Advertisement

ಮಹಾಲಿಂಗೇಶ್ವರ ದೇಗುಲ: ಧನುಪೂಜೆ ವಿಶೇಷ

11:03 PM Jan 04, 2020 | mahesh |

ನಗರ: ಧನು ಸಂಕ್ರಮಣದ ಮರು ದಿನದಿಂದ ಮಕರ ಸಂಕ್ರಮಣದವರೆಗೆ ಆಗಮೋಕ್ತ ಪದ್ಧತಿಯ ಪೂಜಾರಾಧನೆ ಇರುವ ದೇವಾಲಯಗಳಲ್ಲಿ ವಾರ್ಷಿಕ ಧನು ಪೂಜೆ ನಡೆಯುತ್ತವೆ. ಧನು ಪೂಜೆ ಶಿವನಿಗೆ ಪ್ರಿಯ ವಾಗಿರುವುದರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಿತ್ಯ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ.

Advertisement

ಬ್ರಾಹ್ಮಿ ಮುಹೂರ್ತದಲ್ಲಿ ದೇವಾನು ದೇವತೆಗಳ ಪ್ರಸನ್ನ ಕಾಲದಲ್ಲಿ ಧನು ಪೂಜೆ ನೆರವೇರುತ್ತದೆ. ಇದನ್ನು ಧ್ಯಾನ ಕಾಲ ಎಂದು ಕರೆಯುತ್ತಾರೆ. ಈ ಹೊತ್ತಿನಲ್ಲಿ ಶ್ರೀ ದೇವರ ನಾಮಸ್ಮರಣೆ, ರುದ್ರಪಠಣ, ಅಶ್ವತ್ಥ ವೃಕ್ಷ ಪ್ರದಕ್ಷಿಣೆ ಇತ್ಯಾದಿ ಕಾರ್ಯಗಳನ್ನು ನೆರವೇರಿಸಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ.

ಸೀಮೆಯ ದೇವಸ್ಥಾನ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಗರ ಹಾಗೂ ಆಸುಪಾಸಿನ ಗ್ರಾಮಗಳ ಸಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆಯಿಂದ ಧನುಪೂಜೆ ನಡೆಯುತ್ತದೆ. ಈ ಸಂದರ್ಭ ಶಿವನಿಗೆ ಪ್ರಿಯವಾದ ಸೋಮವಾರದಂದು ಧನುಪೂಜೆಯಲ್ಲಿ ಪಾಲ್ಗೊಳ್ಳುವ ಭಕ್ತರ ಸಂಖ್ಯೆ ಗರಿಷ್ಠವಾಗಿರುತ್ತದೆ.

ಪೂಜಾ ವಿಶೇಷ
ಮುಂಜಾನೆ ವ್ರತಾಚರಣೆಯೊಂದಿಗೆ ಶುದ್ಧಹಸ್ತರಾಗಿ ದೇವಾಲಯಕ್ಕೆ ಭಕ್ತರು ಆಗಮಿಸುತ್ತಾರೆ. 4 ಗಂಟೆಯಿಂದ ಶ್ರೀ ದೇವರಿಗೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಮಹಾಪೂಜೆ (ಧನು ವಿಶೇಷ ಪೂಜೆ), ಶ್ರೀ ದೇವರ ಬಲಿ ಉತ್ಸವದ ಬಳಿಕ ಅವಲಕ್ಕಿ ಪ್ರಸಾದ ವಿತರಣೆ ನಡೆಯುತ್ತದೆ. ಪೂಜಾ ಸಮಯದಲ್ಲಿ ವಿಶೇಷವಾಗಿ ರುದ್ರ ಪಾರಾಯಣ ನಡೆಯುತ್ತದೆ. ಧನುಪೂಜೆಯಲ್ಲಿ ಪಾಲ್ಗೊಳ್ಳುವ ಭಕ್ತರಿಗಾಗಿ ಪ್ರತ್ಯೇಕ ಸರದಿಯ ಸಾಲು ಮಾಡಲಾಗುತ್ತದೆ. ಪ್ರತಿ ವರ್ಷವೂ ಧನುಮಾಸ ಪೂಜೆ ಆರಂಭವಾಗುವ ಹೊತ್ತಿನಲ್ಲಿ ದೇವಾಲಯದಲ್ಲಿ ತೆಂಗಿನ ಗರಿಯ ಸಾಂಪ್ರದಾಯಿಕ ಚಪ್ಪರವನ್ನು ಭಕ್ತರ ಅನುಕೂಲಕ್ಕಾಗಿ ಅಳವಡಿಸಲಾಗುತ್ತಿದೆ.

ಕನಕಾಭಿಷೇಕ
ಪೂರ್ವಶಿಷ್ಟ ಸಂಪ್ರದಾಯದಂತೆ ಧನುರ್ಮಾಸ ಮುಗಿದು ಉತ್ತರಾಯಣ ಪ್ರವೇಶದ ಪುಣ್ಯಕಾಲವಾದ ಮಕರ ಸಂಕ್ರಮಣದಂದು ರಾತ್ರಿ ದೇವಾಲಯದ ಗೋಪುರದಲ್ಲಿರುವ ಉಳ್ಳಾಲ್ತಿ ನಡೆಯ ಮುಂದೆ ಶ್ರೀ ದೇವರ ಉತ್ಸವ ಮೂರ್ತಿ ತಲುಪಿದಾಗ ಕನಕಾಭಿಷೇಕ ನಡೆಸಲಾಗುತ್ತದೆ. ದೇವಾಲಯದ ಕಾರ್ಯಸ್ಥರು ಶ್ರೀ ದೇವರ ಉತ್ಸವ ಮೂರ್ತಿಯ ಮೇಲೆ ಹರಿವಾಣದಲ್ಲಿ ಹೊದ್ಲು, ವೀಳ್ಯದೆಲೆ, ಅಡಿಕೆ, ಕಾಳುಮೆಣಸು, ಚಿನ್ನ, ಬೆಳ್ಳಿಯ ತುಣುಕು, ನಾಣ್ಯ ಮುಂತಾದ ಸುವಸ್ತು ಗಳ ಮಿಶ್ರಣ ಅಭಿಷೇಕ ಮಾಡುತ್ತಾರೆ.

Advertisement

ಪುತ್ತೂರಿನಲ್ಲಿ ಮಾತ್ರ
ಪುತ್ತೂರು ಸೀಮೆಯ ಪೂರ್ವಶಿಷ್ಟ ಸಂಪ್ರದಾಯಗಳಲ್ಲಿ ಮಕರ ಸಂಕ್ರಾಂತಿಯಂದು ನಡೆಯುವ ಕನಕಾಭಿಷೇಕ ಪ್ರಮುಖ ಉತ್ಸವ ವಾಗಿದೆ. ಸೀಮೆಯ ಅರಸೊತ್ತಿಗೆಯ ಆಡಳಿತದಲ್ಲಿ ವಿಜಯದ ಸಂಕೇತವಾಗಿ ಇದನ್ನು ಆಚರಿಸಿಕೊಂಡು ಬರುತ್ತಿದ್ದುದು ಪಾಡನಗಳಲ್ಲಿ, ದೈವಗಳ ನುಡಿಕಟ್ಟಿನಲ್ಲಿ ಉಲ್ಲೇಖವಿದೆ. ಶ್ರೀ ದಂಡನಾಯಕ ಉಳ್ಳಾಲ್ತಿ ಮತ್ತು ಪರಿವಾರ ದೈವಗಳು ಪುತ್ತೂರು ಕ್ಷೇತ್ರದ ರಕ್ಷಣೆಗಾಗಿ ಮಾಡಿದ ಯದ್ಧದ ವಿಜಯೋತ್ಸವದ ಸಂಕೇತವೇ ಕನಕಾಭಿಷೇಕ ಎಂಬ ನಂಬಿಕೆ ಇದೆ. ಕನಕಾಭಿಷೇಕ ನಡೆಸುವ ಪದ್ಧತಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಮಾತ್ರ ಇದೆ ಎಂಬುದು ಧಾರ್ಮಿಕ ಅಧ್ಯಯನಕಾರರ ಅಭಿಪ್ರಾಯ.

ಮಕರ ಸಂಕ್ರಾಂತಿಯಂದು ದೇವಾಲಯದ ವಠಾರದಲ್ಲಿರುವ ಶ್ರೀ ಶಾರದಾ ಭಜನ ಮಂದಿರದಿಂದ ನಗರ ಭಜನೆ ಹೊರಟು ಬಲಾ°ಡು ಉಳ್ಳಾಲ್ತಿ ಕ್ಷೇತ್ರಕ್ಕೆ ತೆರಳುವ ಸಂಪ್ರದಾಯವಿದೆ. ಅಂದು ದೇವಾಲಯದ ವಠಾರದಲ್ಲಿ ಶ್ರೀ ಸತ್ಯನಾರಾಯಣ ಪೂಜೆಯೂ ನಡೆಯುತ್ತದೆ.

ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಧನುಪೂಜೆ ವಿಶೇಷವಾಗಿ ನಡೆಯುವುದರಿಂದ ಭಕ್ತರಿಗೆ ಅನುಕೂಲಕರ ವ್ಯವಸ್ಥೆಗಳನ್ನೂ ಮಾಡಲಾಗಿದೆ. ಧನುಪೂಜೆಯಲ್ಲಿ ನಿತ್ಯ 2 ಸಾವಿರಕ್ಕೂ ಮಿಕ್ಕಿ ಭಕ್ತರು ಪಾಲ್ಗೊಳ್ಳುತ್ತಾರೆ. ಮಕರ ಸಂಕ್ರಮಣದಂದು ದೇವರಿಗೆ ವಿಶೇಷ ಕನಕಾಭಿಷೇಕ ನಡೆಯುವುದರಿಂದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
-ನವೀನ್‌ ಭಂಡಾರಿ, ಪ್ರಭಾರ ಇಒ, ಶ್ರೀ ಮಹಾಲಿಂಗೇಶ್ವರ ದೇವಾಲಯ, ಪುತ್ತೂರು

– ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next