Advertisement

ಪುತ್ತೂರು: ಒಂದೇ ವಾರ್ಡ್‌ನ 62 ಕಡೆ ಮಳೆಕೊಯ್ಲು

11:37 PM Jul 28, 2019 | Team Udayavani |

ಪುತ್ತೂರು : ಮಳೆಯ ಅನಿಶ್ಚಿತತೆ ಆತಂಕದ ಮಧ್ಯೆ ತಮ್ಮ ವಾರ್ಡ್‌ನಲ್ಲಿ ಉಸ್ತುವಾರಿ ವಹಿಸಿಕೊಂಡು ನಗರಸಭಾ ಸದಸ್ಯರೊಬ್ಬರು ಜಲ ಸಾಕ್ಷರತೆಗೆ ಸಾಕ್ಷಿಯಾಗುತ್ತಿದ್ದಾರೆ. ತಮ್ಮ ವಾರ್ಡ್‌ನ ಮನೆಗಳು, ಶಾಲೆ, ಅಂಗನವಾಡಿಯಲ್ಲಿ ಒಟ್ಟು 62 ಮಳೆಕೊಯ್ಲು ವ್ಯವಸ್ಥೆ ಕಲ್ಪಿಸುವಲ್ಲಿ ಮುನ್ನುಡಿಯಿಟ್ಟಿದ್ದಾರೆ.

Advertisement

ರೋಟರಿ ಕ್ಲಬ್‌ ಪುತ್ತೂರು ಪೂರ್ವ ಸಂಸ್ಥೆಯು ಮಳೆಕೊಯ್ಲು ಯೋಜನೆಯನ್ನು ತನ್ನ ಸೇವಾ ಯೋಜನೆಯನ್ನಾಗಿ ತೆಗೆದುಕೊಂಡಿತ್ತು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಪುತ್ತೂರು ನಗರಸಭಾ ಪರ್ಲಡ್ಕ ವಾರ್ಡ್‌ನ ಸದಸ್ಯೆ ವಿದ್ಯಾ ಆರ್‌. ಗೌರಿ ಅವರು ತಮ್ಮ ವಾರ್ಡ್‌ನಲ್ಲಿ ಈ ವ್ಯವಸ್ಥೆ ಕಲ್ಪಿಸುವಂತೆ ವಿನಂತಿಸಿಕೊಂಡಿದ್ದಾರೆ. ವಾರ್ಡ್‌ ನ ಮನೆಗಳಿಗೆ ಭೇಟಿ ನೀಡಿ ಮಳೆಕೊಯ್ಲಿನ ಅನಿವಾರ್ಯತೆ ವಿವರಿಸಿದ್ದಾರೆ. ಇದರ ಫಲವಾಗಿ ಈಗ ವಾರ್ಡ್‌ ವ್ಯಾಪ್ತಿಯ 32 ಮನೆಗಳಲ್ಲಿ ಮಳೆಕೊಯ್ಲು ವ್ಯವಸ್ಥೆ ಸಿದ್ಧಗೊಂಡಿದೆ.

ಪಾಂಗಳಾಯಿ ವಾರ್ಡ್‌ನಲ್ಲಿ ಮನೆ ಮನೆಗಳಲ್ಲೂ ಮಳೆಕೊಯ್ಲು ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಪರ್ಲಡ್ಕ ಪಾಂಗಳಾಯಿ ವಾರ್ಡ್‌ನ ಎತ್ತರ ಪ್ರದೇಶದಲ್ಲಿರುವ 32 ಮನೆಗಳಲ್ಲಿ ಮಳೆಕೊಯ್ಲು ಮೂಲಕ ನೀರಿಂಗಿ ಸುವ ಕಾರ್ಯಕ್ರಮ ಅನುಷ್ಠಾನಗೊಳಿಸ ಲಾಗಿದೆ. ಇದರಲ್ಲಿ ವಾರ್ಡ್‌ ವ್ಯಾಪ್ತಿಯ ಶಾಲೆಯಲ್ಲಿ 2 ಹಾಗೂ ಅಂಗನವಾಡಿ ಕೇಂದ್ರದಲ್ಲಿ 1 ಮಳೆಕೊಯ್ಲು ವ್ಯವಸ್ಥೆ ಸೇರಿಕೊಂಡಿದೆ.

ಈಗ ಕೊನೆಯ ಹಂತದಲ್ಲಿರುವ 32 ಮಳೆಕೊಯ್ಲು ವ್ಯವಸ್ಥೆಯ ಸಂಪೂರ್ಣ ವೆಚ್ಚವನ್ನು ರೋಟರಿ ಪುತ್ತೂರು ಪೂರ್ವ ಸಂಸ್ಥೆ ಭರಿಸಿದೆ. ತಲಾ ಒಂದು ಮಳೆಕೊಯ್ಲು ವ್ಯವಸ್ಥೆಗೆ ಅಂದಾಜು 15-20 ಸಾವಿರ ರೂ. ವೆಚ್ಚ ತಗಲುತ್ತದೆ. ಮುಂದೆ 30 ಮನೆಗಳಲ್ಲಿ ಮಳೆಕೊಯ್ಲು ವ್ಯವಸ್ಥೆ ಅಳವಡಿಸಲು ವಾರ್ಡ್‌ ವ್ಯಾಪ್ತಿಯ ದಾನಿಯೊಬ್ಬರು ಮುಂದೆ ಬಂದಿದ್ದಾರೆ. ಇವೆಲ್ಲವೂ ನಗರಸಭಾ ಸದಸ್ಯೆ ವಿದ್ಯಾ ಗೌರಿ ಅವರ ಉಸ್ತುವಾರಿಯಲ್ಲಿ ನಡೆಯುತ್ತಿದೆ.

ಸರಳ ವಿಧಾನ
ಆಯ್ಕೆ ಮಾಡಿದ ಮನೆಯ ಕೊಳವೆ ಬಾವಿ ಅಥವಾ ತೆರೆದ ಬಾವಿಯ ಬಳಿ 3 ಅಡಿ ಆಳ ಮತ್ತು 3 ಅಡಿ ಅಗಲದ ಹೊಂಡ ತೆಗೆದು 2ಅಡಿ ವ್ಯಾಸದ ಮತ್ತು 2.5 ಅಡಿ ಎತ್ತರದ ಫೈಬರ್‌ ಡ್ರಮ್‌ನ್ನು ಹೊಂಡದೊಳಗೆ ಇರಿಸಿ ಅದರ ಸುತ್ತಲೂ ಮರಳು ಮತ್ತು ಜಲ್ಲಿಯನ್ನು ಹಾಕಲಾಗುತ್ತದೆ. ಹಾಗೂ ಡ್ರಮ್‌ನ ಸುತ್ತಲೂ ರಂದ್ರಗಳನ್ನು ಕೊರೆಯಲಾಗುತ್ತದೆ. ಡ್ರಮ್‌ನ ಮುಚ್ಚಳಕ್ಕೆ ಮಳೆನೀರು ಇಳಿಯುವಂತೆ ವ್ಯವಸ್ಥೆ ಮಾಡಲಾಗಿದೆ. ಛಾವಣಿಯ ಮೇಲೆ ಸುರಿದ ಮಳೆ ನೀರು ಪ್ಲಾಸ್ಟಿಕ್‌ ತೊಟ್ಟೆ ಅಥವಾ ಪೈಪ್‌ ಮೂಲಕ ನೇರವಾಗಿ ಡ್ರಮ್‌ಗೆ ಬೀಳುತ್ತದೆ. ಈ ಮೂಲಕ ಮಳೆಕೊಯ್ಲು ಮಾಡಲಾಗುತ್ತದೆ. ನೀರಿಂಗಿಸುವ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಸರಳ ಕ್ರಮ ಇದಾಗಿದೆ.

Advertisement

ಮಾಹಿತಿಗೆ ಸ್ಪಂದನೆ‌
ರೋಟರಿ ವತಿಯಿಂದ ಈ ಮಳೆಕೊಯ್ಲು ಸರಳ ವಿಧಾನದ ಯೋಜನೆಯನ್ನು ಅನುಷ್ಟಾನ ಮಾಡುವ ಮೊದಲು ಈ ಯೋಜನೆಗಾಗಿ ಆಯ್ಕೆ ಮಾಡಿದ ಮನೆಗಳಿಗೆ ಭೇಟಿ ನೀಡಿ ಮಳೆಕೊಯ್ಲು ಯೋಜನೆಯ ಮಾಹಿತಿ ಮತ್ತು ಇದರಿಂದಾಗಿ ಬಾವಿ ಮತ್ತು ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳದ ಪರಿಣಾಮ ನೀರಿನ ಮಟ್ಟ ಏರಿಕೆಯಾಗುವ ಕುರಿತು ವೈಜ್ಞಾನಿಕ ಮಾಹಿತಿಗಳನ್ನು ನೀಡಲಾಯಿತು. ತೋಡಿನ ಬದಿಯ ಮನೆಗಳ ಬದಲು ವಾರ್ಡ್‌ ನಲ್ಲಿರುವ ಎತ್ತರ ಪ್ರದೇಶದ ಮನೆಗಳನ್ನೇ ಆಯ್ಕೆ ಮಾಡಲಾಗಿದೆ.

ಉತ್ತಮ ಸ್ಪಂದನೆ; ಕಾರ್ಯ ಭಾಗಶಃ ಪೂರ್ಣ
ಮಳೆ ಕೊಯ್ಲಿನ ಕುರಿತು ವಾರ್ಡ್‌ನಲ್ಲಿ ಮಾಹಿತಿ ನೀಡಿದಾಗ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಹಾಲಿ ರೋಟರಿ ಕ್ಲಬ್‌ ಪುತ್ತೂರು ಪೂರ್ವದಿಂದ 32 ಮಳೆಕೊಯ್ಲು ವ್ಯವಸ್ಥೆಯನ್ನು ಭಾಗಶಃ ಪೂರ್ಣಗೊಳಿಸಲಾಗಿದೆ. ಮುಂದೆ 30 ಮನೆಗಳಲ್ಲಿ ಮಾಡಲು ದಾನಿಯೊಬ್ಬರು ಮುಂದೆ ಬಂದಿದ್ದಾರೆ. ಮಳೆಕೊಯ್ಲಿನ ಮೂಲಕ ಸಂಗ್ರಹವಾದ ನೀರಿನ ಮರು ಬಳಕೆಯ ಅವಕಾಶವನ್ನು ಆಯಾ ಮನೆಯವರು ಮಾಡಬಹುದು ಅಥವಾ ಭೂಮಿಗೆ ಇಂಗಿಸಬಹುದು.
ವಿದ್ಯಾ ಆರ್‌. ಗೌರಿ, ನಗರಸಭಾ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next