Advertisement

ಕನ್ನಡದ ಕಂಪಿಗೆ ಕಾಯುತ್ತಿದೆ ಮುತ್ತಿನೂರು

09:59 AM Sep 19, 2018 | |

ಪುತ್ತೂರು: ನೆಲ, ಜಲ, ಗಾಳಿ, ಭಾಷೆಯಲ್ಲಿ ಅಡಕ ಆಗಿರುವ ಕನ್ನಡದ ಕಂಪನ್ನು ಸಂಭ್ರಮದಿಂದ ಆಘ್ರಾಣಿಸಲು ಪುತ್ತೂರು ಕಾತರದಿಂದ ಕಾಯುತ್ತಿದೆ. ಇನ್ನೊಂದೆಡೆ ಕನ್ನಡದ ಸೊಗಡನ್ನು ಬಿಚ್ಚಿಡಲು ಕನ್ನಡ ಸಾಹಿತ್ಯ ಪರಿಷತ್‌ ಉತ್ಸುಕವಾಗಿದೆ.

Advertisement

ಒಂದು ಕಾರ್ಯಕ್ರಮ ಯಶಸ್ವಿ ಎನಿಸಿಕೊಳ್ಳುವುದು ವೇದಿಕೆ ವೈಭವದಿಂದ ಮಾತ್ರವಲ್ಲ; ಅಲ್ಲಿ ಪ್ರೇಕ್ಷಕರೂ ಅಷ್ಟೇ ಮುಖ್ಯ. ಈ ಎರಡೂ ವರ್ಗದ ಜನರು ಒಂದೆಡೆ ಬೆರೆತು, ಕನ್ನಡದ ಬಗೆಗಿನ ಆನಂದವನ್ನು ಮನದಣಿಯೆ ಆಸ್ವಾದಿಸಲು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ಗದ್ದೆಯ ಜಿ.ಎಲ್‌. ಆಚಾರ್ಯ ಸಭಾಂಗಣ, ಎನ್‌.ವಿ. ಮೂರ್ತಿ ವೇದಿಕೆ ಸಿದ್ಧವಾಗಿದೆ.

ಪುತ್ತೂರು ಸಾಹಿತ್ಯ ಸಮ್ಮೇಳನ ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಪ್ರಕೃತಿ ವಿಕೋಪ ಹಿನ್ನೆಲೆಯಲ್ಲಿ ಆಡಂಬರಕ್ಕೆ ಇಲ್ಲಿ ಮಣೆಯಿಲ್ಲ. ಸರಳ ಕಾರ್ಯಕ್ರಮ. ಊಟದಿಂದ ಹಿಡಿದು ಕಾರ್ಯಕ್ರಮದವರೆಗೆ ಎಲ್ಲಿಯೂ ದುಂದು ವೆಚ್ಚಕ್ಕೆ ಅವಕಾಶವೇ ಇಲ್ಲ. ಇದುವರೆಗೆ ಎಲ್ಲ ಕಡೆಯಂತೆ ಒಂದು ದಿನ ನಡೆಯುತ್ತಿದ್ದ ತಾಲೂಕು ಸಾಹಿತ್ಯ ಜಾತ್ರೆ, ಪುತ್ತೂರಿನಲ್ಲಿ ಎರಡು ದಿನಗಳ ಕಾಲ ನಡೆಯುವುದು ಇನ್ನೊಂದು ವಿಶೇಷ.

ಯುವ ಸಬಲೀಕರಣ
ಕನ್ನಡ ಭಾಷೆ- ಸಂಸ್ಕೃತಿಯ ಅರಿವು ಈ ವರ್ಷದ ಸಾಹಿತ್ಯ ಸಮ್ಮೇಳನದ ಧ್ಯೇಯವಾಕ್ಯ. ಯುವ ಸಬಲೀಕರಣ ಕಾರ್ಯಕ್ರಮದ ಜೀವಾಳ. ಸಾಹಿತ್ಯ ಸಮ್ಮೇಳನಗಳು ಹಿರಿಯ ನಾಗರಿಕರ ಸ್ವತ್ತು ಎಂಬ ಅಭಿಪ್ರಾಯ ದೂರ ಮಾಡಲು, ಯುವ ಜನತೆಯನ್ನು ಹೆಚ್ಚಾಗಿ ತೊಡಗಿಸಿಕೊಳ್ಳಲಾಗಿದೆ. 500ಕ್ಕೂ ಅಧಿಕ ಸ್ವಯಂ ಸೇವಕರು, 18 ಆಯ್ದ ಯುವ ಕವಿಗಳ ವಿದ್ಯಾರ್ಥಿ ಕವಿಗೋಷ್ಠಿ, ವಿದ್ಯಾರ್ಥಿಗಳೇ ನಿರ್ವಹಿಸುವ ಸಾಂಸ್ಕೃತಿಕ ಕಾರ್ಯಕ್ರಮ ಹೀಗೆ ಸಾಗುತ್ತದೆ ಯುವ ಸಬಲೀಕರಣದ ಹೆಜ್ಜೆ.

ಸರಳ ಕಾರ್ಯಕ್ರಮ
ಎಲ್ಲ ತಯಾರಿಗಳು ಪೂರ್ಣಗೊಂಡಿವೆ. ಆಡಂಬರ ಇಲ್ಲದೆ, ಸರಳವಾಗಿ ಕಾರ್ಯಕ್ರಮ ನಡೆಯಲಿದೆ. ಊಟದಲ್ಲೂ ಪಾಯಸವಷ್ಟೇ ವಿಶೇಷ. ಗಂಜಿ ಊಟವೂ ಇರಲಿದೆ. ಹೆಚ್ಚು ಕಾರ್ಯಕ್ರಮ ಹಮ್ಮಿಕೊ ಳ್ಳುವ ದೃಷ್ಟಿಯಿಂದ 2 ದಿನ ಮೀಸಲಿಟ್ಟಿದ್ದೇವೆ. ಯುವ ಸಬಲೀಕರಣವೇ ಕಾರ್ಯಕ್ರಮದ ಒಟ್ಟು ಆಶಯ.
-ಬಿ. ಐತ್ತಪ್ಪ ನಾಯ್ಕ
ತಾಲೂಕು ಅಧ್ಯಕ್ಷ, ಕಸಾಪ

Advertisement

ಗಣೇಶ್‌ ಎನ್‌. ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next