Advertisement

ಪುತ್ತೂರು ಠಾಣೆ: ಲಾಡ್ಜ್  ಮುಖ್ಯಸ್ಥರ ಸಭೆ

03:46 PM Oct 27, 2017 | |

ಪುತ್ತೂರು: ನಗರದಲ್ಲಿರುವ ಎಲ್ಲ   ಲಾಡ್ಜ್ ಗಳಿಗೆ ಬರುವವರ ವಿಳಾಸಗಳನ್ನು ಕೂಲಂಕಶವಾಗಿ ಪರಿಶೀಲಿಸಿ ದಾಖಲಿಸಬೇಕು ಹಾಗೂ ಸಿಸಿ ಕೆಮರಾ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಪುತ್ತೂರು ನಗರ ಪೊಲೀಸ್‌ ಠಾಣಾ ಇನ್‌ಸ್ಪೆಕ್ಟರ್‌ ಮಹೇಶ್‌ ಪ್ರಸಾದ್‌ ಲಾಡ್ಜ್ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.

Advertisement

ನಗರ ಠಾಣೆಯಲ್ಲಿ ಗುರುವಾರ ನಡೆದ ಲಾಡ್ಜ್ ಮುಖ್ಯಸ್ಥರ ಸಭೆಯಲ್ಲಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ದೂರದ ಊರುಗಳಿಂದ ಬಂದು  ಲಾಡ್ಜ್ ಗಳಲ್ಲಿ ಉಳಿದುಕೊಂಡು ಅಪರಾಧ ಪ್ರಕರಣಗಳನ್ನು ನಡೆಸುವುದು ಕಂಡುಬರುತ್ತಿದೆ. ಅಲ್ಲದೆ ಲಾಡ್ಜ್ ಗಳಲ್ಲಿ ಉಳಿದುಕೊಂಡು ಆತ್ಮಹತ್ಯೆ ಮಾಡಿ ಕೊಳ್ಳುವಂತಹ ಘಟನೆಗಳು ನಡೆಯುವುದು ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ  ಲಾಡ್ಜ್ ಗಳಲ್ಲಿ ತಂಗಲು ಬರುವವರ ಹೆಸರು, ವಿಳಾಸ, ಐಡಿ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ ಮೊದಲಾದ ದಾಖಲೆಗಳ ಜೆರಾಕ್ಸ್‌ ಪ್ರತಿಯನ್ನು ಪಡೆದುಕೊಳ್ಳುವುದು ಆವಶ್ಯಕ. ಇವುಗಳ ಮೂಲಕ ಅಪರಾಧ ಪ್ರಕರಣಗಳು ನಡೆದಾಗ ಸುಲಭವಾಗಿ ಪತ್ತೆ ಮಾಡಲು ಸಾಧ್ಯವಾಗುತ್ತವೆ ಎಂದರು.

ಸಿಸಿ ಕೆಮರಾ ಅಳವಡಿಸಿ
ಭದ್ರತೆಯ ದೃಷ್ಟಿಯಿಂದ  ಲಾಡ್ಜ್ ಗಳ ಪ್ರವೇಶ ದ್ವಾರ, ವಾಹನ ಪಾರ್ಕಿಂಗ್‌ ಜಾಗದಲ್ಲಿ, ರಸ್ತೆ ಸೇರಿದಂತೆ ಕಟ್ಟಡದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕೆಮರಾ ಅಳವಡಿಸಬೇಕು. ಇವುಗಳ ಸಹಕಾರದಿಂದ ಅಪರಾಧ ಪ್ರಕರಣಗಳನ್ನು ಪತ್ತೆ ಮಾಡುವುದು ಹಾಗೂ ನಡೆಯದಂತೆ ತಡೆಗಟ್ಟಲು ಸಾಧ್ಯವಾಗುತ್ತಿದೆ. ಲಾಡ್ಜ್ ಮುಖ್ಯಸ್ಥರು ಪೊಲೀಸ್‌ ಇಲಾಖೆಯೊಂದಿಗೆ ಕೈಜೋಡಿಸುವಂತೆ ಅವರು ಮನವಿ ಮಾಡಿದರು.

ಇವುಗಳ ಜತೆಗೆ ಬಾಡಿಗೆ ಮನೆಗಳು, ತಾತ್ಕಾಲಿಕ ವಸತಿ ಗೃಹಗಳನ್ನೂ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಪ್ರಕರಣಗಳು ನಡೆಯುವ ಮುನ್ನವೇ ಸಂಬಂಧ ಪಟ್ಟವರು ಎಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಅತಿ ಅಗತ್ಯ ಎಂದು ಹೇಳಿದರು.

ವಿವಿಧ ಲಾಡ್ಜ್ ಗಳ  ಮಾಲಕರಾದ ಬಲರಾಮ ಆಚಾರ್ಯ, ಕರುಣಾಕರ ರೈ, ಉಮೇಶ್‌ ರೈ ಗಿಳಿಯಾಳು, ಸತೀಶ್‌ ಕೆದಿಲಾಯ, ರಾಮಚಂದ್ರ ಮಣಿಯಾಣಿ, ಮನಮೋಹನ ರೈ, ರೋಶನ್‌ ಡಿ’ಸೋಜಾ, ಸಲಾವುದ್ದೀನ್‌, ವಸಂತ, ಶಿವರಾಜ್‌ ಎಂ. ಹಾಗೂ ರಾಮಚಂದ್ರ ಬಿ.ಎನ್‌. ಸಭೆಯಲ್ಲಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next