Advertisement

ಪುತ್ತೂರು ಉಪನೋಂದಣಿ ಕಚೇರಿ ಸ್ಥಳಾಂತರ 

10:04 AM Dec 02, 2018 | Team Udayavani |

ಪುತ್ತೂರು: ಸೋಮವಾರದಿಂದ ಪುತ್ತೂರು ಉಪನೋಂದಣಿ ಕಚೇರಿ ಮಿನಿ ವಿಧಾನಸೌಧದಲ್ಲಿ ಕಾರ್ಯಾರಂಭ ಮಾಡಲಿದೆ. 120 ವರ್ಷಗಳಿಂದ ಆಶ್ರಯ ಪಡೆದಿದ್ದ ಕಟ್ಟಡವನ್ನು ನೋಂದಣಿ ಇಲಾಖೆ ಕೊನೆಗೂ ಬಿಟ್ಟು ತೆರಳುತ್ತಿದೆ.

Advertisement

ಸುಮಾರು 150ಕ್ಕೂ ಹೆಚ್ಚು ವರ್ಷಗಳಿಂದ ಪುತ್ತೂರು ತಾಲೂಕಿನಲ್ಲಿ ಕಾರ್ಯಾ ಚರಿಸುತ್ತಿರುವ ಉಪ ನೋಂದಣಿ ಕಚೇರಿ ಈಗ ಮತ್ತೊಂದು ಮಗ್ಗುಲು ಬದಲಿಸುತ್ತಿದೆ. 1865ರಲ್ಲಿ ಉಪ್ಪಿನಂಗಡಿಯಲ್ಲಿ ಆರಂಭವಾದ ಈ ಕಚೇರಿ, 1883ರಲ್ಲಿ ಪುತ್ತೂರಿಗೆ ಸ್ಥಳಾಂತರ ಗೊಂಡಿತ್ತು. ಇದೀಗ ತನ್ನ ಕಟ್ಟಡದಿಂದ ಪುತ್ತೂರು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಗೊಳ್ಳುತ್ತಿದೆ. ಶನಿವಾರ ಹೆಚ್ಚಿನೆಲ್ಲ ದಾಖಲೆ, ಕಂಪ್ಯೂಟರ್‌, ಇತರ ಸೊತ್ತುಗಳನ್ನು ಸೌಧಕ್ಕೆ ಶಿಫ್ಟ್‌ ಮಾಡಲಾಗಿದೆ.

ಉಪನೋಂದಣಿ ಕಚೇರಿ ಇತಿಹಾಸ
1865ರ ಡಿ. 23ರಂದು ಪುತ್ತೂರು ಉಪನೋಂದಣಿ ಕಚೇರಿಗೆ ಗೆಜೆಟ್‌ ನೋಟಿಫಿಕೇಷನ್‌ ಆಗಿತ್ತು. ಆದರೆ ಇದಕ್ಕೆ ಮೊದಲೇ ಅಂದರೆ 1865ರ ಜ. 1ರಂದು ಕಚೇರಿ ಅಸ್ತಿತ್ವಕ್ಕೆ ಬಂದಿತ್ತು ಎನ್ನುತ್ತದೆ ದಾಖಲೆಗಳು. ಆದರೆ ಆಗ ಕಚೇರಿ ಇದ್ದದ್ದು ಉಪ್ಪಿನಂಗಡಿಯಲ್ಲಿ. ತಾಲೂಕು ಕೇಂದ್ರವೂ ಉಪ್ಪಿನಂಗಡಿಯೇ ಆಗಿತ್ತು. ನೆರೆ ನೀರು ಪೇಟೆಗೆ ನುಗ್ಗಿ, ದಾಖಲೆಗಳು ಕೊಚ್ಚಿ ಹೋಗುವ ಭೀತಿ ಎದುರಾಯಿತು. ಆಗ ಉಪನೋಂದಣಿ ಕಚೇರಿಯನ್ನು ಅನಿವಾರ್ಯವಾಗಿ ಪುತ್ತೂರಿಗೆ ಸ್ಥಳಾಂತರ ಮಾಡಲಾಯಿತು.  ಕಾಲಾಂತರದಲ್ಲಿ ತಾಲೂಕು ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸಲಾಯಿತು. ಆದರೆ ಈ ಪಟ್ಟಿಯಲ್ಲಿ ಮೊದಲಿಗೆ ಪುತ್ತೂರಿಗೆ ಸ್ಥಳಾಂತರವಾದ ಸರಕಾರಿ ಕಚೇರಿ ಉಪನೋಂದಣಿ ಇಲಾಖೆ.

1883ರ ಜು. 30ರಂದು ಉಪ್ಪಿನಂಗಡಿಯಲ್ಲಿದ್ದ ಉಪನೋಂದಣಿ ಕಚೇರಿ ಪುತ್ತೂರಿಗೆ ಸ್ಥಳಾಂತರವಾಗುತ್ತದೆ. ಆದರೆ ಈ ಕಚೇರಿಗೆ ಇಷ್ಟರವರೆಗೆ ಆಶ್ರಯ ನೀಡಿದ್ದ ಕಟ್ಟಡ ಸಿಕ್ಕಿದ್ದು 1887ರಲ್ಲಿ. ಅಂದರೆ ಇಲ್ಲಿಗೆ ಸರಿಸುಮಾರು 120 ವರ್ಷಗಳ ಕಾಲ ಪುತ್ತೂರು ಸರಕಾರಿ ಆಸ್ಪತ್ರೆ ಬಳಿಯ ಕಟ್ಟಡದಲ್ಲಿ ಉಪನೋಂದಣಿ ಕಚೇರಿ ಕೆಲಸ ಕಾರ್ಯ ನಡೆಸಿದೆ.

ಶತಪ್ರಯತ್ನದ ಬಳಿಕ ಶಿಫ್ಟ್‌!
ಪುತ್ತೂರು ಉಪನೋಂದಣಿ ಕಚೇರಿಯಲ್ಲಿ ಮಿನಿ ವಿಧಾನಸೌಧಕ್ಕೆ ಶಿಫ್ಟ್‌ ಮಾಡಬೇಕೆನ್ನುವ ನೆಲೆಯಲ್ಲಿ ಸಾಕಷ್ಟು ಪ್ರಯತ್ನ ನಡೆದು ಹೋಗಿವೆ. ಇಬ್ರಾಹಿಂ ಜಿಲ್ಲಾಧಿಕಾರಿ ಹಾಗೂ ಡಾ| ರಾಜೇಂದ್ರ ಕೆ.ವಿ. ಅವರು ಎಸಿ ಆಗಿದ್ದಾಗ ಒಂದೇ ದಿನದಲ್ಲಿ ನೋಂದಣಿ ಇಲಾಖೆಯ ಹೆಸರಿನಲ್ಲಿದ್ದ ಆರ್‌ಟಿಸಿಯನ್ನು ಪಕ್ಕದಲ್ಲೇ ಇದ್ದ ಸರಕಾರಿ ಆಸ್ಪತ್ರೆ ಹೆಸರಿಗೆ ವರ್ಗಾಯಿಸಲಾಗಿತ್ತು. 

Advertisement

ಈ ನಡುವೆ ಮಿನಿ ವಿಧಾನಸೌಧಕ್ಕೆ ಅಗತ್ಯವಾಗಿ ಬೇಕಾಗಿರುವ ಲಿಫ್ಟ್‌ನ ವ್ಯವಸ್ಥೆಯನ್ನು ಮಾಡಲಾಗಿತ್ತು. ಶಿಫ್ಟ್‌ಗೆ ಶತಪ್ರಯತ್ನ ನಡೆಸಿದರೂ, ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ಶಾಸಕ ಸಂಜೀವ ಮಠಂದೂರು ಅವರು ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾವಿಸಿದ್ದರು. ಪರಿಣಾಮವೋ ಎನ್ನುವಂತೆ, ಪ್ರಸ್ತುತ ಉಪನೋಂದಣಿ ಕಚೇರಿಯನ್ನು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸುವಂತೆ ಆದೇಶ ಹೊರಬಿದ್ದಿದೆ. ಇದೀಗ ಸ್ಥಳಾಂತರ ಪ್ರಕ್ರಿಯೆ ನಡೆಯುತ್ತಿದೆ. ಎಲ್ಲ ಇಲಾಖೆಗಳು ಒಂದೇ ಸೂರಿನಡಿ ಬರಬೇಕೆನ್ನುವ ಕಲ್ಪನೆಗೆ ಜೀವ ಬಂದಂತಾಗಿದೆ.

ರಜಾದಿನದ ಬಳಕೆ
ಶನಿವಾರ ಮಧ್ಯಾಹ್ನ 12 ಗಂಟೆ ವರೆಗೆ ಮಾತ್ರ ಮಿನಿ ವಿಧಾನಸೌಧ ಕಾರ್ಯಾಚರಿಸುತ್ತದೆ. ಇದನ್ನೇ ಬಳಸಿಕೊಂಡ ಅಧಿಕಾರಿಗಳು, ಸಾರ್ವಜನಿಕರಿಗೆ ತೊಂದರೆ ಆಗಬಾರದೆನ್ನುವ ನೆಲೆಯಲ್ಲಿ ಸ್ಥಳಾಂತರ ಕೆಲಸ ಮುಗಿಸಿದ್ದಾರೆ. ಅಧಿಕಾರಿಗಳೇ ಮುಂದೆ ನಿಂತು, ಸಿಬಂದಿಯ ಸಹಕಾರ ದಿಂದ ಎಲ್ಲ ದಾಖಲೆ, ಸೊತ್ತುಗಳನ್ನು ಮಿನಿ ವಿಧಾನಸೌಧದ ಮೊದಲನೇ ಮಹಡಿಗೆ ಶಿಫ್ಟ್‌ ಮಾಡಿದ್ದಾರೆ. ರವಿವಾರ ಸೌಧದಲ್ಲಿ ಕಚೇರಿ ಒಳಗಿನ ಜೋಡಣೆ ಕೆಲಸ ನಡೆ ಯಲಿದೆ. ಎಲ್ಲ ಕೆಲಸ ಕಾರ್ಯಗಳು ಮುಗಿದರೆ ಸೋಮವಾರ ಬೆಳಗ್ಗೆ ಸಾರ್ವ ಜನಿಕರನ್ನು ಉಪನೋಂದಣಿ ಕಚೇರಿ ಮಿನಿ ವಿಧಾನಸೌಧದಲ್ಲಿ ಸ್ವಾಗತಿಸಲಿದೆ.

ಗಣೇಶ್‌ ಎನ್‌. ಕಲ್ಲರ್ಪೆ

Advertisement

Udayavani is now on Telegram. Click here to join our channel and stay updated with the latest news.

Next