Advertisement

ಪುತ್ತೂರು: ಕೊಳವೆಬಾವಿಗಾಗಿ ಪಿಡಿಒಗಳಿಂದ ಆಗ್ರಹ

09:20 PM Apr 16, 2020 | Sriram |

ಪುತ್ತೂರು: ತಾಲೂಕಿನ 41 ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಟಾಸ್ಕ್ಫೋರ್ಸ್‌ ವತಿಯಿಂದ ಹೊಸ ಸಾರ್ವಜನಿಕ ಕೊಳವೆಬಾವಿ ತೆರೆಯುವಂತೆ ಅಭಿವೃದ್ಧಿ ಅಧಿಕಾರಿಗಳು ಆಗ್ರಹಿಸಿದರು.

Advertisement

ಬುಧವಾರ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಕುಡಿಯುವ ನೀರು, ಕೋವಿಡ್ 19 ಮುಂಜಾಗರೂಕತೆ ಸಂಬಂಧಿಸಿ ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಈ ಆಗ್ರಹ ವ್ಯಕ್ತವಾಯಿತು.

ತಾಲೂಕಿನ ಆರ್ಯಾಪು, ಅರಿಯಡ್ಕ, ಬನ್ನೂರು, ಕೆಯ್ಯೂರು, ಕಬಕ ಸಹಿತ ಬಹುತೇಕ ಗ್ರಾ.ಪಂ.ಗಳಲ್ಲಿ ಕೊಳವೆಬಾವಿ ಅಗತ್ಯವಿದೆ. ಕೆಲವು ಗ್ರಾ.ಪಂ.ಗಳಲ್ಲಿ ಕೊಳವೆಬಾವಿ ಇದ್ದರೂ ವಿದ್ಯುತ್‌ ಸಮಸ್ಯೆಯಿಂದ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಶಾಸಕರಿಗೆ ತಿಳಿಸಿದರು.

ಮೇವಿನ ಸಮಸ್ಯೆ
ಕೆಲವು ಗ್ರಾ.ಪಂ. ವ್ಯಾಪ್ತಿಯಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಕಾಡುತ್ತಿದೆ. ತಾಲೂಕಿಗೆ ಒಣಮೇವು ಸಕಲೇಶಪುರ, ಹಾಸನದಿಂದ ಸರಬರಾಜುಗೊಳ್ಳುತ್ತಿತ್ತು. ಆದರೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮೇವು ಬರುತ್ತಿಲ್ಲ ಎಂದು ಜನತೆ ದೂರುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದರು. ಇದಕ್ಕೆ ಸ್ಪಂದಿಸಿದ ಉಪವಿಭಾಗಾಧಿಕಾರಿ, ಒಣ ಮೇವು ತರಿಸಲು ಯಾವುದೇ ನಿರ್ಬಂಧವಿಲ್ಲ ಎಂದು ತಿಳಿಸಿದರು.
ಶಾಸಕರು ಮಾತನಾಡಿ, ಕೆಎಂಎಫ್ ವತಿಯಿಂದ ಒಣ ಮೇವು ತರುವ ಟೆಂಡರ್‌ ಕರೆಯ ಲಾಗಿತ್ತು. ಆದರೆ ಇವರ ದರದಲ್ಲಿ ಯಾರೂ ಟೆಂಡರ್‌ ಪಡೆದುಕೊಂಡಿಲ್ಲ. ಹಾಗಾಗಿ ಸಮಸ್ಯೆಯಾಗಿದೆ ಎಂದರು. ನಮಗೆ ರೈತರಿಂದ ಒಣಮೇವು ಕುರಿತು ಯಾವುದೇ ಬೇಡಿಕೆ ಬಂದಿಲ್ಲ ಎಂದು ಪಶುಸಂಗೋಪನಾ ಇಲಾಖೆಯ ಡಾ| ಧರ್ಮಪಾಲ ಅವರು ತಿಳಿಸಿದರು.

ನೆಕ್ಕಿಲಾಡಿಯಲ್ಲೂ ನೀರಿಲ್ಲ!
ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ದಂಡೆ ಯಲ್ಲಿರುವ ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ನೀರಿನ ಸಮಸ್ಯೆ ಬಗ್ಗೆ ಪಿಡಿಒ ತಿಳಿಸಿದಾಗ, ಎರಡು ಜೀವನದಿಗಳ ಮಧ್ಯೆ ಇರುವ ನೆಕ್ಕಿಲಾಡಿಯಲ್ಲಿ ನೀರಿಲ್ಲ ಎಂದರೆ ಅರ್ಥವೇನು? ನೀವು ಪೂರಕ ವ್ಯವಸ್ಥೆ ಮಾಡಿಕೊಂಡಿದ್ದರೆ ಈ ಸಮಸ್ಯೆ ಉಂಟಾಗುತ್ತಿರಲಿಲ್ಲ ಎಂದು ಶಾಸಕರು ಹೇಳಿದರು.

Advertisement

ಪಿಡಿಒಗಳಿಗೆ ಇಒ ತರಾಟೆ
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್‌ ಭಂಡಾರಿ ಪಿಡಿಒಗಳ ಕಾರ್ಯವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ನಿಮ್ಮ ಕೆಲಸ ಸಮರ್ಪಕವಾಗಿಲ್ಲ. 5 ಹೊಸ ಕೊಳವೆಬಾವಿ ಬೇಕು ಎಂದು ಕೇಳಿದ್ದೀರಿ. 2 ವರ್ಷಗಳಿಂದ ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಿಮಗೆ ಯಾವ ಭಾಗದಲ್ಲಿ ನೀರಿನ ಸಮಸ್ಯೆ ಉಂಟಾಗುತ್ತದೆ. ಅದಕ್ಕೆ ಏನು ಪೂರಕ ಕಾರ್ಯ ಮಾಡಿಕೊಳ್ಳಬೇಕು ಎಂಬುದು ತಿಳಿಯುತ್ತಿಲ್ಲ. ಕೇಳಿದ್ದನ್ನೆಲ್ಲ ಕೊಡಲು ಟಾಸ್ಕ್ಫೋರ್ಸ್‌ ಹಣ ಎಲ್ಲಿದೆ ಎಂದು ಖಾರವಾಗಿ ಪ್ರಶ್ನಿಸಿದರು.

ಕರೆ ಸ್ವೀಕರಿಸದಿದ್ದರೆ ಕ್ರಮ
ತಾಲೂಕಿನ ಕೆಲವು ಪಿಡಿಒಗಳು ಜನರ ಅಗತ್ಯ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಮೊಬೈಲ್‌ “ನಾಟ್‌ರೀಚೆಬಲ್‌’ ಆಗಿರುತ್ತದೆ. ಇದೊಂದು ಯುದ್ಧ ಸನ್ನದ್ಧ ಸ್ಥಿತಿ. ಎಲ್ಲ ಅಧಿಕಾರಿಗಳೂ ಯೋಧರಂತೆ ಕೆಲಸ ಮಾಡಬೇಕು. ಗ್ರಾ.ಪಂ. ಮಟ್ಟದ ಅಧಿಕಾರಿಗಳು ಕರ್ತವ್ಯದ ಸ್ಥಳದಲ್ಲೇ ಇರಬೇಕು ಎಂಬ ನಿಯಮವಿದೆ. ಆದರೂ ಕೆಲವರು ಜನರಿಗೆ ಸಿಗುತ್ತಿಲ್ಲ ಎಂಬ ದೂರುಗಳಿವೆ. ಇನ್ನು ಮುಂದೆ ಹಾಗಾಗಬಾರದು. ಅಗತ್ಯ ಕರೆ ಸ್ವೀಕರಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ಹಾಗೂ ಉಪವಿಭಾಗಾಧಿಕಾರಿಗಳು ಪಿಡಿಒಗಳಿಗೆ ಎಚ್ಚರಿಕೆ ನೀಡಿದರು.

ಪಡಿತರ ಕಾರ್ಡುದಾರರ ವಿವರ
ತಾಲೂಕಿನಲ್ಲಿ ಒಟ್ಟು 41,112 ಬಿಪಿಎಲ್‌ ಹಾಗೂ 3,995 ಅಂತ್ಯೋದಯ ಕಾರ್ಡುದಾರರಿದ್ದಾರೆ. ಇವರಿಗೆ ರಾಜ್ಯ ಸರಕಾರದ ವತಿಯಿಂದ ಪಡಿತರ ವಿತರಣೆ ನಡೆದಿದೆ. ಜತೆಗೆ 11,466 ಎಪಿಎಲ್‌ ಕಾರ್ಡುದಾರರಿಗೆ ಪಡಿತರ ವಿತರಣೆ ಮಾಡಲಾಗಿದೆ. 14,984 ಎಪಿಎಲ್‌ ಕಾರ್ಡುದಾರರು ಅಕ್ಕಿ ಬೇಡ ಎಂದು ತಿಳಿಸಿದ್ದಾರೆ ಎಂದು ತಹಶೀಲ್ದಾರ್‌ ರಮೇಶ್‌ ಬಾಬು ತಿಳಿಸಿದರು. ನಗರಸಭಾ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next