Advertisement

ಪುತ್ತೂರು: 19 ಪ್ರಕರಣಗಳಿಗೆ 1.72 ಲಕ್ಷ ರೂ. ಪರಿಹಾರ

09:50 PM Jul 24, 2019 | mahesh |

ಪುತ್ತೂರು: ಪ್ರತಿವರ್ಷವೂ ಮಳೆ ಒಂದಷ್ಟು ಹಾನಿಯನ್ನು ಮಾಡುತ್ತಿದ್ದು, ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಇಲ್ಲಿಯ ತನಕ ಹಾನಿಯ ಪ್ರಮಾಣ ಅರ್ಧಕ್ಕಿಂತಲೂ ಕಡಿಮೆ ಆಗಿದೆ. ಹೀಗಾಗಿ ಪುತ್ತೂರು ತಾಲೂಕಿನಲ್ಲಿ ಪ್ರಾಕೃತಿಕ ವಿಕೋಪ ಹಾನಿಯ ಪರಿಹಾರ ಮೊತ್ತಕ್ಕಾಗಿ 2019-20ನೇ ಸಾಲಿನಲ್ಲಿ ಕೇವಲ 1.72 ಲಕ್ಷ ರೂ.ಗಳನ್ನು ಮಾತ್ರ ಖರ್ಚು ಮಾಡಲಾಗಿದೆ.

Advertisement

ಮಳೆಗಾಲ ಆರಂಭದ ದಿನಗಳಲ್ಲಿ ಮನೆ, ಸೊತ್ತುಗಳ ಹಾನಿಯ ಜತೆಗೆ ಸಿಡಿಲಿನ ಪರಿಣಾಮ ಜೀವಹಾನಿಯ ಘಟನೆಗಳೂ ನಡೆಯುತ್ತವೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅಂತಹ ದುರ್ಘ‌ಟನೆಗಳು ನಡೆಯದೇ ಇರುವುದರಿಂದ ಪರಿಹಾರದ ಮೊತ್ತದಲ್ಲಿ ಹೆಚ್ಚಿನ ವ್ಯಯವಾಗಿಲ್ಲ. ಎರಡು ತಿಂಗಳ ಮಳೆಗಾಲದಲ್ಲಿ 19 ಪ್ರಕರಣಗಳು ಮಾತ್ರ ಸಂಭವಿಸಿವೆ.

ಹೀಗೆ ವಿಂಗಡನೆ
ತಾಲೂಕು ಆಡಳಿತ ಪ್ರಾಕೃತಿಕ ವಿಕೋಪದ ಹಾನಿಗಾಗಿ ಪರಿಹಾರ ನೀಡುವ ಸಂದರ್ಭ ಪ್ರತಿ ಹಾನಿಯನ್ನು ವಿಂಗಡನೆ ಮಾಡಿಕೊಂಡು ಪರಿಹಾರ ವಿತರಿಸುತ್ತದೆ. ಜೀವ ಹಾನಿ, ಪಕ್ಕಾ ಮನೆ ಸಂಪೂರ್ಣ ಹಾನಿ, ಪಕ್ಕಾ ಮನೆ ತೀವ್ರ ಹಾನಿ, ಪಕ್ಕಾ ಮನೆ ಭಾಗಶಃ ಹಾನಿ, ಕಚ್ಚಾ ಮನೆ ಸಂಪೂರ್ಣ ಹಾನಿ, ಕಚ್ಚಾ ಮನೆ ತೀವ್ರ ಹಾನಿ, ಕಚ್ಚಾ ಮನೆ ಭಾಗಶಃ ಹಾನಿ, ತೋಟಗಾರಿಕಾ ಬೆಳೆ ಹಾನಿ, ಭತ್ತದ ಕೃಷಿ ಹಾನಿ, ಗಾಯಗೊಂಡವರು, ಗುಡಿಸಲು ಹಾನಿ, ದನದ ಹಟ್ಟಿ ಹಾನಿ ಹೀಗೆ ಪರಿಹಾರ ಮೊತ್ತವನ್ನು ವಿಂಗಡಿಸಿ ನೀಡಲಾಗುತ್ತದೆ.

ಪರಿಹಾರ ಮೊತ್ತಗಳ ವಿತರಣೆ
ತಾಲೂಕಿನಲ್ಲಿ ಪ್ರಸ್ತುತ ಪಕ್ಕಾ ಮನೆ ತೀವ್ರ ಹಾನಿಗೆ ಸಂಬಂಧಿಸಿದ 2 ಪ್ರಕರಣಗಳಿಗೆ 56,800 ರೂ., ಪಕ್ಕಾ ಮನೆಯ ಭಾಗಶಃ ಹಾನಿಗೆ ಸಂಬಂಧಿಸಿದ 16 ಪ್ರಕರಣಗಳಿಗೆ 94 ಸಾವಿರ ರೂ., ಒಂದು ದನದ ಹಟ್ಟಿ ಹಾನಿಗೆ 2,100 ರೂ.ಗಳನ್ನು ಪರಿಹಾರವಾಗಿ ವಿತರಿಸಲಾಗಿದೆ. ಹೀಗೆ ಒಟ್ಟು 19 ಪ್ರಕರಣಗಳಿಗೆ 1,52,900 ರೂ.ಗಳನ್ನು ವಿತರಿಸಲಾಗಿದೆ ಎಂದು ಪುತ್ತೂರು ತಾಲೂಕು ಆಡಳಿತ ತಿಳಿಸಿದೆ.

ಒಟ್ಟು 28.10 ಲಕ್ಷ ರೂ.
2019-20ನೇ ಸಾಲಿನ ಪ್ರಾಕೃತಿಕ ವಿಕೋಪ ಪರಿಹಾರಕ್ಕಾಗಿ ಹಿಂದಿನ ಉಳಿಕೆಯ ಮೊತ್ತದಲ್ಲೇ ಪರಿಹಾರ ವಿತರಿಸಲಾಗುತ್ತಿದ್ದು, ಈ ಬಾರಿ ಪರಿಹಾರ ಪಾವತಿಗೆ ಯಾವುದೇ ಅನುದಾನ ತಾಲೂಕಿಗೆ ಬಿಡುಗಡೆಯಾಗಿಲ್ಲ. ಪರಿಹಾರಕ್ಕಾಗಿ 28,10,796 ರೂ.ಗಳಿದ್ದು, ಇದರಲ್ಲಿ 8,06,007 ರೂ. ಮುಂಜಾಗ್ರತಾ ಕ್ರಮದ ಮೊತ್ತವೂ ಸೇರಿಕೊಂಡಿದೆ.

Advertisement

ಪ್ರಸ್ತುತ ಸಾಲಿನಲ್ಲಿ 1,52,900 ರೂ. ಪರಿಹಾರ ಮೊತ್ತವಾಗಿ ವಿತರಿಸಲಾಗಿದ್ದು, ಜತೆಗೆ 19,600 ರೂ.ಗಳನ್ನು ಮುಂಜಾಗ್ರತಾ ಕ್ರಮಕ್ಕಾಗಿ ಖರ್ಚು ಮಾಡಲಾಗಿದೆ. ಹೀಗಾಗಿ ಈ ಸಾಲಿನಲ್ಲಿ ಒಟ್ಟು 1,72,500 ರೂ.ಗಳನ್ನು ಖರ್ಚು ಮಾಡಲಾಗಿದ್ದು, ಪ್ರಸ್ತುತ ತಾಲೂಕು ಆಡಳಿತದ ಖಾತೆಯಲ್ಲಿ ಒಟ್ಟು 26,85,796 ರೂ.ಗಳು ಉಳಿದುಕೊಂಡಿದೆ.

ಸಾಮೆತ್ತಡ್ಕ: ಮಳೆಯಿಂದ ಮನೆಗೆ ಹಾನಿ
ಪುತ್ತೂರು: ಧಾರಾಕಾರ ಮಳೆಯ ಪರಿಣಾಮ ಸಾಮೆತ್ತಡ್ಕ ಅಂಬೇಡ್ಕರ್‌ ಕಾಲನಿಯಲ್ಲಿ ಮನೆಯೊಂದು ಕುಸಿತಗೊಂಡ ಘಟನೆ ಬುಧವಾರ ನಡೆದಿದ್ದು, ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ.

ಕೂಲಿ ಕಾರ್ಮಿಕೆ ವೃದ್ಧೆ ಗಿರಿಜಾ ಅವರ ಮನೆಗೆ ಹಾನಿಯಾಗಿದ್ದು, ಪುತ್ರ ಕೂಲಿ ಕಾರ್ಮಿಕರಾಗಿದ್ದು, ಅವರ ಪತ್ನಿ ಹಾಗೂ ಮೂವರು ಪುತ್ರರು ಮನೆಯಲ್ಲಿ ವಾಸವಾಗಿದ್ದರು. ಘಟನೆಯ ವೇಳೆ ಮನೆಮಂದಿ ಹೊರಗೆ ಓಡಿಬಂದಿದ್ದು, ಯಾವುದೇ ಜೀವಹಾನಿಯ ಘಟನೆ ನಡೆದಿಲ್ಲ.

ಮನೆಯ ಗೋಡೆಗಳನ್ನು ಮಣ್ಣು ಮತ್ತು ಮರಳಿನ ಮಿಶ್ರಣದಿಂದ ನಿರ್ಮಾಣಗೊಳಿಸಲಾಗಿದ್ದು, ಅದಕ್ಕೆ ನೀರು ಬಿದ್ದ ಪರಿಣಾಮ ಗೋಡೆಯ ಜತೆಗೆ ಮೇಲ್ಛಾವಣಿಯೂ ಕುಸಿದಿದೆ. ಘಟನೆಯಿಂದ ಸುಮಾರು 1 ಲಕ್ಷ ರೂ. ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.

ಹಾನಿ ಸಾಕಷ್ಟು ಕಡಿಮೆ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪ್ರಾಕೃತಿಕ ವಿಕೋಪದ ಹಾನಿಯು ಅರ್ಧದಷ್ಟು ಕಡಿಮೆಯಿದ್ದು, ಹಾನಿಯಾದ ಪ್ರಕರಣಗಳಿಗೆ ಈಗಾಗಲೇ ಪರಿಹಾರ ಮೊತ್ತವನ್ನು ವಿತರಿಸಲಾಗಿದೆ. ಈ ಬಾರಿಯ ಪ್ರಾಕೃತಿಕ ವಿಕೋಪದ ಪರಿಹಾರ ಮೊತ್ತಕ್ಕಾಗಿ ದ.ಕ. ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುತ್ತದೆ.
– ಬಿ.ಅನಂತಶಂಕರ, ತಹಶೀಲ್ದಾರ್‌, ಪುತ್ತೂರು

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next