Advertisement

ಪುತ್ತೂರು: ಗ್ರಾಮೀಣ ಶಾಲೆ ಮಕ್ಕಳಿಗಾಗಿ ಹಳೆ ವಿದ್ಯಾರ್ಥಿಯ ಸೈಕಲ್‌ ಸವಾರಿ

03:22 PM Jun 15, 2024 | Team Udayavani |

ಪುತ್ತೂರು: ತಾನು ಕಲಿತ ಶಾಲೆಯಲ್ಲಿನ ಮಕ್ಕಳು ವಿವಿಧ ರಂಗಗಳಲ್ಲಿ ಪ್ರತಿಭೆ ತೋರ್ಪಡಿಸಲು ಬೇಕಾದ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಶಾಲಾ ಹಳೆ ವಿದ್ಯಾರ್ಥಿಯೋರ್ವ 800 ಕಿ.ಮೀ.ದೂರ ಸೈಕಲ್‌ ಸವಾರಿ ನಡೆಸಿ ದೇಣಿಗೆ ಸಂಗ್ರಹಿಸುವ ಅಭಿಯಾನವೀಗ 300 ಕೀ.ಮೀ ದೂರ ಕ್ರಮಿಸಿದೆ. ಪಾಣಾಜೆ ಸುಬೋಧ ಅನುದಾನಿತ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ, ಪ್ರಸ್ತುತ ಬೆಂಗಳೂರಿನಲ್ಲಿ ಈವೆಂಟ್‌ ಆರ್ಗನೈಸರ್‌ ಆಗಿ ಉದ್ಯೋಗದಲ್ಲಿರುವ ರಾಕೇಶ್‌ ರೈ ಕಡಮ್ಮಾಜೆ ಈ ಅಭಿಯಾನದ ರೂವಾರಿ.

Advertisement

ಏನಿದು ಸೈಕಲ್‌ ಸವಾರಿ
ರಾಕೇಶ್‌ ರೈ ಅವರಿಗೆ ಬಾಲ್ಯದಿಂದಲೇ ಬೈಸಿಕಲ್‌ ಸವಾರಿ ಅಂದರೆ ತುಂಬು ಪ್ರೀತಿ. ಅವರ ತನ್ನ ಸ್ನೇಹಿತರ ಜತೆಗೂಡಿ ಹಲವಾರು ಕಿ.ಮೀ. ದೂರ ಸೈಕಲ್‌ ಯಾನ ಮಾಡಿದ್ದಾರೆ. ಉದ್ಯೋಗ ನಿಮಿತ್ತ ಬೆಂಗಳೂರಿಗೆ ಬಂದ ಬಳಿಕವೂ ಈ ಪ್ರೀತಿ ದೂರವಾಗಿಲ್ಲ. ಇದನ್ನು ಸದುದ್ದೇಶಕ್ಕೆ ಬಳಸುವ ನಿಟ್ಟಿನಲ್ಲಿ ಯೋಚನೆ ಮೂಡಿತ್ತು. ತಾನು ಹೈಸ್ಕೂಲು ವಿದ್ಯಾಭ್ಯಾಸ ಮಾಡಿದ ಸುಬೋಧ ಅ. ಪ್ರೌಢಶಾಲೆಯ ಮಕ್ಕಳಿಗೆ ಅನುಕೂಲವಾಗುವಂತೆ ಶಾಲೆಯಲ್ಲಿ ಕೆಲ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸೈಕಲ್‌
ಯಾನ ನಡೆಸಿ ದೇಣಿಗೆ ಸಂಗ್ರಹಿಸುವ ಅಭಿಯಾನವನ್ನು 2023 ಸೆಪ್ಟಂಬರ್‌ನಲ್ಲಿ ಪ್ರಾರಂಭಿಸಿದ್ದರು.

300 ಕಿ.ಮೀ.ಸಂಚಾರ ಪೂರ್ಣ
ಸುಮಾರು 800 ಕ್ಕೂ ಅಧಿಕ ಕಿ.ಮೀ.ದೂರ ಸೈಕಲ್‌ ಯಾನ ನಡೆಸಿ ದೇಣಿಗೆ ಸಂಗ್ರಹಿಸುವ ಗುರಿ ಹೊಂದಿ ದ್ದಾರೆ. ಇದು ನಿರಂತರ ಅಲ್ಲ. ಬಿಡುವಿದ್ದಾಗ ಮಾತ್ರ ಸೈಕಲ್‌ ಯಾನ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆರಂಭಿಸಿದ್ದರು. ಕೆಲಸದ ಒತ್ತಡದ ಕಾರಣ ನಂತರ
ನಾಲ್ಕು ತಿಂಗಳು ವಿರಾಮ ತೆಗೆದುಕೊಂಡರು. ಪ್ರಸ್ತುತ ರಜಾ ದಿನವಾದ ಸೋಮವಾರ, ಮಂಗಳವಾರ ಅವರ ಸೈಕಲ್‌ ಸಂಚಾರ ಮುಂದುವರಿದಿದೆ.

ಈಗ 300 ಕಿ.ಮೀ. ದೂರ ಪೂರ್ಣಗೊಂಡಿದೆ. ಇನ್ನೂ 500 ಕಿ.ಮಿ.ಗೂ.ಅಧಿಕ ದೂರ ಸಂಚಾರದ ಗುರಿ ಇದ್ದು 2025 ಡಿಸೆಂಬರ್‌ ಒಳಗೆ ಈ ಗುರಿ ಪೂರ್ಣಗೊಳಿಸುವ ಉದ್ದೇಶ ಹೊಂದಿದ್ದಾರೆ. ಸುಬೋಧ ಅನುದಾನಿತ ಪ್ರೌಢಶಾಲೆಯಲ್ಲಿ ರಾಕೇಶ್‌ ರೈ ಅವರು 2002 ರ ಬ್ಯಾಚ್‌ನ ವಿದ್ಯಾರ್ಥಿ. ಉತ್ತಮ ಕ್ರೀಡಾಪಟು ಕೂಡ ಆಗಿದ್ದರು. ಆಗ ಹೆಚ್ಚಿನ ಸ್ಕೂಲ್‌ಗ‌ಳಲ್ಲಿ ಮಕ್ಕಳಿಗೆ ಮೂಲ ಸೌಕರ್ಯದ ಕೊರತೆ ಇತ್ತು. ಈಗಲೂ ಗ್ರಾಮಾಂತರ ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಹಿಂದಿನ ಹಾಗೆ ಅವರಿಗೆ ಸೌಲಭ್ಯದ ಕೊರತೆ ಉಂಟಾಗಬಾರದು ಅನ್ನುವ ಆಶಯದಿಂದಲೇ ರಾಕೇಶ್‌ ರೈ ಅವರು ಈ ಸೈಕಲ್‌ ಯಾನ ಕೈಗೆತ್ತಿಕೊಂಡಿದ್ದಾರೆ.
ಕ್ರೋಢೀಕರಣವಾದ ಹಣದಿಂದ ಗ್ರಂಥಾಲಯ ಸ್ಥಾಪನೆಯಂತಹ ಹತ್ತಾರು ಕನಸುಗಳನ್ನು
ಹೊಂದಿದ್ದಾರೆ.

ಎಲ್ಲಿದೆ ಶಾಲೆ
ಪುತ್ತೂರಿನಿಂದ ಸುಮಾರು 23 ಕಿ.ಮೀ ದೂರದಲ್ಲಿ ಕೇರಳ ಕರ್ನಾಟಕದ ಗಡಿಯ ಆರ್ಲಪದವಿನಲ್ಲಿ ಇರುವ ಈ ಶಾಲೆಯಲ್ಲಿ 8, 9 ಮತ್ತು 10ನೇ ತರಗತಿಗಳಲ್ಲಿ ಒಟ್ಟು 86 ವಿದ್ಯಾರ್ಥಿಗಳಿದ್ದಾರೆ. ಖಾಯಂ ಸಿಬಂದಿ ಜತೆ ಆಡಳಿತ ಮಂಡಳಿಯೂ ಸಿಬಂದಿ ನೇಮಿಸಿಕೊಂಡಿದೆ.

Advertisement

ದೇಣಿಗೆ ಸಂಗ್ರಹವೇ ವಿಭಿನ್ನ
ಸೈಕಲ್‌ ಮೂಲಕ ಮನೆ ಮನೆಗೆ ತೆರಳಿ ದೇಣಿಗೆ ಕೊಡಿ ಅನ್ನುವ ಅಭಿಯಾನ ಇದಲ್ಲ. ಇಲ್ಲಿ ರಾಕೇಶ್‌ ಅವರು ತನ್ನ ಸ್ನೇಹಿತರ, ಪರಿಚಯಸ್ಥರಿಗೆ ಈ ಅಭಿಯಾನದ ಬಗ್ಗೆ ಮೊದಲೇ ಮಾಹಿತಿ ನೀಡುತ್ತಾರೆ. ದೇಣಿಗೆ ನೀಡಲು ಮನಸ್ಸಿರುವವರು ಇಂತಹ ದಿನ ಬನ್ನಿ ಎನ್ನುತ್ತಾರೆ. ಆ ದಿನ ರಾಕೇಶ್‌ ಅವರು ಸೈಕಲ್‌ ಮೂಲಕ ಅವರ ಮನೆಗೆ ತೆರಳುತ್ತಾರೆ. ಇಲ್ಲಿ ರಾಕೇಶ್‌ ರೈ ಅವರು ನೇರವಾಗಿ ನಗದು ಪಡೆದುಕೊಳ್ಳುವುದಿಲ್ಲ. ಬದಲಾಗಿ ಪಾಣಾಜೆ ಸುಬೋಧ ಶಾಲೆಗೆ ಸಂಬಂಧಿಸಿದಂತೆ ವಿದ್ಯಾವರ್ಧಕದ ಬ್ಯಾಂಕ್‌ ಖಾತೆಯ ಕ್ಯೂಆರ್‌ ಕೋಡ್‌ ಅನ್ನು ತೋರಿಸುತ್ತಾರೆ. ಸ್ಕ್ಯಾನ್‌ ಮಾಡಿಸಿದ ತತ್‌ಕ್ಷಣ ಹಣ ಆ ಖಾತೆಗೆ ಜಮೆ ಆಗುತ್ತದೆ. ಈ ತನಕ ಒಟ್ಟು 1.16 ಲಕ್ಷ ರೂ.ಸಂಗ್ರಹವಾಗಿದೆ. ಒಟ್ಟು 3 ರಿಂದ 5 ಲಕ್ಷ ರೂ. ತನಕ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ.

ಮಾದರಿ ಗ್ರಂಥಾಲಯ ಗುರಿ
ರಾಕೇಶ್‌ ರೈ ಕಡಮ್ಮಾಜೆ ಶಾಲೆಯ ಮೇಲೆ ಅಪಾರವಾದ ಪ್ರೀತಿ ಅಭಿಮಾನ ಇರುವವರು. ಅವರು ಊರಲ್ಲಿ ಇದ್ದಾಗ ಶಾಲೆಯಲ್ಲಿ ಆಗುವ ಕಾರ್ಯಕ್ರಮಗಳಿಗೆ ನೆರವಾಗುತ್ತಾರೆ. ಶಾಲೆಯಲ್ಲಿ ಒಂದು ಮಾದರಿ ಗ್ರಂಥಾಲಯ ಸ್ಥಾಪಿಸಬೇಕು ಅನ್ನುವ ಗುರಿಯನ್ನು ಇಟ್ಟುಕೊಂಡು ಸೈಕಲ್‌ ಅಭಿಯಾನ ಹಮ್ಮಿಕೊಂಡಿದ್ದಾರೆ. 1,16,000 ರೂ. ಸಂಗ್ರಹಿಸಿ ಶಾಲೆಯ ಖಾತೆಗೆ ಜಮಾ ಮಾಡಿದ್ದಾರೆ.
*ಜಿ.ಮಹಾಬಲೇಶ್ವರ ಭಟ್‌,
ಶಾಲಾ ಸಂಚಾಲಕ

ಸೈಕ್ಲಿಂಗ್‌ ನನ್ನ ಹವ್ಯಾಸ. ಅದನ್ನೇ ಬಳಸಿಕೊಂಡು ನಾನು ಕಲಿತ ಶಾಲೆಯ ಮಕ್ಕಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ
ಅಭಿಯಾನ ನಡೆಸುತ್ತಿದ್ದೇನೆ. ನನ್ನ ಗುರಿ ತಲುಪಿದ ಬಳಿಕ ಸೈಕಲ್‌ ಮೂಲಕವೇ ಬೆಂಗಳೂರಿನಿಂದ ಊರಿಗೆ ಬರಲಿದ್ದೇನೆ. ಸಂಗ್ರಹಗೊಂಡ ಹಣದಲ್ಲಿ ಗ್ರಂಥಾಲಯ, ಕ್ರೀಡಾಕೊಠಡಿ ಪುನರ್‌ ನಿರ್ಮಾಣದ ಗುರಿ ಇರಿಸಲಾಗಿದೆ. ಮುಂದಿನ ದಿನಗಳಲ್ಲಿ ಇತರ ಗ್ರಾಮೀಣ ಕನ್ನಡ ಶಾಲೆಗಳಿಗೂ ನೆರವಾಗಲು ಈ ಅಭಿಯಾನ ಬಳಸಿಕೊಳ್ಳಲು ಉದ್ದೇಶಿಸಿದ್ದೇನೆ.

*ರಾಕೇಶ್‌ ರೈ ಕಡಮ್ಮಾಜೆ

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next