Advertisement
ಎರಡೂ ತಾ.ಪಂ.ಗಳ ಉಪಾಧ್ಯಕ್ಷ ಸ್ಥಾನ ಹೊಂದಿರುವ ಸದಸ್ಯರು ಪ್ರತಿನಿಧಿಸುತ್ತಿರುವ ಕ್ಷೇತ್ರ ಕಡಬ ತಾ.ಪಂ.ಗೆ ಒಳಪಡಲಿರುವ ಕಾರಣ ಪುತ್ತೂರು ಮತ್ತು ಸುಳ್ಯ ತಾ.ಪಂ. ಉಪಾಧ್ಯಕ್ಷ ಸ್ಥಾನಕ್ಕೆ ಮರು ಚುನಾವಣೆ ನಡೆಯಬೇಕಿದೆ.
ತೆರವಾಗುತ್ತಿರುವ ಎರಡೂ ಉಪಾಧ್ಯಕ್ಷ ಸ್ಥಾನಗಳಲ್ಲಿ ಮಹಿಳೆಯರೇ ಇದ್ದಾರೆ. ಸುಳ್ಯ ತಾ.ಪಂ. ಉಪಾಧ್ಯಕ್ಷೆ ಶುಭದಾ ಎಸ್. ರೈ ಅವರು ಎಣ್ಮೂರು ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ಪುತ್ತೂರು ತಾ.ಪಂ. ಉಪಾಧ್ಯಕ್ಷೆ ಲಲಿತಾ ಈಶ್ವರ ಅವರು ಚಾರ್ವಾಕ ತಾ.ಪಂ. ಕ್ಷೇತ್ರದ ಸದಸ್ಯೆಯಾಗಿದ್ದಾರೆ. ಈ ಎರಡು ಕ್ಷೇತ್ರಗಳು ಕಡಬ ತಾ.ಪಂ. ವ್ಯಾಪ್ತಿಗೆ ಸೇರ್ಪಡೆ ಗೊಂಡಿವೆ. ಹೀಗಾಗಿ ಇವರಿಬ್ಬರ ಉಪಾಧ್ಯಕ್ಷ ಸ್ಥಾನ ತೆರವಾಗಲಿದೆ. ಈ ಇಬ್ಬರೂ ಬೇರೆ ಬೇರೆ ತಾಲೂಕುಗಳ ತಾ.ಪಂ. ಸದಸ್ಯೆ, ಉಪಾಧ್ಯಕ್ಷ ರಾಗಿದ್ದರೂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿ ಇವರಿಬ್ಬರು ಸುಳ್ಯ ಕ್ಷೇತ್ರದ ವ್ಯಾಪ್ತಿಗೆ ಸೇರುತ್ತಾರೆ. ಇನ್ನು ಮುಂದೆ ಇವರಿಬ್ಬರು ಒಂದೇ ತಾಲೂಕಿನ ತಾ.ಪಂ. ವ್ಯಾಪ್ತಿಯೊಳಗೂ ಸೇರಲಿದ್ದಾರೆ.
Related Articles
ಮೂರು ಗ್ರಾಮಗಳನ್ನು ಹೊಂದಿರುವ ಎಣ್ಮೂರು ತಾ.ಪಂ. ಕ್ಷೇತ್ರದ ಸದಸ್ಯರಿಗೆ ಸುಳ್ಯ ಮತ್ತು ಕಡಬ ತಾ|ನ ಗ್ರಾಮಗಳು ಒಳಪಡುವ ಕಾರಣ ಹೊಸ ಸಮಸ್ಯೆ ತಲೆದೋರಿದೆ. ಎಣ್ಮೂರು ತಾ.ಪಂ. ಕ್ಷೇತ್ರ ಎಣ್ಮೂರು, ಮುರುಳ್ಯ, ಎಡಮಂಗಲ ಗ್ರಾಮ ಒಳಗೊಂಡಿದೆ. ಕಡಬ ತಾಲೂಕು ಆದ ಬಳಿಕ ಎಡಮಂಗಲ ಮತ್ತು ಎಣ್ಮೂರು ಕಡಬಕ್ಕೆ ಸೇರಿತು. ಮುರುಳ್ಯ ಸುಳ್ಯದಲ್ಲೇ ಉಳಿದುಕೊಂಡಿದೆ.
Advertisement
ಈಗ ಎಣ್ಮೂರು ತಾ.ಪಂ. ಕ್ಷೇತ್ರ ಕಡಬಕ್ಕೆ ಸೇರಿದರೂ ಸುಳ್ಯಕ್ಕೆ ಒಳಪಟ್ಟಿರುವ ಮುರುಳ್ಯ ಗ್ರಾಮ ಯಾವ ತಾ.ಪಂ. ವ್ಯಾಪ್ತಿಗೆ ಬರಲಿದೆ ಎಂಬ ಜಿಜ್ಞಾಸೆ ಮೂಡಿದೆ. ವ್ಯಾಪ್ತಿ ಪ್ರಕಾರ ಎಣ್ಮೂರು ಮತ್ತು ಎಡಮಂಗಲಕ್ಕೆ ಸಂಬಂಧಿಸಿ ಕಡಬ ತಾ.ಪಂ., ಮುರುಳ್ಯ ಸುಳ್ಯ ತಾ.ಪಂ. ವ್ಯಾಪ್ತಿಗೆ ಒಳಪಡುತ್ತದೆ. ಅಂದರೆ ಇಲ್ಲಿನ ಸದಸ್ಯರು ಎರಡೂ ತಾ.ಪಂ. ವ್ಯಾಪ್ತಿಯೊಳಗೆ ಇದ್ದಂತೆ ಆಗಿದೆ.
ಸಹಾಯಕ ಆಯುಕ್ತರಿಗೆ ಪತ್ರಪುತ್ತೂರು ಮತ್ತು ಸುಳ್ಯ ತಾ.ಪಂ.ಉಪಾಧ್ಯಕ್ಷರ ಸ್ಥಾನ ತೆರವಾಗುವ ಕಾರಣ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಲು ಉಭಯ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಗಳು ಸಹಾಯಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಕಡಬ ತಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ದಿನಾಂಕ ನಿಗದಿ ಆದ ಸಂದರ್ಭ ಪುತ್ತೂರು, ಸುಳ್ಯ ತಾ.ಪಂ.ಉಪಾಧ್ಯಕ್ಷತೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಕಡಬ: ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಶೀಘ್ರ ಚುನಾವಣೆ
ಕಡಬ: ನೂತನ ಕಡಬ ತಾ.ಪಂ.ನ ಪ್ರಥಮ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿದ್ದು, ಅಧ್ಯಕ್ಷತೆ ಅನುಸೂಚಿತ ಜಾತಿ (ಮಹಿಳೆ), ಉಪಾಧ್ಯಕ್ಷತೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ನೂತನ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಶೀಘ್ರ ದಿನಾಂಕ ಘೋಷಣೆ ಯಾಗಲಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಪುತ್ತೂರು ಹಾಗೂ ಸುಳ್ಯ ತಾ.ಪಂ.ನ ವ್ಯಾಪ್ತಿಯಲ್ಲಿರುವ ಕಡಬ ತಾ|ಗೆ ಸೇರ್ಪಡೆಯಾಗಿರುವ ಒಟ್ಟು 42 ಗ್ರಾಮ ಗಳನ್ನೊಳಗೊಂಡ 13 ತಾ.ಪಂ. ಕ್ಷೇತ್ರಗಳನ್ನು ಸೇರಿಸಿ ಹೊಸ ಕಡಬ ತಾ.ಪಂ. ರೂಪುಗೊಂಡಿದೆ. ಕಡಬ ತಾ.ಪಂ.ನ 13 ಸದಸ್ಯರ ಪೈಕಿ ಇಬ್ಬರು ಅನುಸೂಚಿತ ಜಾತಿ ಮಹಿಳಾ ಅಭ್ಯರ್ಥಿಗಳಿದ್ದಾರೆ. ಚಾರ್ವಾಕ ಕ್ಷೇತ್ರದ ಸದಸ್ಯೆ ಲಲಿತಾ ಈಶ್ವರ ಹಾಗೂ ಸವಣೂರು ತಾ.ಪಂ. ಸದಸ್ಯೆ ರಾಜೇಶ್ವರಿ ಕನ್ಯಾಮಂಗಲ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶ ಪಡೆದಿದ್ದಾರೆ. ಉಪಾಧ್ಯಕ್ಷತೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ 13 ಅಭ್ಯರ್ಥಿಗಳಿಗೂ ಸ್ಪರ್ಧಿಸುವ ಅವಕಾಶವಿದೆ. ವರದಿ ಸಲ್ಲಿಕೆ
ಸುಳ್ಯ ತಾ.ಪಂ. ಉಪಾಧ್ಯಕ್ಷರು ಪ್ರತಿನಿಧಿಸುವ ಕ್ಷೇತ್ರ ಕಡಬ ತಾ.ಪಂ.ಗೆ ಸೇರಲಿದ್ದು, ಹಾಗಾಗಿ ಇಲ್ಲಿನ ಉಪಾಧ್ಯಕ್ಷ ಸ್ಥಾನ ತೆರವಾಗಲಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವ ಕುರಿತು ತಾ.ಪಂ.ನಿಂದ ಸಹಾಯಕ ಆಯುಕ್ತರಿಗೆ ವರದಿ ಸಲ್ಲಿಸಲಾಗಿದೆ.
– ಭವಾನಿಶಂಕರ
ಇಒ, ತಾ.ಪಂ., ಸುಳ್ಯ