Advertisement

ಜಗತ್ತಿಗೇ ಪ್ರೇರಣಾದಾಯಕ ವ್ಯಕ್ತಿ ವಿವೇಕಾನಂದರು

05:37 AM Jan 13, 2019 | |

ಪುತ್ತೂರು: ಸುವರ್ಣ ಸಂಭ್ರಮದಲ್ಲಿರುವ ‘ಉದಯವಾಣಿ’ ಪತ್ರಿಕೆ ಮತ್ತು ರಾಮಕೃಷ್ಣ ಪ್ರೌಢಶಾಲೆ ಸಹಭಾಗಿತ್ವದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಯುವ ದಿನವನ್ನು ವಿಶೇಷವಾಗಿ ಆಚರಿಸಲಾಯಿತು. ಸ್ವಾಮಿ ವಿವೇಕಾನಂದರಂತೆ ವಸ್ತ್ರ ಧರಿಸಿದ್ದ ವಿದ್ಯಾರ್ಥಿಗಳು ದೀಪ ಬೆಳಗಿಸಿ ಕಾರ್ಯಕ್ರಮ ವನ್ನು ಉದ್ಘಾಟಿಸಿದ್ದು ವಿಶೇಷ.

Advertisement

ಸವಣೂರು ಸ.ಪ.ಪೂ. ಕಾಲೇಜಿನ ಉಪನ್ಯಾಸಕ ಬಿ.ವಿ. ಸೂರ್ಯನಾರಾಯಣ ಸ್ವಾಮಿ ವಿವೇಕಾನಂದರ ಕುರಿತು ವಿಶೇಷ ಉಪನ್ಯಾಸ ನೀಡಿ, ಓರ್ವ ಸನ್ಯಾಸಿಯಾಗಿ ಜಗತ್ತಿನ ಮನ ಗೆದ್ದ ಮತ್ತು ಪ್ರೇರಣಾದಾಯಕ ವ್ಯಕ್ತಿತ್ವವನ್ನು ಹೊಂದಿದ್ದವರು ವಿವೇಕಾನಂದರು. ಅವರು ಬದುಕಿದ್ದು ಕೇವಲ 39 ವರ್ಷವಾದರೂ ಪರಿಣಾಮಕಾರಿಯಾಗಿ ಬಾಳಿದರು ಎಂದರು.

ಆಧುನಿಕ ಸನ್ಯಾಸಿ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದ ಸ್ವಾಮಿ ವಿವೇಕಾನಂದರ ದೇಶಭಕ್ತಿ ಅಪ್ರತಿಮ ದೇಶಭಕ್ತಿ ಎಂದು ಅಭಿಪ್ರಾಯಿಸಿದ ಅವರು, ಅನಿಸಿದ್ದನ್ನು ನಿರ್ಭೀತಿಯಿಂದ ಹೇಳಿದ ಕಾರಣಕ್ಕೆ ವಿವೇಕಾ ನಂದರು ವೀರ ಸನ್ಯಾಸಿಯಾದರು. ಭಿಕ್ಷುಕರ ದೇಶ ಭಾರತ ಎಂದವರಿಗೆ ಇಲ್ಲಿನ ಸಾಂಸ್ಕೃತಿಕ, ಆಧ್ಯಾತ್ಮಿಕ ಶ್ರೀಮಂತಿಕೆಯನ್ನು ತಿಳಿಸಿ ಜಗತ್ತನ್ನೇ ಗೆದ್ದವರು. ಮಾನ ವತೆಯ ಸೇವೆ ನಿಜವಾದ ಸೇವೆ ಎನ್ನುವ ಅವರ ಸಂದೇಶ ಸರ್ವರಿಗೂ ಮಾದರಿ ಎಂದರು.

ಪ್ರಶ್ನಿಸುವ ಮನೋಭಾವ
ಇಂದು ಯುವ ಸಮುದಾಯದಲ್ಲಿ ಪ್ರಶ್ನಿಸುವ ಮನೋಭಾವ ಕಡಿಮೆಯಾಗಿದೆ. ಯಾವುದನ್ನೂ ಪರೀಕ್ಷಿಸದೆ, ಅನುಭವಿಸದೆ ಒಪ್ಪಿಕೊಳ್ಳದ ವಿವೇಕಾನಂದರ ಗುಣ ವಿದ್ಯಾರ್ಥಿಗಳಿಗೆ ಮಾದರಿ ಎಂದು ಹೇಳಿದ ಅವರು, ಮನಸ್ಸು ಮುಚ್ಚಿದ್ದು ಕಿವಿ ಮಾತ್ರ ತೆರೆದಿರುವವರಿಂದ ವಿಮರ್ಶೆ ಮಾಡಲು ಸಾಧ್ಯವಿಲ್ಲ. ಬಲಿಷ್ಠ ಮರದಂತೆ ಸವಾಲುಗಳನ್ನು ಸ್ವೀಕರಿಸಿ ಮುನ್ನುಗ್ಗಬೇಕೆಂಬ ವಿವೇಕಾನಂದರ ಸಂದೇಶಗಳನ್ನು ಯುವ ಸಮುದಾಯ ಅನುಸರಿಸಬೇಕು ಎಂದರು.

ಸೋಲೇ ಗೆಲುವಿನ ಸೋಪಾನ, ನಮ್ಮ ಸಾಮರ್ಥ್ಯದ ಮೇಲೆ ವಿಶ್ವಾಸವಿರಲಿ, ಏನನ್ನು ಹೇಳಿದ್ದೇವೆಯೋ ಅದಕ್ಕೆ ಸರಿಯಾಗಿ ನಡೆಯಿರಿ ಎನ್ನುವ ವಿವೇಕಾನಂದರ ಜೀವನ ಸೂತ್ರಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.

Advertisement

ಧನಾತ್ಮಕ ಪರಿಣಾಮ
ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಹೇಮನಾಥ ಶೆಟ್ಟಿ ಕಾವು ಮಾತನಾಡಿ, ಶ್ರೀ ರಾಮಕೃಷ್ಣ ಪರಮಹಂಸರ ಹೆಸರಿನ ಶಾಲೆಯಲ್ಲಿ ಅವರ ಶಿಷ್ಯನ ಸಾಧನೆಗಳ ವಿಮರ್ಶೆಯ ಕಾರ್ಯಕ್ರಮ ನಡೆಯುವುದು ಖುಷಿಯ ಸಂಗತಿ. ವಿದ್ಯಾರ್ಥಿಗಳ ಮೇಲೆ ಒಂದಷ್ಟು ಧನಾತ್ಮಕ ಪರಿಣಾಮ ಬೀರುವ ಇಂಥ ಕಾರ್ಯಕ್ರಮ ಏರ್ಪಡಿಸಿದ್ದಕ್ಕೆ ಉದಯವಾಣಿ ಬಳಗಕ್ಕೆ ಅಭಿನಂದನೆ ಸಲ್ಲಿಸಿದರು. ಶಾಲೆಯ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಪಾಲ್ಗೊಂಡರು. ಶಾಲಾ ಮುಖ್ಯಶಿಕ್ಷಕಿ ರೂಪಕಲಾ ಸ್ವಾಗತಿಸಿ, ‘ಉದಯವಾಣಿ’ ವರದಿಗಾರ ರಾಜೇಶ್‌ ಪಟ್ಟೆ ವಂದಿಸಿದರೆ, ಹಿರಿಯ ವರದಿಗಾರ ಗಣೇಶ್‌ ಎನ್‌. ಕಲ್ಲರ್ಪೆ ಹಾಗೂ ಮಾರುಕಟ್ಟೆ ವಿಭಾಗದ ಹರ್ಷ ಎ. ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಹಿರಿಯ ವರದಿಗಾರ ಕಿರಣ್‌ ಕುಮಾರ್‌ ಕುಂಡಡ್ಕ ಕಾರ್ಯಕ್ರಮ ನಿರ್ವಹಿಸಿದರು.

ವಿವೇಕವಾಣಿಯ ಸ್ತುತಿ
ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಪ್ರತ್ಯೇಕ ವಿಭಾಗಗಳ 9 ಮಂದಿ ವಿದ್ಯಾರ್ಥಿಗಳು ವಿವೇಕಾನಂದರ ವೇಷತೊಟ್ಟು ಭಾಗವಹಿಸಿ ಕಾರ್ಯಕ್ರಮದ ಅಂದ ಹೆಚ್ಚಿಸಿದರು. ಈ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ವಿವೇಕವಾಣಿಗಳನ್ನು ಉಚ್ಚರಿಸಿದರು. ವಿದ್ಯಾರ್ಥಿಗಳಾದ ನಿಶಿತ್‌ ಬಿ. ಎಲ್‌. ಹಾಗೂ ಪ್ರಕಾಶ್‌ ವಿವೇಕಾನಂದರ ಜೀವನ, ಸಾಧನೆ, ಸಂದೇಶಗಳ ಕುರಿತು ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next