Advertisement

ಪುತ್ತೂರು: ಪಾನಿಪೂರಿ ತಯಾರಿಕಾ ಘಟಕಕ್ಕೆ ನಗರಸಭೆ ಅಧಿಕಾರಿಗಳ ದಾಳಿ

12:10 PM Sep 28, 2018 | Team Udayavani |

ಪುತ್ತೂರು: ಶುಚಿತ್ವ ನಿರ್ಲಕ್ಷಿಸಿ ಪಾನಿಪೂರಿ ತಯಾರಿಸುತ್ತಿದ್ದ ಘಟಕವೊಂದರ ಮೇಲೆ ನಗರಸಭೆ ಅಧಿಕಾರಿಗಳು ಗುರುವಾರ ಸಂಜೆ ದಾಳಿ ನಡೆಸಿದ್ದಾರೆ. ಘಟಕದ ಮಾಲಕನಿಗೆ ನೋಟಿಸ್‌ ನೀಡಿದ್ದು, ಘಟಕ ಮುಂದುವರಿಸದಂತೆ ಎಚ್ಚರಿಕೆ ನೀಡಲಾಗಿದೆ.

Advertisement

ಕೊಂಬೆಟ್ಟಿನ ಆದಂ ಎಂಬವರ ಮಾಲಕತ್ವದ ಕಟ್ಟಡದಲ್ಲಿ ಮಧ್ಯಪ್ರದೇಶ ಮೂಲದ ರೂಪ್‌ ಸಿಂಗ್‌, ಅವರ ಸಹೋದರ ಕುಲ್‌ದೀಪ್‌ ಸಿಂಗ್‌ ಎಂಬವರು ಸೇಲು, ಹನ್ಸು, ವಿಜಯ್‌ ಎಂಬವರು ಸೇರಿಕೊಂಡು ಪಾನಿಪೂರಿ ತಯಾರಿಸುತ್ತಿದ್ದರು. ಇದನ್ನು ಪುತ್ತೂರಿನ ವಿವಿಧ ಅಂಗಡಿ, ಹೋಟೆಲ್‌ಗ‌ಳಿಗೆ ಪೂರೈಕೆ ಮಾಡಲಾಗುತ್ತಿತ್ತು. ಪಾನಿಪೂರಿಯನ್ನು ಅವೈಜ್ಞಾನಿಕವಾಗಿ, ಯಾವುದೇ ಅಡಿ ಹಾಡು ಹಾಕದೆ ನೆಲದ ಮೇಲೆಯೇ ತಯಾರಿಸು ತ್ತಿರುವುದು ಗಮನಕ್ಕೆ ಬಂದಿದೆ. ಘಟಕದ ಕೋಣೆ, ಪಾನಿಪೂರಿ ತಯಾರಿಸುವ ಪಾತ್ರೆಗಳು, ಪಾತ್ರೆ ತೊಳೆಯುವ ಕೋಣೆ ಶುಚಿತ್ವ ಇಲ್ಲದೆ ದುರ್ವಾಸನೆ ಬೀರುತ್ತಿರುವುದು ಕಂಡು ಬಂದಿದೆ.

ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಿದ ನಗರಸಭೆ ಅಧಿಕಾರಿಗಳು, ಘಟಕದಲ್ಲಿ ತಯಾರಿಸಿಟ್ಟಿದ್ದ 12 ಕೆಜಿಯಷ್ಟು ಪಾನಿಪೂರಿ, 5 ಕೆಜಿ ಕೊಳೆತ ಆಲೂಗಡ್ಡೆ, 5 ಕೆಜಿ ಪ್ಲಾಸ್ಟಿಕ್‌ ಚೀಲ, ಪಾನಿಪೂರಿ ತಯಾರಿಕೆಗೆ ಬಳಸುತ್ತಿದ್ದ ಸಾಮಗ್ರಿ ವಶಕ್ಕೆ ತೆಗೆದುಕೊಂಡಿದ್ದಾರೆ. ಘಟಕದ ಎಲ್ಲೆಡೆ ಶುಚಿತ್ವ ಇಲ್ಲದ ಕಾರಣ ಪಾನಿಪೂರಿ ತಯಾರಿಸದಂತೆ ಎಚ್ಚರಿಕೆ ನೀಡಲಾಗಿದೆ. ಅನುಮತಿ ಇಲ್ಲದೆ ನಡೆಸುತ್ತಿದ್ದ ಘಟಕದ ಮಾಲಕ ರೂಪ್‌ಸಿಂಗ್‌ ಅವರಿಗೆ ನೋಟಿಸ್‌ ನೀಡಲಾಗಿದೆ.

ನಗರಸಭೆಯ ಪೌರಾಯುಕ್ತೆ ರೂಪಾ ಶೆಟ್ಟಿ ಅವರ ನೇತ್ರತ್ವದಲ್ಲಿ ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ, ಪೌರಕಾರ್ಮಿಕರಾದ ಐತ್ತಪ್ಪ, ಗೋಪಾಲ, ಯಶೋದಾ ಹಾಗೂ ಗುಲಾಬಿ ಅವರ ತಂಡ ದಾಳಿ ನಡೆಸಿದೆ. ನಗರಸಭೆ ಸದಸ್ಯ ಪಿ.ಜಿ. ಜಗನ್ನಿವಾಸ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next