫಝಲ್‌ ಕೋಡಿಂಬಾಳ ಆರೋಪಿಸಿದರು. ಹಂಚಿಕೆಯ ಪಟ್ಟಿ ಕೊಡಿ ಎಂದು ಒತ್ತಾಯಿಸಿದರು. ಸದಸ್ಯರಾದ ಉಷಾ ಅಂಚನ್‌, ಆಶಾ ಲಕ್ಷ್ಮಣ್‌ ಬೆಂಬಲ ವ್ಯಕ್ತಪಡಿಸಿದರು. ಎಲ್ಲ ಸದಸ್ಯರಿಗೂ ಸಮಾನವಾಗಿ ಅನುದಾನ ಹಂಚಿಕೆಯ ಕ್ರಿಯಾ ಯೋಜನೆ ಮಾಡಲಾಗಿದೆ ಎಂದು ಅಧ್ಯಕ್ಷರು ಹೇಳಿದರು.

ಗೊಂದಲ ಮಾಡಬೇಡಿ
ತಾ.ಪಂ. ಇಒ ಜಗದೀಶ್‌ ಮಾತನಾಡಿ, ಯಾವುದೇ ರೀತಿಯ ವಂಚನೆಯೂ ಯಾವುದೇ ಸದಸ್ಯರಿಗೂ ಆಗಿಲ್ಲ. ಕ್ರಿಯಾಯೋಜನೆ ಅಂಗೀಕಾರವಾಗಿ ಬಂದಾಗ ಎಲ್ಲವೂ ತಿಳಿಯುತ್ತದೆ. ಈ ಕುರಿತು ಮಾಹಿತಿ ಹಕ್ಕಿನಲ್ಲೂ ಪ್ರಶ್ನೆ ಮಾಡಬಹುದು. ಏನೇನೋ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಟಿಸುವುದು ಬೇಡ ಎಂದರು.

ಮರಳಿನ ಚರ್ಚೆ
ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ವ್ಯಾಪಕವಾಗಿದೆ. ಈ ಕುರಿತು ತಾ.ಪಂ.ನಲ್ಲಿ ಹಿಂದಿನ ಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ಏನು ಉತ್ತರ ಲಭಿಸಿದೆ ಎಂದು ಸದಸ್ಯರು ಕಂದಾಯ ಇಲಾಖೆಗೆ ಪ್ರಶ್ನಿಸಿದರು. ಉಪ ತಹಶೀಲ್ದಾರ್‌ ಶ್ರೀಧರ್‌ ಕೋಡಿಜಾಲ್‌ ಮಾತನಾಡಿ, ಮರಳಿಗೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗೆ ನಿರ್ಣಯ ಕಳುಹಿಸಿಕೊಟ್ಟಿದ್ದೇವೆ ಎಂದರು. ನಿರ್ಣಯ ಕಳುಹಿಸಿ 2 ತಿಂಗಳಾದರೂ, ಜಿಲ್ಲಾಧಿಕಾರಿಗಳಿಂದ ಉತ್ತರ ಬಾರದ ಕುರಿತು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಮರಳು ತೆಗೆಯಲು ನಿರ್ಣಯ
ಇಲಾಖೆಯ ಕೆಲಸಗಳಿಗೆ ಎರಡು ಮರಳು ಬ್ಲಾಕ್‌ಗಳನ್ನು ತೆರೆಯಲಾಗಿದೆ ಎಂದು ಪಿಡಬ್ಲ್ಯೂಡಿ ಇಲಾಖಾಧಿಕಾರಿ ಮಾಹಿತಿ ನೀಡಿದರು. ಅಸಮರ್ಪಕ ಮಾಹಿತಿಯ ಸಂದರ್ಭ ಮಧ್ಯ ಪ್ರವೇಶಿಸಿದ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್‌ ಈ ಕುರಿತ ಪ್ರಕ್ರಿಯೆಗಳು ನಡೆಯುತ್ತಿವೆ. ಆದರೆ ಅಂತಿಮಗೊಳ್ಳಲು 1 ತಿಂಗಳು ಬೇಕಾಗಬಹುದು. ಡಿ.ಸಿ. ಅವರು ನಿರ್ಣಯಕ್ಕೆ ಉತ್ತರ ನೀಡಬೇಕಿತ್ತು ಎಂದು ಹೇಳಿದರು. ಸಮಸ್ಯೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಮರಳು ಎತ್ತುವವರಿಗೆ ಮಾನವೀಯ ದೃಷ್ಟಿಯಿಂದ ಇಲಾಖೆಗಳು ಸಹಕಾರ ನೀಡುವಂತೆ ನಿರ್ಣಯ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.

Advertisement

ಕಾರ್ಡ್‌ ಇಲ್ಲದೆ ಸಂಪರ್ಕ ಇಲ್ಲ
ಮೆಸ್ಕಾಂಗೆ ಸಂಬಂಧಪಟ್ಟಂತೆ ದೀನ್‌ ದಯಾಳ್‌ ವಿದ್ಯುದೀಕರಣ ಯೋಜನೆಯಲ್ಲಿ ಪುತ್ತೂರು ಗ್ರಾಮಾಂತರ ಉಪವಿಭಾಗ ವ್ಯಾಪ್ತಿಯಲ್ಲಿ ಒಟ್ಟು 430 ಬಿಪಿಎಲ್‌ ಫಲಾನುಭವಿಗಳಲ್ಲಿ 306 ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಲಾಗಿದೆ. 124 ಮನೆಗಳಿಗೆ ವೈರಿಂಗ್‌ ಕಾಮಗಾರಿ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು. 24 ಮನೆಗಳಿಗೆ ಬಿಪಿಎಲ್‌ ಕಾರ್ಡ್‌ ಇಲ್ಲದೆ ಸಂಪರ್ಕ ನೀಡಲು ಆಗುತ್ತಿಲ್ಲ. ಅವರು ಕಾರ್ಡ್‌ ಸಿಗುತ್ತದೆ ಎಂದು ಹೇಳಿದ ಹಿನ್ನೆಲೆಯಲ್ಲಿ ಕಾಮಗಾರಿ ನಡೆಸಲಾಗಿದೆ. ಅವರಿಗೆ ಮುಂದೆ ಸೌಭಾಗ್ಯ ಯೋಜನೆಯಲ್ಲಿ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಮಾಹಿತಿ ನೀಡಿದರು.

ಕರೆಂಟ್‌ ಬಿಲ್‌ : ಆನ್‌ಲೈನ್‌ ಸಮಸ್ಯೆ
ಮೆಸ್ಕಾಂ ಬಿಲ್‌ ಪಾವತಿ ಸಂದರ್ಭ ಹಿಂದಿನ ಬಿಲ್‌ ಕಟ್ಟಿದ್ದರೂ ಮತ್ತೆ ಅದನ್ನು ಸೇರಿಸಿಯೇ ಬಿಲ್‌ ಬರುತ್ತಿದೆ. ಬಾಕಿ ಹಣವೆಂದು ಬಡ್ಡಿಯನ್ನೂ ಹಾಕಲಾಗುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಶಾಂತ್‌ ಪೈ, ಬಾಕಿ ಹಣಕ್ಕೆ ಬಡ್ಡಿ ಕಟ್ಟುವುದು ಬೇಡ. ಆನ್‌ಲೈನ್‌ ಬಿಲ್‌ ವ್ಯವಸ್ಥೆ ಅಕ್ಟೋಬರ್‌ನಿಂದ ಬಂದಿರುವುದರಿಂದ ಸಮಸ್ಯೆಯಾಗಿದೆ. ಒಂದು ತಿಂಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ಹೇಳಿದರು. ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಹೆಚ್ಚುವರಿ ವ್ಯವಸ್ಥೆ ಮಾಡಿಕೊಳ್ಳುವ ಉದ್ದೇಶವಿದೆ. ಸಬ್‌ ರಿಜಿಸ್ಟ್ರಾರ್‌ ಕಚೇರಿ ಜಾಗವೂ ಈಗ ಸರಕಾರಿ ಆಸ್ಪತ್ರೆಗೆ ನೀಡಲಾಗಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ವೀಣಾ ತಿಳಿಸಿದರು.

ಸದಸ್ಯರಾದ ಸಾಜ ರಾಧಾಕೃಷ್ಣ ಆಳ್ವ, ಮುಕುಂದ, ಶಿವರಂಜನ್‌, ತೇಜಸ್ವಿನಿ, ಫಝಲ್‌, ಹರೀಶ್‌ ಬಿಜತ್ರೆ ಮಾತನಾಡಿದರು. ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಹರೀಶ್‌ ಬಿಜತ್ರೆ, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ತಾಲೂಕು ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿ ಜಗದೀಶ್‌ ಎಸ್‌. ಉಪಸ್ಥಿತರಿದ್ದರು.

‘ಜುಜುಬಿ’ ಚರ್ಚೆ
ಚರ್ಚೆಯ ಸಂದರ್ಭ ‘ಜುಜುಬಿ’ ಅನುದಾನ ಎನ್ನುವ ಮಾತನ್ನು ಸದಸ್ಯರೊಬ್ಬರು ಹೇಳಿದ್ದು, ಬಿಜೆಪಿ ಸದಸ್ಯರನ್ನು ಕೆರಳಿಸಿತು. ಸಭೆಯಲ್ಲಿ ಜುಜುಬಿ ಶಬ್ದವನ್ನು ಬಳಕೆ ಮಾಡಿರುವುದು ಸರಿಯಲ್ಲ. ಅದನ್ನು ವಾಪಸ್‌ ಪಡೆಯಬೇಕು ಎಂದು ಸದಸ್ಯರಾದ ರಾಧಾಕೃಷ್ಣ ಬೋರ್ಕರ್‌, ಶಿವರಂಜನ್‌, ತೇಜಸ್ವಿನಿ ಮತ್ತಿತರರು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next