Advertisement
ಕಳೆದ ಸಾಲಿನಲ್ಲಿ ಸರಕಾರ ನಿರ್ಮಲ ಗ್ರಾಮ ಪುರಸ್ಕಾರ ಯೋಜನೆಯಡಿ ದೊಡ್ಡ ಗ್ರಾ.ಪಂ.ಗಳಿಗೆ 4 ಲಕ್ಷ ರೂ. ಹಾಗೂ ಸಣ್ಣ ಗ್ರಾಮಗಳಿಗೆ 2 ಲಕ್ಷ ರೂ. ಅನುದಾನ ನೀಡಿತ್ತು. ಗ್ರಾಮದಲ್ಲಿ ಸ್ವಚ್ಛತೆ ಪಾಲನೆಗೆ ಸಂಬಂಧಿಸಿದಂತೆ ಈ ಅನುದಾನ ಬಳಕೆಯಾಗಬೇಕೆನ್ನುವ ಉದ್ದೇಶವನ್ನು ಸರಕಾರ ಹೊಂದಿತ್ತು. ಕೆಲವು ಗ್ರಾ.ಪಂ. ಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಅನುದಾನ ಬಳಸಿದರೆ, ಹೆಚ್ಚಿನ ಗ್ರಾ.ಪಂ.ಗಳು ಸಮರ್ಪಕ ಕಸ, ತ್ಯಾಜ್ಯ ವಿಲೇವಾರಿ ದೃಷ್ಟಿಯಿಂದ ಪೈಪ್ ಕಾಂಪೋಸ್ಟ್ ರಚನೆಗೆ ಪೈಪ್ ಒದಗಿಸಿದ್ದವು.
ಕಾಂಪೋಸ್ಟ್ ಮಾಡಲು ನೀಡಲಾದ ಪೈಪ್‌ಗೆ ಮನೆಯಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್ ಹೊರತು ಪಡಿಸಿದ ತ್ಯಾಜ್ಯ, ಕಸ ಗಳನ್ನು ಪೈಪ್‌ನೊಳಗೆ ಹಾಕಬೇಕು. 3-4 ತಿಂಗಳು ಹಾಕಿದ ಅನಂತರ ವೇಸ್ಟೇಜ್‌ಗೆ ಎರೆಹುಳು ಹಾಕಿ ಅಥವಾ ಎರೆಹುಳು ಉತ್ಪತ್ತಿಯಾಗುವ ವ್ಯವಸ್ಥೆ ಮಾಡಿ ಗೊಬ್ಬರವಾಗಿ ಪರಿವರ್ತಿಲು ಯೋಜಿಸಲಾಗಿತ್ತು. ಆದರೆ ಕಾಂಪೋಸ್ಟ್ ಉದ್ದೇಶದಿಂದ ಪೈಪ್ ತೆಗೆದುಕೊಂಡು ಹೋದ ಶೇ. 90 ಮಂದಿ ಅದನ್ನು ಬಳಕೆ ಮಾಡಿಕೊಂಡಿಲ್ಲ. ಉದ್ದೇಶ ಈಡೇರಿಲ್ಲ
ಪುತ್ತೂರು ತಾಲೂಕು ವ್ಯಾಪ್ತಿಯ 41 ಗ್ರಾ.ಪಂ.ಗಳಲ್ಲಿ ಸುಮಾರು 5-6 ಸಾವಿರ ಪೈಪ್ ಗಳನ್ನು ಗ್ರಾ.ಪಂ.ಗಳ ಮೂಲಕ ಜನರಿಗೆ ವಿತರಿಸಲಾಗಿದೆ. ಒಂದು ಪೈಪ್‌ಗೆ 100 ರೂ.ನಂತೆ 5-6 ಲಕ್ಷ ರೂ. ಪೈಪ್ ಕಾಂಪೋಸ್ಟ್ ಉದ್ದೇಶಕ್ಕೆ ವಿನಿಯೋಗಿಸಲಾಗಿದೆ. ಆದರೆ ಸಮರ್ಪಕ ಬಳಕೆ ಯಾಗದೇ ಇರುವುದರಿಂದ ಉದ್ದೇಶವೂ ಈಡೇರಿಲ್ಲ, ಅನುದಾನವೂ ವ್ಯರ್ಥವಾಗಿದೆ.
Related Articles
ಗ್ರಾ.ಪಂ.ಗಳು ಪೈಪ್ ವಿತರಿಸುವ ಸಂದರ್ಭ ಮನೆಗಳಿಗೆ ಭೇಟಿ ನೀಡಿ ಜನರಿಗೆ ಮಾಹಿತಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಸಮರ್ಪಕ ನಿರ್ವಹಣೆಯ ಜವಾಬ್ದಾರಿಯನ್ನು ಜನರು ತೋರಿಲ್ಲ. ಯೋಜನೆಯ ಪ್ರಗತಿಯ ಕುರಿತು ಪ್ರತಿ ಬಾರಿಯೂ ನಿಗಾ ವಹಿಸಲು ಸಾಧ್ಯವಿಲ್ಲ. ಜನರು ಆಸಕ್ತಿ ತೋರಿ ಪ್ರಯೋಜನಕಾರಿಯಾಗಿ ಬಳಸಿಕೊಂಡರೆ ಮಾತ್ರ ವ್ಯವಸ್ಥೆ ಸರಿಯಾಗಬಹುದು ಎನ್ನುವುದು ಗ್ರಾ.ಪಂ.ಅಧಿಕಾರಿಗಳ ಮಾತು.
Advertisement
ಗ್ರಾಮೀಣ ಭಾಗಗಳಲ್ಲಿ ಕಸ, ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಸಾಂಪ್ರದಾಯಿಕ ಕ್ರಮಗಳನ್ನೇ ಅನುಸರಿ ಸುತ್ತಿರುವುದರಿಂದ ಪೈಪ್ ಕಾಂಪೋಸ್ಟ್‌ನಂತಹ ಕ್ರಮಗಳ ಅಗತ್ಯವಿರುವುದಿಲ್ಲ ಎನ್ನುವುದು ಹಿರಿಯರೊಬ್ಬರ ಅಭಿಪ್ರಾಯ.
ಜನರಿಗೆ ಆಸಕ್ತಿ ಇಲ್ಲ!ಸ್ವಚ್ಛತೆ ಕುರಿತ ನಿಜವಾದ ಜಾಗೃತಿ ಜನರಲ್ಲಿ ಇನ್ನೂ ಆಗಿಲ್ಲ. ಗ್ರಾ.ಪಂ.ಗಳಿಂದ ಪೈಪ್ ಗಳನ್ನು ಪಡೆದುಕೊಂಡ ಜನರಲ್ಲಿ ಕೆಲವರು ಪೋಸ್ಟ್ ಉದ್ದೇಶಕ್ಕೆ ಅಳವಡಿಸಿ ಮತ್ತೆ ಬೇರೆ ಉದ್ದೇಶಗಳಿಗೆ ಬಳಸಿದರೆ, ಮತ್ತೆ ಕೆಲವರು ಕಸ ಹಾಕಲು, ಕಾಂಪೋಸ್ಟ್ ಮಾಡಲು ಮನಸ್ಸೇ ಮಾಡಿಲ್ಲ. ಜನರಲ್ಲಿ ಆಸಕ್ತಿ ಇಲ್ಲವೋ ಅಥವಾ ಉದಾಸೀನ ಭಾವವೋ ಎನ್ನುವುದು ಅಧಿಕಾರಿಗಳಿಗೂ ತಿಳಿಯುತ್ತಿಲ್ಲ. ಜನ ಮುತುವರ್ಜಿ ವಹಿಸುತ್ತಿಲ್ಲ
ಸ್ವಚ್ಛತೆಯ ಜಾಗೃತಿ ಮನೆಯಿಂದಲೇ ಆರಂಭವಾಗಬೇಕೆಂಬ ಉದ್ದೇಶದಿಂದ ನಿರ್ಮಲ ಗ್ರಾಮ ಪುರಸ್ಕಾರದ ಅನುದಾನದಲ್ಲಿ ಪೈಪ್ ಕಾಂಪೋಸ್ಟ್‌ಗೆ ಒತ್ತು ನೀಡಲಾಗಿತ್ತು. ಜನರಿಗೆ ಜಾಗೃತಿ ಮೂಡಿಸುವ, ಮಾಹಿತಿ ನೀಡುವ ಕೆಲಸವನ್ನು ಮಾಡಲಾಗಿದೆ. ಆದರೆ ಜನರು ಮುತುವರ್ಜಿ ವಹಿಸುತ್ತಿಲ್ಲ. ಚುನಾವಣೆಯ ಬಳಿಕ ಈ ಕುರಿತು ಮತ್ತೆ ಗಮನಹರಿಸಲಾಗುವುದು.
-ಜಗದೀಶ್ ಎಸ್.
ಪುತ್ತೂರು ತಾ.ಪಂ. ಇಒ ರಾಜೇಶ್ ಪಟ್ಟೆ