Advertisement

Udayavani Campaign: ಅದಮಾರಿಗೆ ಬಸ್ಸು ಯಾವುದಯ್ಯಾ? ನಡಿಗೆಯೇ ದಾರಿ

05:52 PM Jun 26, 2024 | Team Udayavani |

ಕಾಪು: ಕಾಪು, ಉಳಿಯಾರಗೋಳಿ, ಮಜೂರು, ಮಲ್ಲಾರು, ಬೆಳಪು, ಎಲ್ಲೂರು, ಕುತ್ಯಾರು, ಶಿರ್ವ, ಮುದರಂಗಡಿ, ಪಲಿಮಾರು, ಪಡುಬಿದ್ರಿ, ಹೆಜಮಾಡಿ, ತೆಂಕ ಎರ್ಮಾಳು, ಬಡಾ ಉಚ್ಚಿಲ ಸೇರಿದಂತೆ 14 ಗ್ರಾಮ ಪಂಚಾಯತ್‌ ವ್ಯಾಪ್ತಿಯ ಸಾವಿರಾರು ವಿದ್ಯಾರ್ಥಿಗಳಿಗೆ ಅದಮಾರು ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯೇ ಪ್ರಧಾನ ಆಸರೆ.

Advertisement

ತೀರಾ ಗ್ರಾಮೀಣ ಪ್ರದೇಶವಾಗಿರುವ ಅದಮಾರಿನಲ್ಲಿ ಕೆಜಿಯಿಂದ ಪಿಯುವರೆಗಿನ ಶಿಕ್ಷಣ ಸೌಲಭ್ಯವಿದ್ದು ಸುಮಾರು 1,800ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳಿದ್ದಾರೆ. ಆದರೆ, ಇಲ್ಲಿಗೆ ತಲುವುದೇ ಮಹಾ ಸಾಹಸ. ಅದಮಾರು ಶಿಕ್ಷಣ ಸಂಸ್ಥೆಗೆ ಬರುವ ವಿದ್ಯಾರ್ಥಿಗಳ ಪೈಕಿ ಶೇ. 60ರಷ್ಟು ಮಕ್ಕಳು ಖಾಸಗಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಇಲ್ಲಿ ಗೆ ಉಡುಪಿ, ಪಡುಬಿದ್ರಿ, ಮುದರಂಗಡಿಯಿಂದ ನಾಲ್ಕು ಬಸ್‌ಗಳು ಬರುತ್ತವೆ. ಆದರೆ ವಿದ್ಯಾರ್ಥಿಗಳ ಅನುಕೂಲಕ್ಕೆ ಬೆಳಿಗ್ಗೆ ಎರಡು, ಸಂಜೆ ಒಂದು ಬಸ್‌ ಮಾತ್ರ ದೊರಕುತ್ತವೆ. ಇದರಲ್ಲಿ ಇರುವೆ ಹೋಗಲೂ ಜಾಗ ಇಲ್ಲದಂತೆ ವಿದ್ಯಾರ್ಥಿಗಳು ತುಂಬಿ ಬಿಡುತ್ತಾರೆ. ಹೀಗಾಗಿ ನೂರಾರು ವಿದ್ಯಾರ್ಥಿಗಳು ಬೆಳಗ್ಗೆ ಮತ್ತು ಸಂಜೆ ಕನಿಷ್ಠ ಒಂದೂವರೆ ಕಿ.ಮೀ. ದೂರದ ಎರ್ಮಾಳು ಅಥವಾ ಮುದರಂಗಡಿಯವರೆಗೆ ನಡೆಯಲೇಬೇಕು.

ಎಲ್ಲೆಲ್ಲಿ ಪಾದಯಾತ್ರೆ?
ಹೆದ್ದಾರಿ ಮೇಲಿನ ಎಲ್ಲ ಊರಿನ ಮಕ್ಕಳು ರಾ. ಹೆ. 66ರ ಎರ್ಮಾಳು ಜಂಕ್ಷನ್‌ಗೆ ಬಂದು ಅಲ್ಲಿಂದ 1.5 ಕಿ.ಮೀ. ನಡೆದು ಅದಮಾರು ತಲುಪಬೇಕು. ಸಾಂತೂರು, ಬೆಳ್ಮಣ್‌, ಜಂತ್ರ, ಶಿರ್ವ, ಪಿಲಾರುಕಾನ, ಕುತ್ಯಾರು, ಎಲ್ಲೂರು, ಇರಂದಾಡಿಯಿಂದ ಬರುವವರು ಮುದರಂಗಡಿ ಜಂಕ್ಷನ್‌ ಗೆ ಬಂದು ಅಲ್ಲಿಂದ ನಡೆಯಬೇಕು. ಅದಮಾರಿಗೆ ತಾಗಿಕೊಂಡಿರುವ ಕುಂಜೂರು, ಪಣಿಯೂರು, ಕೆಮ್ಮುಂಡೇಲು, ಪಾದೆಬೆಟ್ಟು, ನಡ್ಪಾಲು, ಎರ್ಮಾಳು ಭಾಗದವರಿಗೆ ನಿತ್ಯವೂ ನಡೆಯುವುದೇ ಸಂಪ್ರದಾಯ.

ಮೂರು ಬಸ್‌ ಹಿಡಿಯಬೇಕು!
ನಾನು ಇನ್ನಾದಿಂದ ಅದಮಾರು ತಲುಪಬೇಕಾದರೆ ಇನ್ನಾದಿಂದ ಪಡುಬಿದ್ರಿ, ಪಡುಬಿದ್ರಿಯಿಂದ ಎರ್ಮಾಳು, ಎರ್ಮಾಳಿನಿಂದ ಅದಮಾರು ವರೆಗೆ ಮೂರು ಬಸ್‌ಗಳನ್ನು ಹಿಡಿಯಬೇಕು. ಸಂಜೆಯಂತೂ ಬಸ್‌ ನಲ್ಲಿ ನೇತಾಡುವುದನ್ನು ತಪ್ಪಿಸಬೇಕಾದರೆ 1.5 ಕಿ.ಮೀ. ನಡೆಯುವುದು ಅಷ್ಟೇ.
*ಸುಶಾಂತ್‌ ಇನ್ನ (ದ್ವಿತೀಯ ಪಿಯು ವಿದ್ಯಾರ್ಥಿ)

ಇರುವ ಒಂದು ಬಸ್‌ ಬೆಳಗ್ಗೆ ಬೇಗ ಬರುತ್ತದೆ
ನೇರ ಬಸ್‌ ಸೌಕರ್ಯವಿಲ್ಲ. ಇರುವ ಬಸ್‌ ಬೆಳಗ್ಗೆ ಬೇಗ ಬರುತ್ತದೆ. ಮತ್ತೊಂದು ಬಸ್‌ ತಡವಾಗಿ ಬರುತ್ತದೆ. ಎರಡೂ ಬಸ್‌ಗಳ ಸಮಯದ ಮಧ್ಯದ ಅವಧಿಯಲ್ಲಿ ಪಿಯುಸಿ ತರಗತಿಗಳು ಆರಂಭವಾಗುವುದರಿಂದ ಬಸ್‌ಗಳಿಗೆ ಹೊಂದಾಣಿಕೆ ಮಾಡಿಕೊಂಡು ಬರುವುದು ಕಷ್ಟವಾಗುತ್ತಿದೆ.
*ಶ್ರೇಯಸ್‌, ಧನ್ವಿತ್‌, ಪ್ರಣವ್‌, ಕೌಶಿಕ್‌, ಹಿತೇಶ್‌, ಕವನ್‌ (ಪ್ರಥಮ ಪಿಯು ವಿದ್ಯಾರ್ಥಿಗಳು)

Advertisement

ಬಸ್‌ ಮಿಸ್‌ ಆದರೆ ನಡಿಗೆಯೇ ದಾರಿ
ನಾನು ಬೆಳಗ್ಗೆ ಶಿರ್ವ, ಮುದರಂಗಡಿ, ಪಡುಬಿದ್ರಿ ಮೂಲಕ ಅದಮಾರು ತಲುಪುತ್ತೇನೆ. ಸಂಜೆ ಎರ್ಮಾಳುವರೆಗೆ ನಡೆದುಕೊಂಡು ಹೋಗಿ, ಕಾಪು ಮೂಲಕವಾಗಿ ಶಿರ್ವ ತಲುಪುತ್ತೇನೆ. ಸ್ವಲ್ಪ ತಡವಾದರೂ ಎರ್ಮಾಳು-ಕಾಪು, ಕಾಪು-ಶಿರ್ವ ನಡುವಿನ ಬಸ್‌ ಮಿಸ್‌ ಆಗುತ್ತದೆ. ಆಗ ನಡಿಗೆಯೇ ದಾರಿ.
*ದೀಕ್ಷಾ ಶಿರ್ವ (ಪ್ರಥಮ ಪಿಯು ವಿದ್ಯಾರ್ಥಿ)

ಬಸ್‌ ಸಿಗದಿದ್ದರೆ ರೈಲ್ವೇ ಹಳಿ ದಾಟಿ ಹೋಗಬೇಕು
ಬೆಳಪುವಿನಿಂದ ಅದಮಾರು ತಲುಪಲು 3 ಬಸ್‌ ಹಿಡಿಯಬೇಕು. ಬೆಳಪುವಿನಿಂದ ಪಣಿಯೂರಿನವರೆಗೆ ನಡೆದುಕೊಂಡು ಬಂದು ಪಣಿಯೂರು-ಉಚ್ಚಿಲ, ಉಚ್ಚಿಲ-ಎರ್ಮಾಳು, ಎರ್ಮಾಳು-ಅದಮಾರು ಬಸ್‌ ಬದಲಿಸಬೇಕು. ಬಸ್‌ ಸಿಗದಿದ್ದರೆ ಎರ್ಮಾಳಿನಲ್ಲಿ ರೈಲ್ವೇ ಹಳಿ ದಾಟಿ ಹೋಗಬೇಕು.
-ಸೃಜನ್‌ ಪಣಿಯೂರು

*ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next