Advertisement

ಪುತ್ತೂರು: ರೈ ಅವರ ಪರ ಒಂದೇ ದಿನ 45 ಸಾವಿರಕ್ಕೂ ಅಧಿಕ ಮತದಾರರ ಸಂಪರ್ಕ

06:29 PM May 07, 2023 | Team Udayavani |

ಪುತ್ತೂರು: ಕಾಂಗ್ರೆಸ್‌ ಪಕ್ಷದ ವತಿಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ 220 ಬೂತ್‌ಗಳಲ್ಲಿ ಶನಿವಾರ ನಡೆದ “ನನ್ನ ಬೂತ್‌, ನಾನು ಅಭ್ಯರ್ಥಿ’ ಮನೆ-ಮನೆಗಳ ಸಂಪರ್ಕ ಅಭಿಯಾನದಲ್ಲಿ ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ಅವರ ಪರವಾಗಿ 45 ಸಾವಿರ ಮತದಾರರ ಸಂಪರ್ಕ ನಡೆಯಿತು. ಸಾವಿರಾರು ಕಾರ್ಯಕರ್ತರು ಬೂತ್‌ ಮಟ್ಟದಲ್ಲಿ ಮನೆ ಮನೆ ಭೇಟಿ ಅಭಿಯಾನದಲ್ಲಿ ಪಾಲ್ಗೊಂಡರು.

Advertisement

ಅಭ್ಯರ್ಥಿ ಹಾಗೂ ಬ್ಲಾಕ್‌ ಕಾಂಗ್ರೆಸ್‌ ಮುಖಂಡರ ಸಾರಥ್ಯದಲ್ಲಿ ಮತದಾರರ ಮನೆ ಭೇಟಿ ಮಾಡಿ ಕಾಂಗ್ರೆಸ್‌ ಸರಕಾರದ ಸಾಧನೆ ಹಾಗೂ ಪ್ರಣಾಳಿಕೆಯ ವಿಷಯಗಳ ಬಗ್ಗೆ ಮತದಾರರ ಗಮನಕ್ಕೆ ತರಲಾಯಿತು. ಈ ವೇಳೆ ಮತದಾರರಿಂದಲು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು ಎಂದು ಮುಖಂಡರು ತಿಳಿಸಿದ್ದಾರೆ.

ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ಮಾತನಾಡಿ, ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ 94ಸಿ, ಅಕ್ರಮ ಸಕ್ರಮ ಕಡತಗಳು ವಿಲೇವಾರಿಯಾಗದೆ ಬಾಕಿಯಾಗಿದೆ. ಹಣ ನೀಡದಿದ್ದಲ್ಲಿ ಜನರ ಕೆಲಸ ಆಗುತ್ತಿಲ್ಲ. ಹಣ ನೀಡಿದರೂ ಕೆಲವರಿಗೆ ಸತಾಯಿಸಲಾಗುತ್ತಿದೆ. ಇವೆೆಲ್ಲವನ್ನೂ ಪರಿಹರಿಸಲು ನನಗೆ ಜನರ ಆಶೀರ್ವಾದಬೇಕಾಗಿದೆ ಎಂದ ಅವರು ನಾನು ಯಾರೊಂದಿಗೂ ದ್ವೇಷ ಹೊಂದಿಲ್ಲ. ರಾಜಕೀಯ ವಿಚಾರದಲ್ಲಿ ಕೆಲವೊಂದು ಹೇಳಿಕೆ ನೀಡಿದ್ದೇನೆ ಹೊರತು ಯಾರ ಮೇಲೆಯೂ ವೈಯಕ್ತಿಕ ಆರೋಪ ಮಾಡಿಲ್ಲ ಎಂದರು.

ಅಭಿವೃದ್ಧಿಗೆ ಆದ್ಯತೆ
ಪುತ್ತೂರಿನಲ್ಲಿ ಮೆಡಿಕಲ್‌ ಕಾಲೇಜು ಸ್ಥಾಪನೆ, 24 ತಾಸು ಕುಡಿಯುವ ನೀರಿನ ಸೌಲಭ್ಯ, 300 ಎಕರೆ ಜಾಗದಲ್ಲಿ ಸ್ವ ಉದ್ಯೋಗಕ್ಕೆ ಪೂರಕ ಯೋಜನೆ ಸೇರಿದಂತೆ ಒಟ್ಟು 20 ಸಾವಿರ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವುದಾಗಿ ಘೋಷಿಸಿದ ಅಶೋಕ್‌ ಕುಮಾರ್‌ ರೈ, ಬಿಜೆಪಿಗರು ಕಾಂಗ್ರೆಸ್‌ ಪಕ್ಷದ ಗ್ಯಾರೆಂಟಿ ಕಾರ್ಡ್‌ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕಾಂಗ್ರೆಸ್‌ ಪಕ್ಷವು ಕೃಷಿ ಪಂಪ್‌ಗೆ ಉಚಿತ ವಿದ್ಯುತ್‌ ನೀಡಿರುವುದು ಅವರಿಗೆ ಮರೆತು ಹೋಗಿದೆಯೇ ಎಂದು ಪ್ರಶ್ನಿಸಿದರು.

ಮೇ 8 : ಬೃಹತ್‌ ರೋಡ್‌ ಶೋ 25 ಸಾವಿರ ಮಂದಿಯ ನಿರೀಕ್ಷೆ
ಮೇ 8 ರಂದು ಸಂಜೆ 3 ಗಂಟೆಗೆ ಪುತ್ತೂರು ನಗರದಲ್ಲಿ ಬೃಹತ್‌ ರೋಡ್‌ ಶೋ ನಡೆಯಲಿದೆ. ಬೊಳುವಾರು ಜಂಕ್ಷನ್‌ನಿಂದ ದರ್ಬೆ ಜಂಕ್ಷನ್‌ ತನಕ ರ‍್ಯಾಲಿ ಸಾಗಲಿದೆ.ರ‍್ಯಾಲಿಯಲ್ಲಿ ಚಿತ್ರನಟಿ ರಮ್ಯಾ ಅವರು ಭಾಗವಹಿಸಲಿದ್ದಾರೆ. ಮೇ 7 ರಂದು ವಿಟ್ಲ ಮತ್ತು ಉಪ್ಪಿನಂಗಡಿಯಲ್ಲಿ ಮತಯಾಚನೆಯ ರ‍್ಯಾಲಿ ನಡೆಯಲಿದೆ ಎಂದು ಅಶೋಕ್‌ ಕುಮಾರ್‌ ರೈ ಹೇಳಿದರು. ಈ ಸಂದರ್ಭದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ವಿಟ್ಲ ಉಪ್ಪಿನಂಗಡಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಡಾ|ರಾಜಾರಾಂ ಕೆ.ವಿ., ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ, ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಭಾಸ್ಕರ ಗೌಡ ಕೋಡಿಂಬಾಳ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next