ಪುತ್ತೂರು: ಹಣ ಹೂಡಿಕೆ ಯೋಜನೆಯ ಮೂಲಕ ಬೆಳ್ತಂಗಡಿ ಯ ಕಲ್ಲುಗುಡ್ಡೆಯ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿ ಜೀವ ಬೆದರಿಕೆಯೊಡ್ಡಿರುವ ಕುರಿತು ನಡೆದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ ಓರ್ವನನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂ ರು ತಾಲೂಕಿನ ಧರ್ಮಪುರ ಗ್ರಾಮದ ಸಕ್ಕಾರ ನಿವಾಸಿ ಸೋಮೇಶ್ವರ (38) ಬಂಧಿತ ಆರೋಪಿ.
ಬೆಳ್ತಂಗಡಿ ತಾಲೂಕಿನ ಕಲ್ಲಗುಡ್ಡೆ ನಿವಾಸಿ ಗಣೇಶ್ ಅವರು ಕುಶಾಲ ನಗರದಲ್ಲಿ ಹಿಂದುಸ್ತಾನ್ ಇಸ್ಕಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನಲ್ಲಿ ಪ್ರತಿನಿಧಿ ಯಾಗಿರುವ ಸಂದರ್ಭ ಅವರು ಆರೋಪಿ ಸೋಮೇಶ್ವರ ಸಹಿತ 13 ಮಂದಿ ತಿಳಿಸಿದ ಆರ್.ಟಿ. ಯೋಜನೆಯಲ್ಲಿ ಇತರ ಗ್ರಾಹಕರನ್ನು ಸೇರಿಸಿ 15 ಲಕ್ಷ ನಗದನ್ನು 3 ವರ್ಷ ಗಳಿಗೆಂದು ಪಾವತಿ ಮಾಡಿದ್ದರು. ಆದರೆ ಆರೋಪಿಗಳು ಬಳಿಕ ಬಡ್ಡಿ, ಅಸಲನ್ನೂ ವಾಪಸ್ ಮಾಡದೆ ವಂಚನೆ ಮಾಡಿದ್ದರು. ಈ ಕುರಿತು ಪ್ರಶ್ನಿಸಿದಾಗ ಆರೋಪಿಗಳು ಜೀವ ಬೆದರಿಕೆಯೊಡ್ಡಿದ್ದರು.
ಘಟನೆಯ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಮತ್ತು ಜೀವ ಬೆದರಿಕೆ ಆರೋಪದ ಪ್ರಕರಣ ದಾಖಲಾಗಿತ್ತು.
ಆರೋಪಿಗಳು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿ ಕೊಂಡಿದ್ದರಿಂದ ನ್ಯಾಯಾಲಯ ಅವರ ಬಂಧನಕ್ಕೆ ವಾರಂಟ್ ಜಾರಿ ಮಾಡಿತ್ತು. ಇದೀಗ 11ನೇ ಆರೋಪಿ ಸೋಮೇಶ್ವರನನ್ನು ಚಿತ್ರದುರ್ಗ ಜಿಲ್ಲೆಯಿಂದ ಪೊಲೀಸರು ಬಂಧಿಸಿ ಕರೆ ತಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ಆರೋಪಿ ಗೆ ನ್ಯಾಯಾಂಗ ಬಂಧನ ವಿಧಿಸಿದೆ.