Advertisement

ಪುತ್ತೂರು: ಅಡಿಕೆ ಪಾಲದ ಮೇಲೆ ಜೀವ ಪಣಕ್ಕಿಟ್ಟು ನಡಿಗೆ!

04:34 PM Jul 01, 2024 | Team Udayavani |

ಪುತ್ತೂರು: ಶರವೇಗದಲ್ಲಿ ಹರಿಯುತ್ತಿರುವ ಹೊಳೆ ನೀರಿನ ನಡುವೆ ಅಡಿಗಡಿಗೆ ಅಲ್ಲಾಡುತ್ತಿರುವ ಶಿಥಿಲ ಕಿಂಡಿ ಅಣೆಕಟ್ಟಿನ ಕನಿಷ್ಠ ಸುರಕ್ಷತೆಯೂ ಇಲ್ಲದ ಕಾಲು ದಾರಿಯಲ್ಲಿ ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಪುಟ್ಟ ಪುಟ್ಟ ಮಕ್ಕಳು, ವೃದ್ಧರು ದಾಟುತ್ತಿರುವ ದೃಶ್ಯವನ್ನು ಕಂಡಾಗ ಎದೆ ಝಲ್ಲೆನ್ನಿಸುತ್ತದೆ.

Advertisement

ಇದು ಸುಳ್ಯ ವಿಧಾನಸಭಾ ಕ್ಷೇತ್ರದ ಪೆರುವಾಜೆ ಮತ್ತು ಕೊಡಿಯಾಲ ಗ್ರಾಮದ ಏನಡ್ಕ ಸಾರಕರೆ ಬಳಿ ಇರುವ ಕಿಂಡಿ ಅಣೆಕಟ್ಟಿನ
ಮೇಲ್ಭಾಗದ ಕಾಲುದಾರಿಯ ಸ್ಥಿತಿ. ನಾಲ್ಕೈದು ವರ್ಷಗಳಿಂದ ಗೌರಿ ಹೊಳೆಯ ಕಿಂಡಿ ಅಣೆಕಟ್ಟಿನ ಶಿಥಿಲ ಸ್ಲ್ಯಾಬ್‌ನಲ್ಲಿ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಸಾಗುತ್ತಿದ್ದರೂ ಆಡಳಿತ ವರ್ಗ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿಯೆ ಇಲ್ಲ.

ಈ ಕಿಂಡಿ ಅಣೆಕಟ್ಟಿನ ಮೇಲ್ಭಾಗದ ಕಾಲು ದಾರಿಯೇ ಕೊಡಿಯಾಲ ಹಾಗೂ ಪೆರುವಾಜೆ ಗ್ರಾಮಕ್ಕೆ ಸಂಪರ್ಕದ ಹಾದಿ. ಉಭಯ ದಿಕ್ಕಿನಲ್ಲಿ ನೂರಾರು ಮನೆಗಳಿಗೆ ಇರುವುದೊಂದೇ ಈ ದಾರಿ. ಉಡುಕಿರಿ ಕಾಲನಿ, ಕೂಡನಕಟ್ಟೆ, ಪೆರುವಾಜೆ ಪ್ರಥಮ ದರ್ಜೆ ಕಾಲೇಜು, ಬೆಳ್ಳಾರೆ ಭಾಗಕ್ಕೆ ಇದು ಸಂಪರ್ಕ ರಸ್ತೆ.

40 ವರ್ಷ ಕಳೆದಿದೆ!
ಸಾರಕರೆಯಲ್ಲಿ ಗೌರಿ ಹೊಳೆಗೆ 40 ವರ್ಷಗಳ ಹಿಂದೆ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. 15 ವರ್ಷಗಳ ಹಿಂದೆಯೇ ಇದು ಶಿಥಿಲಗೊಳ್ಳಲು ಆರಂಭಿಸಿದ್ದು ಆ ಹೊತ್ತಲ್ಲೇ ಜನರು ಮನವಿ ಸಲ್ಲಿಸಿದ್ದರೂ ಯಾರೂ ಸ್ಪಂದಿಸಿಲ್ಲ. ಬೇಸಗೆಯಲ್ಲಿ ಹೊಳೆಯಲ್ಲೇ ವಾಹನ ದಾಟಿಸುತ್ತಾ ಸಂಚರಿಸುವ ಇಲ್ಲಿನ ನಿವಾಸಿಗಳು ಮಳೆಗಾಲದಲ್ಲಿ ವಾಹನ ಮೂಲಕ ಬೆಳ್ಳಾರೆ ಪೇಟೆಗೆ ತೆರಳಲು 7-8 ಕಿ.ಮೀ. ಸುತ್ತಾಟ ನಡೆಸಬೇಕು. ಹೆಚ್ಚಿನವರು ಸುತ್ತಾಟ ತಪ್ಪಿಸಲು ಶಿಥಿಲ ಕಟ್ಟದ ಕಾಲು ದಾರಿಯಲ್ಲೇ ನಡೆದುಕೊಂಡು ಹೋಗಿ ಬೆಳ್ಳಾರೆ, ಸುಳ್ಯ ಭಾಗಕ್ಕೆ ಸಂಚರಿಸುತ್ತಾರೆ.

ಅನಗುರಿ, ಕೆಡೆಂಜಿಮೊಗ್ರು, ಉಡುಕಿರಿ ಮೊದಲಾದ ಪ್ರದೇಶದ ನಿವಾಸಿಗಳು ಬೆಳ್ಳಾರೆ, ಪೆರುವಾಜೆ, ಕೊಡಿಯಾಲ ಭಾಗಕ್ಕೆ ತೆರಳಲು ಇದು ಸಮೀಪದ ದಾರಿಯಾಗಿದೆ.

Advertisement

ರಕ್ಷಣ ಬೇಲಿ ಇಲ್ಲ!
ಇಲ್ಲಿ ರಕ್ಷಣ ಬೇಲಿಯೂ ಇಲ್ಲ. ತೆರೆದ ಪಾಲದಂತಿದೆ. ಹೆಜ್ಜೆ ಇಡುವಾಗ ಕೊಂಚ ತಪ್ಪಿದರೂ ಹೊಳೆ ಪಾಲಾಗುವುದು ನಿಶ್ಚಿತ ಎನ್ನುವ ಸ್ಥಿತಿ ಇಲ್ಲಿನದು. ಈ ಪರಿಸರದಲ್ಲಿ 3-4 ಮಂದಿ ಅಂಗವಿಕಲರು ಇದ್ದು ಕೆಲವರು ಶಾಲೆಗೆ ತೆರಳುತ್ತಾರೆ. ಅವರನ್ನು
ಹೊತ್ತುಕೊಂಡೇ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೋಗಬೇಕು ಎನ್ನುತ್ತಾರೆ ಸ್ಥಳೀಯ ನಿವಾಸಿ ಜಯ ಉಡುಕಿರಿ.

ಮಧ್ಯ ಭಾಗಕ್ಕೆ ಅಡಿಕೆ ಪಾಲ
ಕಿಂಡಿ ಅಣೆಕಟ್ಟಿನ ಮಧ್ಯಭಾಗದ ಪಿಲ್ಲರ್‌ ನಡುವಿನ ಸ್ಲ್ಯಾಬ್‌ ಸಂಪೂರ್ಣ ಶಿಥಿಲಗೊಂಡು ಮುರಿದು ಬಿದ್ದು ವರ್ಷಗಳೇ ಕಳೆದಿವೆ. ಇಲ್ಲಿ ಅಡಿಕೆ ಮರವನ್ನು ಬಳಸಿ ಒಂದು ಕಡೆಯಿಂದ ಇನ್ನೊಂದೆಡೆಗೆ ದಾಟಲಾಗುತ್ತಿದೆ. ಕೆಲವೆಡೆ ಸ್ಲ್ಯಾಬ್‌ ಗಳು ಬಿರುಕು ಬಿಟ್ಟಿದ್ದು ಸಂಚರಿಸುವಾಗ ಅಲುಗಾಡುತ್ತಿವೆ.

ಆ ಕಡೆ ನಮ್ಮದು, ಈ ಕಡೆ ನಿಮ್ಮದು..!
ಈ ಕಿಂಡಿ ಅಣೆಕಟ್ಟಿನ ಸ್ಥಳ ಜವಾಬ್ದಾರಿ ಬಗ್ಗೆಯೇ ಕೊಡಿಯಾಲ, ಪೆರುವಾಜೆ ಗ್ರಾಮ ನಡುವೆ ಪಾಲು ಆದಂತಿದೆ. ಸಾರೆಭಾಗದಿಂದ ಕಿಂಡಿ ಅಣೆಕಟ್ಟಿನ ಅರ್ಧಭಾಗ ಕೊಡಿಯಾಲ ಗ್ರಾ.ಪಂ., ಏನಡ್ಕ ಭಾಗದಿಂದ ಕಿಂಡಿ ಅಣೆಕಟ್ಟಿನ ಅರ್ಧಭಾಗ ಪೆರುವಾಜೆ ಗ್ರಾ.ಪಂ.ಗೆ ಸೇರಿದೆ. ಎರಡು ಗ್ರಾ.ಪಂ.ಗಳು ಕಿಂಡಿ ಅಣೆಕಟ್ಟಿನ ದುರಸ್ತಿ ಕೆಲಸ ಈ ಪಾಲು ಪಟ್ಟಿಯಂತೆ ಆಗುತ್ತಿದೆ ಅನ್ನುತ್ತಾರೆ ಸ್ಥಳೀಯರು.

ಸೇತುವೆ ಬೇಡಿಕೆ
ಏನಡ್ಕ-ಸಾರಕರೆ ನಡುವೆ ಹೊಸ ಸೇತುವೆ ನಿರ್ಮಾಣ ಆಗಬೇಕು ಅನ್ನುವ ಬೇಡಿಕೆ ಇಲ್ಲಿನವರದ್ದು. ಇದಕ್ಕೆ ಸಂಬಂಧಿಸಿ ಗ್ರಾ.ಪಂ., ಶಾಸಕರಿಗೆ, ಸಂಸದರಿಗೆ, ಸಚಿವರಿಗೆ ಹತ್ತಾರು ಮನವಿಗಳು ಸಲ್ಲಿಕೆಯಾಗಿವೆ. ಜಿ.ಪಂ. ಎಂಜಿನಿಯರ್‌ ವಿಭಾಗಕ್ಕೆ ಸಂದ ಮನವಿಗೆ ಲೆಕ್ಕವೇ ಇಲ್ಲ. ಪ್ರತೀ ವರ್ಷವೂ ಮಳೆಗಾಲದ ಸಂದರ್ಭ ಪೆರುವಾಜೆ, ಕೊಡಿಯಾಲ ಗ್ರಾ.ಪಂ. ಮಳೆಗಾಲದಲ್ಲಿ ಇಲ್ಲಿ ದಾಟದಂತೆ ಎಚ್ಚರಿಕೆಯ ಬ್ಯಾನರ್‌ ಅಳವಡಿಸುವುದು ಬಿಟ್ಟರೆ ಬೇರೇನೂ ಆಗಿಲ್ಲ. ತಹಶೀಲ್ದಾರ್‌, ಎಂಜಿನಿಯರ್‌ ಸ್ಥಳ ಭೇಟಿ ನೀಡಿ ದುರಸ್ತಿ ಭರವಸೆ ನೀಡಿ ಹೋಗುವುದಷ್ಟೇ ಇಲ್ಲಿನ ಕೆಲಸವಾಗಿದೆ.

ಅಂಗವಿಕಲತೆ ಉಳ್ಳವರು, ವೃದ್ಧರು ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಈ ಶಿಥಿಲ ಅಣೆಕಟ್ಟಿನ ಮೇಲ್ಭಾಗದಲ್ಲಿ ದಾಟಲು
ಕಷ್ಟವಾಗುತ್ತಿದೆ. ಶಾಲಾ ಮಕ್ಕಳು ಇಲ್ಲೇ ಹೋಗಬೇಕಾದ ಸ್ಥಿತಿ ಇದೆ. ಅಸೌಖ್ಯಕ್ಕೆ ಒಳಾಗದವರನ್ನು ಕರೆದುಕೊಂಡು ಬರಲು
ಪರದಾಡುವ ಪರಿಸ್ಥಿತಿ ಇದೆ.
*ರೂಪಾ, ಕೆಡಂಜಿಮೊಗರು

ನಾವು ಹತ್ತಾರು ಮನವಿ ಸಲ್ಲಿಸಿದ್ದೇವೆ. ಇದಕ್ಕೆ ಸ್ಪಂದನೆ ಸಿಕ್ಕಿಲ್ಲ. ಕಿಂಡಿ ಅಣೆಕಟ್ಟು ದುರಸ್ತಿಯ ಬದಲು ಈ ಸ್ಥಳದಲ್ಲಿ ಸುಸಜ್ಜಿತ
ಸೇತುವೆ ನಿರ್ಮಿಸಿ ನಮ್ಮ ದಶಕಗಳ ಬೇಡಿಕೆಯನ್ನು ಈಡೇರಿಸಬೇಕು.
*ವನಿತಾ, ಸಾರಕರೆ

*ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next