Advertisement
ಕೆಲವು ತಿಂಗಳಿನಿಂದ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಲಿದೆ ಎನ್ನುವ ಪ್ರಸ್ತಾವ ಕೇಳಿ ಬಂದಿತ್ತು. ಪುತ್ತೂರು, ಸುಳ್ಯ ತಾಲೂಕುಗಳಲ್ಲಿಯೂ ಚತುಷ್ಪಥ ರಸ್ತೆ ವಿಸ್ತರಣೆಯ ರೂಪುರೇಷೆಗಳ ಬಗ್ಗೆಯು ಸಾರ್ವಜನಿಕವಾಗಿ ಚರ್ಚೆ ನಡೆಯುತ್ತಿತ್ತು.
Related Articles
Advertisement
ಮಾಣಿ-ಸಂಪಾಜೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಪುತ್ತೂರು, ಸುಳ್ಯ ತಾಲೂಕಿನಲ್ಲಿ ಅಪಘಾತ ವಲಯ ಎಂದು ಗುರುತಿಸಲ್ಪಟ್ಟಿರುವ ಎಂಟು ಕಿರಿದಾದ ಸೇತುವೆಯನ್ನು ಅಗಲಗೊಳಿಸಲು 50 ಕೋ.ರೂ. ಅನುದಾನಕ್ಕೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದ್ದು ಟೆಂಡರ್ ಹಂತದಲ್ಲಿದೆ. ಪುತ್ತೂರು ತಾಲೂಕಿನ ಮುಕ್ರಂಪಾಡಿ, ಸಂಪ್ಯ, ಸಂಟ್ಯಾರು, ಕುಂಬ್ರ, ಶೇಖಮಲೆ, ಸುಳ್ಯ ತಾಲೂಕಿನ ಪೈಚಾರು, ಕಡಪಳದಲ್ಲಿ ಕಿರಿದಾದ ಸೇತುವೆ ವಿಸ್ತರಣೆಗೊಳ್ಳಲಿದೆ. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪ್ರಾರಂಭಗೊಳ್ಳಲಿದೆ.
ಮೇಲ್ದರ್ಜೆ
ಮಾಣಿಯಿಂದ ಮೈಸೂರು ತನಕದ ರಾಜ್ಯ ರಸ್ತೆ 88ರ ವಿಸ್ತರಣೆ, ಅಭಿವೃದ್ಧಿ ಕಾಮಗಾರಿಯನ್ನು ಮೂರು ಹಂತದಲ್ಲಿ ಕೈಗೆತ್ತಿಕೊಂಡು ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗಿತ್ತು. ಮೈಸೂರು- ಕುಶಾಲನಗರ ನಡುವಿನ ಪ್ರಥಮ ಹಂತದ ಕಾಮಗಾರಿ 2009ರ ಎ. 30ಕ್ಕೆ ಪೂರ್ಣಗೊಂಡಿತ್ತು. ಎರಡನೇ ಹಂತದ ಕುಶಾಲನಗರ-ಸಂಪಾಜೆ ರಸ್ತೆ 2013 ಮಾ. 31ಕ್ಕೆ ಮುಕ್ತಾಯವಾಗಿತ್ತು. ಮೂರನೇ ಹಂತದ ಸಂಪಾಜೆ-ಮಾಣಿ ನಡುವಿನ 71.9 ಕಿ.ಮೀ. ರಸ್ತೆಯಲ್ಲಿ 2009 ಡಿ. 27ಕ್ಕೆ ಕಾಮಗಾರಿ ಆರಂಭಗೊಂಡು, 2012 ಜೂ. 20ಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ 3 ವರ್ಷ ತಡವಾಗಿ 2015ಕ್ಕೆ ಪೂರ್ಣಗೊಂಡಿತ್ತು. ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಸುಪರ್ದಿಯಲ್ಲಿದ್ದ ಈ ರಸ್ತೆ, ರಾಷ್ಟ್ರೀಯ ಹೆದ್ದಾರಿ ಆಗುವ ಮೊದಲು ಅದರ ನಿರ್ವಹಣೆ ಸಮರ್ಪಕವಾಗಿರುವ ಬಗ್ಗೆ ಪರಿಶೀಲಿಸಬೇಕಿತ್ತು. ಬಳಿಕವೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದನ್ನು ಸುಪರ್ದಿಗೆ ತೆಗೆದುಕೊಳ್ಳಬೇಕಿತ್ತು. ರಸ್ತೆ ನಿರ್ವಹಣೆ ಅಂತಿಮ ಹಂತಕ್ಕೆ ಬಂದಿರದ ಕಾರಣ ಹಸ್ತಾಂತರಕ್ಕೆ ತೊಡಕು ಉಂಟಾಗಿತ್ತು. ರಾಜ್ಯ ರಸ್ತೆ 88 ಕೆಆರ್‌ಡಿಸಿಎಲ್ ವ್ಯಾಪ್ತಿಯೊಳಗಿದ್ದ ರಸ್ತೆಯನ್ನು 2013ರ ಫೆಬ್ರವರಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಮೈಸೂರು- ಕುಶಾಲನಗರ, ಕುಶಾಲನಗರ-ಸಂಪಾಜೆ ತನಕದ ರಸ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿತ್ತು. 2018 ರಲ್ಲಿ ಸಂಪಾಜೆಯಿಂದ ಮಾಣಿ ತನಕದ ರಸ್ತೆ ರಾಷ್ಟ್ರೀಯ ಹೆದ್ದಾರಿಗೆ ಸೇರ್ಪಡೆಗೊಂಡಿತು.
ಭವಿಷ್ಯದಲ್ಲಿ ನಾಲ್ಕು ಪಥ
ರಾಜ್ಯ ರಸ್ತೆಯು ರಾಷ್ಟ್ರೀಯ ಹೆದ್ದಾರಿ ಆಗಿರುವ ಕಾರಣ, ಭವಿಷ್ಯದಲ್ಲಿ ಚತುಷ್ಪಥ ರಸ್ತೆಯಾಗಿ ವಿಸ್ತರಣೆಗೊಳ್ಳಲಿದೆ. ರಸ್ತೆಯು ಸುಳ್ಯ ನಗರದ ಮಧ್ಯಭಾಗದಲ್ಲಿ, ಪುತ್ತೂರಿನಲ್ಲಿ ಬೈಪಾಸ್ ಮೂಲಕ ಹಾದು ಹೋಗಿದೆ. ಚತುಷ್ಪಥ ಕಾಮಗಾರಿ ಕೈಗೆತ್ತಿಕೊಂಡರೆ ಭೂ ಸ್ವಾಧೀನ ಅನಿವಾರ್ಯ. ಆಗ ಅಂಗಡಿ, ವಾಣಿಜ್ಯ ಮಳಿಗೆಗಳ ಅಸ್ತಿತ್ವಕ್ಕೆ ಸಮಸ್ಯೆ ಉಂಟಾಗಬಹುದು ಎಂಬ ಆತಂಕ ನಗರದಲ್ಲಿದೆ. ಸುಳ್ಯದಲ್ಲಿ ಬೈಪಾಸ್ ನಿರ್ಮಿಸಿ ನಗರದೊಳಗಿನ ರಸ್ತೆ ವಿಸ್ತರಣೆ ಕೈ ಬಿಡುವ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಭರವಸೆ ನೀಡಿದ್ದರೂ ಅದು ಎಷ್ಟರ ಮಟ್ಟಿಗೆ ಈಡೇರುತ್ತದೆ ಅನ್ನುವುದು ಅನುಷ್ಠಾನದ ಬಳಿಕವಷ್ಟೇ ಗೊತ್ತಾಗಲಿದೆ.
ಒಪಿಗೆ ಸಿಗಬೇಕಿದೆ: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಾಣಿಯಿಂದ-ಸಂಪಾಜೆ ತನಕದ ಪುತ್ತೂರು-ಸುಳ್ಯ ತಾಲೂಕಿನ ಎಂಟು ಕಿರಿದಾದ ಸೇತುವೆಯನ್ನು ಅಗಲಗೊಳಿಸಿ ನಿರ್ಮಿಸಲು 50 ಕೋ.ರೂ.ಅನುದಾನ ಮಂಜೂರಾಗಿದ್ದು ಟೆಂಡರ್ ಹಂತದಲ್ಲಿದೆ. ಚತುಷ್ಪಥ ಕಾಮಗಾರಿ ಬಗ್ಗೆ ಪ್ರಸ್ತಾವನೆ ಸಲ್ಲಿಕೆ ಆಗಿದ್ದು ಒಪ್ಪಿಗೆ ಸಿಗಬೇಕಿದೆ. -ಮಹಾಬಲ ನಾೖಕ್, ಎಇ, ರಾಷ್ಟ್ರೀಯ ಹೆದ್ದಾರಿ ಇಲಾಖೆ
ಕಿರಣ್ ಪ್ರಸಾದ್ ಕುಂಡಡ್ಕ