Advertisement

ಪುತ್ತೂರು: ಎಂಟನೇ ದಿನಕ್ಕೆ ಗ್ರಾಮೀಣ ಅಂಚೆ ನೌಕರರ ಪ್ರತಿಭಟನೆ

04:23 PM May 30, 2018 | Team Udayavani |

ಪುತ್ತೂರು : ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರು ಪುತ್ತೂರು ಪ್ರಧಾನ ಅಂಚೆ ಕಚೇರಿ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಪ್ರತಿಭಟನೆ ಮಂಗಳವಾರ 8ನೇ ದಿನಕ್ಕೆ ಕಾಲಿಟ್ಟಿದ್ದು, 200ಕ್ಕೂ ಹೆಚ್ಚು ಮಂದಿ ಪಾಲ್ಗೊಂಡರು. ಧರಣಿ ನಡೆಸಿದ ನೌಕರರು ನಗರದಲ್ಲಿ ಮೆರವಣಿಗೆಯಲ್ಲಿ ಸಾಗಿ ಸಹಾಯಕ ಕಮಿಷನರ್‌ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು.

Advertisement

ಧರಣಿನಿರತರನ್ನು ಉದ್ದೇಶಿಸಿ ಮಾತನಾಡಿದ ಅಖೀಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ವಿಭಾಗೀಯ ಕಾರ್ಯದರ್ಶಿ ಸುನೀಲ್‌ ದೇವಾಡಿಗ, ಗ್ರಾಮೀಣ ಅಂಚೆ ನೌಕರರ ಸಮಸ್ಯೆಯ ಅಧ್ಯಯನ ನಡೆಸಿ ನೀಡಿದ ವರದಿಯನ್ನು ಕ್ಯಾಬಿನೆಟ್‌ನಲ್ಲಿ ಅನುಮೋದಿಸಲು 2 ತಿಂಗಳು ಕಳೆದರೂ ಕೇಂದ್ರ ಸರಕಾರಕ್ಕೆ ಸಾಧ್ಯವಾಗಿಲ್ಲ. ಇಲಾಖೆಯ ಆಧಿಕಾರಿಗಳು ನೌಕರರ ಕುರಿತು ತಪ್ಪು ಮಾಹಿತಿ ನೀಡಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. 

ಸರಕಾರ ಬೇಡಿಕೆಗಳನ್ನು ಈಡೇರಿಸಲು ಎಷ್ಟು ಸಮಯ ಬೇಕಾದರೂ ತೆಗೆದುಕೊಳ್ಳಲಿ. ಆದರೆ ಲಿಖೀತ ರೂಪದಲ್ಲಿ
ಯಾವಾಗ ಸರಿಯಾಗುತ್ತದೆ ಎಂಬುದನ್ನು ತಿಳಿಸಲಿ ಎಂದು ರಾಷ್ಟ್ರೀಯ ಸಮಿತಿ ಕೇಳಿಕೊಂಡಿದೆ ಎಂದರು.

ಉಪವಾಸದ ಎಚ್ಚರಿಕೆ
ಯಾವುದೇ ಕಾರಣಕ್ಕೂ ನ್ಯಾಯಕ್ಕಾಗಿ ನಡೆಯುತ್ತಿರುವ ಈ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಹೋರಾಟವನ್ನು
ಹತ್ತಿಕ್ಕುವ ಅಧಿಕಾರಿಗಳ ಪ್ರಯತ್ನವನ್ನೂ ನಡೆಯಲು ಬಿಡುವುದಿಲ್ಲ. ಇದು ಹೀಗೇ ಮುಂದುವರಿದರೆ ಗ್ರಾಮೀಣ ಮಟ್ಟದಿಂದಲೇ ಜನತೆ ದಂಗೆ ಏಳುವ ಭೀತಿ ಇದೆ. ಕೇಂದ್ರ ಸರಕಾರ ಹಾಗೂ ಇಲಾಖೆಯ ಅಧಿಕಾರಿಗಳು ಗ್ರಾಮೀಣ ನೌಕರರನ್ನು ಶೋಷಣೆ ಮಾಡುವುದರ ವಿರುದ್ಧ ನೌಕರರು ನಾಳೆಯಿಂದ ಉಪವಾಸ ಸತ್ಯಾಗ್ರಹ ನಡೆಸಲೂ ಸಿದ್ಧ. ಅನಾಹುತವಾದರೆ ಹಿರಿಯ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಪ್ರಧಾನ ಅಧೀಕ್ಷಕರ ಭೇಟಿ
ಪುತ್ತೂರು ವಿಭಾಗ ಪ್ರಧಾನ ಅಂಚೆ ಅಧೀಕ್ಷಕ ಎಲ್‌. ಮಂಜುನಾಥ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿದರು. ಗ್ರಾಮೀಣ ಅಂಚೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರಕಾರದಿಂದ ಮಾತ್ರ ಸಾಧ್ಯ. ನೌಕರರ ಬೇಡಿಕೆಗಳ ಮನವಿ ಇದ್ದರೆ ಅದನ್ನು ಹಿರಿಯ ಅಧಿಕಾರಿಗಳ ಮೂಲಕ ತಲುಪಿಸಲಾಗುವುದು ಎಂದು ಹೇಳಿದರು.

Advertisement

ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಕರ್ನಾಟಕ ವಲಯ ಉಪಾಧ್ಯಕ್ಷ ಬಿ. ಪ್ರಮೋದ್‌ ಕುಮಾರ್‌, ವಿಭಾಗೀಯ ಅಧ್ಯಕ್ಷ ವಿಠಲ ಪೂಜಾರಿ, ಗೌರವಾಧ್ಯಕ್ಷ ಜಗತ್ಪಾಲ ಹೆಗ್ಡೆ, ಬಂಟ್ವಾಳ ವಲಯ ಕಾರ್ಯದರ್ಶಿ ಗಣೇಶ್‌, ಬೆಳ್ತಂಗಡಿಯ ಶೇಖರ್‌, ಸಂತೋಷ್‌ ಪುತ್ತೂರು, ಸುಳ್ಯದ ಕಮಲಾಕ್ಷ ಸೇರಿದಂತೆ ಕಾರ್ಕಳ, ಮೂಡಬಿದ್ರೆ, ಸುಳ್ಯ, ಪುತ್ತೂರು, ಬಂಟ್ವಾಳ ವಲಯಗಳ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡರು.

ಮೆರವಣಿಗೆಯಲ್ಲಿ ಸಾಗಿ ಮನವಿ
ಅನಂತರ 200ಕ್ಕೂ ಮಿಕ್ಕಿ ನೌಕರರು ನಗರದ ಮುಖ್ಯರಸ್ತೆಯ ಮೂಲಕ ಘೋಷಣೆಗಳನ್ನು ಕೂಗುತ್ತ ಸಾಗಿ ಸಹಾಯಕ ಕಮಿಷನರ್‌ ಅವರ ಮೂಲಕ ಬೇಡಿಕೆಗಳ ಈಡೇರಿಸುವಂತೆ ಕೇಂದ್ರ ಸರಕಾರಕ್ಕೆ ಒತ್ತಾಯಿಸಿ ಮನವಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next