Advertisement
ಮಂಡಲ ಉಸ್ತುವಾರಿಯಲ್ಲಿ ಪುತ್ತೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಚಾರಿ ಆಸ್ಪತ್ರೆ 1928ರಲ್ಲಿ 25 ಬೆಡ್‌ಗಳ ಸರಕಾರಿ ಆಸ್ಪತ್ರೆಯಾಗಿ ಕಾರ್ಯ ಆರಂಭಿಸಿತ್ತು. 1942 ರಲ್ಲಿ 33 ಬೆಡ್‌ಗಳಿಗೆ ವಿಸ್ತರಣೆಯಾಯಿತು. 1950ರಲ್ಲಿ 20 ಹಾಸಿಗೆಗಳನ್ನು ಕಲ್ಪಿಸಿ 53 ಬೆಡ್‌ಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲಾಯಿತು. 2000ನೇ ಇಸವಿಯಲ್ಲಿ 100 ಬೆಡ್‌ಗಳ ಆಸ್ಪತ್ರೆಯಾಗಿ ಮತ್ತೆ ಮೇಲ್ದರ್ಜೆಗೆ ಏರಿತ್ತು. ಅನಂತರದಲ್ಲಿ ರೋಗಿಗಳ ಸಂಖ್ಯೆ ವಿಪರೀತ ಏರಿಕೆಯಾಗಿದ್ದರೂ ವ್ಯವಸ್ಥೆಗಳಲ್ಲಿ ನಿರೀಕ್ಷಿತ ಪ್ರಗತಿಯಾಗಿಲ್ಲ. ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರಾತಿಗೆ ಪ್ರಯತ್ನಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೂರಕವಾಗಿ ಆಸ್ಪತ್ರೆಯನ್ನು 300 ಬೆಡ್‌ಗಳ ವ್ಯವಸ್ಥೆಗೆ ಏರಿಸಲು ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಇಎನ್‌ಟಿ, ಜನರಲ್, ಮೈಕ್ರೋಬಯೋಲಜಿ, ಆಯುಷ್, ಮಕ್ಕಳವೈದ್ಯರು, ಸರ್ಜನ್, ಮೂಳೆ ತಜ್ಞರು ಮೊದಲಾದ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಪ್ರಮುಖವಾಗಿರುವ ಹೆರಿಗೆ ತಜ್ಞರು, ವೈದ್ಯಕೀಯ ತಜ್ಞ ಹುದ್ದೆಗಳು ಖಾಲಿ ಇವೆ. ಸರಕಾರಿ ಅಂಕಿ ಅಂಶದ ಪ್ರಕಾರ ಪ್ರತಿ ತಿಂಗಳು ಸಾಮಾನ್ಯ ಹೆರಿಗೆಗಳು ಮತ್ತು ಸಿಸೇರಿಯನ್ ಸೇರಿ ಸರಾಸರಿ 100ರಷ್ಟು ಹೆರಿಗೆ ಪ್ರಕರಣಗಳು ಬರುತ್ತವೆ. ಆದರೆ ಸುಮಾರು 1 ವರ್ಷಗಳಿಂದ ಇಲ್ಲಿ ಪೂರ್ಣಕಾಲಿಕ ಹೆರಿಗೆ ತಜ್ಞರೇ ಇಲ್ಲ. ಸಾಮಾನ್ಯ ಹೆರಿಗೆಗಳನ್ನು ಇತರ ಕರ್ತವ್ಯದ ವೈದ್ಯರು ಮಾಡುತ್ತಾರಾದರೂ ಸಿಸೇರಿಯನ್ ಪ್ರಕರಣಗಳನ್ನು ಬೇರೆ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ. ಈ ಕಾರಣದಿಂದ ಸರಕಾರಿ ಆಸ್ಪತ್ರೆ ಇದ್ದೂ, ಸಮರ್ಪಕ ವ್ಯವಸ್ಥೆ ಪಡೆದುಕೊಳ್ಳಲಾಗದೆ ತಾಲೂಕಿನ ಜನತೆ ಖಾಸಗಿ ಆಸ್ಪತ್ರೆಯನ್ನು ಅವಲಂಭಿಸಬೇಕಾಗಿದೆ. ಈ ವಿಚಾರ ಪ್ರತಿ ತಾಲೂಕು ಮಟ್ಟದ ಸಭೆಗಳಲ್ಲಿ ಚರ್ಚೆಯಾಗುತ್ತದೆ. ಶನಿವಾರ ನಡೆದ ಕೆಡಿಪಿ ಸಭೆಯಲ್ಲೂ ಚರ್ಚೆಯಾಗಿ ಸ್ಥಳೀಯ ಖಾಸಗಿ ವೈದ್ಯರೊಬ್ಬರನ್ನು ಗುತ್ತಿಗೆ ಆಧಾರದಲ್ಲಿ ನೇಮಕಕ್ಕೆ ಮಾತುಕತೆ ನಡೆಸಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ. ಉಳಿದ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಇಷ್ಟೊಂದು ಸುದೀರ್ಘ ಸಮಯದ ಇಂತಹ ಪ್ರಮುಖ ಹುದ್ದೆಗಳು ಖಾಲಿಯಾಗಿರುವುದು ಯಾಕೆ? ಎನ್ನುವುದೂ ಅನುಮಾನಗಳನ್ನು ಹುಟ್ಟಿಸುತ್ತದೆ. ಆಸ್ಪತ್ರೆಯ ಒಳಗಿನ ಒಂದಷ್ಟು ಒಳ ಜಗಳಗಲೂ ಅವ್ಯವಸ್ಥೆಯಲ್ಲಿ ಪಾಲು ಪಡೆಯುತ್ತಿದೆ ಎನ್ನುವುದೂ ಗೌಪ್ಯ ಚರ್ಚೆಯಾಗಿ ಉಳಿದಿಲ್ಲ.
Related Articles
ತಾ| ಸರಕಾರಿ ಆಸ್ಪತ್ರೆ ಅಂದ ಮೇಲೆ ಕೈಕೊಡುವ ವಿದ್ಯುತ್ ಸಮಸ್ಯೆಯನ್ನು ನಿಭಾಯಿಸಲು ಜನರೇಟರ್ ವ್ಯವಸ್ಥೆ ಇರಲೇ ಬೇಕು. ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಓಬಿರಾಯನ ಕಾಲದ ಜನರೇಟರ್ ಇದೆ. ಆಗಾಗ ಕೈಕೊಡುವ ಈ ಜನರೇಟರ್‌ನಿಂದ ರೋಗಿಗಳು ನಿತ್ಯ ಪರದಾಡಬೇಕಾಗಿರುವುದು ಮಾಮೂಲಾಗಿದೆ. ತಿಂಗಳಿಗೆ 2-3 ಬಾರಿ ಕೈಕೊಡುವ ಜನರೇಟರ್‌ಗೆ ಪರ್ಯಾಯವಾಗಿ ಸಾವಿರಾರು ರೂ. ಖರ್ಚು ಮಾಡಿ ಬಾಡಿಗೆಯ ಜನರೇಟರನ್ನು ತರಲಾಗುತ್ತಿದೆ.
Advertisement
ವೈಟಿಂಗ್‌ನಲ್ಲಿ ಡಯಾಲಿಸಿಸ್ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ವ್ಯವಸ್ಥೆಯಲ್ಲಿನ ಕೊರತೆಯೂ ಪ್ರಮುಖ ಸಮಸ್ಯೆಯಾಗಿದೆ. ಹಾಲಿ 3 ಡಯಾಲಿಸಿಸ್ ಯಂತ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ದಿನಕ್ಕೆ 9 ಮಂದಿಗೆ ಡಯಾಲಿಸಿಸ್ ಸಾಧ್ಯವಾಗುತ್ತಿದೆ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಲು ಅಸಾಧ್ಯವಾಗಿರುವ 30ಕ್ಕೂ ಹೆಚ್ಚು ರೋಗಿಗಳು ವೈಟಿಂಗ್ ಲಿಸ್ಟ್‌ನಲ್ಲಿದ್ದಾರೆ. ಹೊಸದಾಗಿ 4ನೆಯ ಡಯಾಲಿಸಿಸ್ ಯಂತ್ರ ಮಂಜೂರಾಗಿದ್ದರೂ ಹಾಲಿ ಇರುವ 50 ಕೆ.ವಿ. ಸಾಮರ್ಥ್ಯದ ಜನರೇಟರ್‌ನಲ್ಲಿ ಅದನ್ನು ಚಾಲೂ ಮಾಡಲು ಸಾಧ್ಯವಿಲ್ಲ ಎನ್ನುವುದು ಆಸ್ಪತ್ರೆ ಅಧಿಕಾರಿಗಳ ಮಾತು. ಸರಕಾರಿ ಆಸ್ಪತ್ರೆಯಲ್ಲಿ ವ್ಯವಸ್ಥೆಗಳ ಅಭಿವೃದ್ಧಿಗೆ ಸಾಕಷ್ಟು ಜಾಗ ಇದೆ. ಹಾಲಿ ಉಪ ನೋಂದಣಿ ಕಚೇರಿ ಜಾಗವನ್ನೂ ಸರಕಾರಿ ಆಸ್ಪತ್ರೆ ಹೆಸರಿಗೆ ಜಿಲ್ಲಾಡಳಿತ ಮಾಡಿದೆ. ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ದೃಷ್ಟಿಯಿಂದ, ಪುತ್ತೂರು ಜಿಲ್ಲಾ ಕೇಂದ್ರವಾಗಿ ಅಭಿವೃದ್ಧಿಯಾಗುವ ದೃಷ್ಟಿಯಿಂದ ಪೂರಕ ವ್ಯವಸ್ಥೆ ಕಲ್ಪಿಸಲು ಅವಕಾಶಗಳಿವೆ. ಶೇ. 60 ಹುದ್ದೆಗಳು ಖಾಲಿ
ಪುತ್ತೂರು ತಾಲೂಕು ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ 112 ಮಂಜೂರಾದ ಹುದ್ದೆಗಳಿವೆ. ಇವುಗಳಲ್ಲಿ ಭರ್ತಿಯಾಗಿರುವುದು ಕೇವಲ 49 ಹುದ್ದೆಗಳು ಮಾತ್ರ. ಅದರಲ್ಲೂ 22 ಸ್ಟಾಫ್ ನರ್ಸ್‌ಗಳ ಪೈಕಿ ಮೂರು ಮಂದಿಗೆ ಇತ್ತೀಚೆಗೆ ವರ್ಗಾವಣೆಯಾಗಿದೆ. ಅಂದರೆ ತಾ| ಸರಕಾರಿ ಆಸ್ಪತ್ರೆಯಲ್ಲಿ ಶೇ. 60ರಷ್ಟು ಹುದ್ದೆಗಳು ಖಾಲಿಯಾಗಿವೆ. ಹೆರಿಗೆ ತಜ್ಞರ ಶೀಘ್ರ ನೇಮಕ
ಆಸ್ಪತ್ರೆಯಲ್ಲಿ ಹೆರಿಗೆ ತಜ್ಞರ ನೇಮಕಕ್ಕೆ ವಿಶೇಷ ಪ್ರಯತ್ನ ನಡೆಸಲಾಗುತ್ತಿದೆ. ಸದ್ಯಕ್ಕೆ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸಲು ವೈದ್ಯರೊಬ್ಬರನ್ನು ಸಂಪರ್ಕಿಸಲಾಗಿದೆ. ಯಾರಾದರೂ ಹೆರಿಗೆ ತಜ್ಞರಿದ್ದಲ್ಲಿ ಅರ್ಜಿ ಸಲ್ಲಿಸಿದರೆ ನೇಮಕ ಮಾಡಿಕೊಳ್ಳಲು ಆದ್ಯತೆ ನೀಡುತ್ತೇವೆ.
– ಸಂಜೀವ ಮಠಂದೂರು
ಶಾಸಕರು ಪುತ್ತೂರು ಶೀಘ್ರ ಜನರೇಟರ್
ಡಯಾಲಿಸಿಸ್ ವ್ಯವಸ್ಥೆ ಇರುವ ಎಲ್ಲ ಸರಕಾರಿ ಆಸ್ಪತ್ರೆಗಳಿಗೆ ಸರಕಾರ ಪ್ರತ್ಯೇಕ ಜನರೇಟರ್ ವ್ಯವಸ್ಥೆ ಒದಗಿಸುತ್ತಿದೆ. ಪುತ್ತೂರಿಗೂ ಶೀಘ್ರ ಜನರೇಟರ್ ಲಭ್ಯವಾಗಲಿದೆ. ಪ್ರಮುಖವಾಗಿ ಹೆರಿಗೆ ತಜ್ಞರು, ವೈದ್ಯಕೀಯ ತಜ್ಞ ವೈದ್ಯರ ಆವಶ್ಯಕತೆ ಇದೆ.
– ಡಾ| ವೀಣಾ ಆಡಳಿತ
ವೈದ್ಯಾಧಿಕಾರಿ, ಸರಕಾರಿ ಆಸ್ಪತ್ರೆ ರಾಜೇಶ್ ಪಟ್ಟೆ