Advertisement

ಪುತ್ತೂರು ಆಸ್ಪತ್ರೆ: ಕೈಕೊಡುವ ಜನರೇಟರ್‌!

11:31 AM May 30, 2018 | Team Udayavani |

ಪುತ್ತೂರು: ಮಳೆಗಾಲ ಆರಂಭವಾಗಿದೆ. ಕಾಯಿಲೆಗಳು ಬಾಧಿಸುತ್ತಿವೆ. ರೋಗಿಗಳು ಆಸ್ಪತ್ರೆಗಳಿಗೆ ಧಾವಿಸುತ್ತಿದ್ದಾರೆ. ಆಗಾಗ ವಿದ್ಯುತ್‌ ಕೈಕೊಟ್ಟ ಸಂದರ್ಭದಲ್ಲಿ ಬಳಕೆಯಾಗಬೇಕಾದ ಜನರೇಟರ್‌ ಅವ್ಯವಸ್ಥೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದೊಡ್ಡ ಸಮಸ್ಯೆಯನ್ನು ತಂದೊಡ್ಡಿದೆ.

Advertisement

ಸರಕಾರಿ ಆಸ್ಪತ್ರೆಯಲ್ಲಿ ರಕ್ತನಿಧಿ, ಡಯಾಲಿಸಿಸ್‌, ಎಕ್ಸ್‌ರೇ, ರಕ್ತ, ಮೂತ್ರ, ಕಫ ಪರೀಕ್ಷಾ ವ್ಯವಸ್ಥೆಯಿದೆ. ತುರ್ತು ನಿಗಾ ವಿಭಾಗ, ಶಸ್ತ್ರಚಿಕಿತ್ಸೆ, ಹೆರಿಗೆ ವ್ಯವಸ್ಥೆ ಎಲ್ಲವೂ ಇದೆ. ಉತ್ತಮ ಸೇವೆ ನೀಡುವ ವೈದ್ಯರಿದ್ದಾರೆ. ಆದರೆ ವಿದ್ಯುತ್‌ ವ್ಯವಸ್ಥೆ ಕೈಕೊಟ್ಟಾಗ ಅತಿ ಅಗತ್ಯವಾಗಿ ಇರಲೇ ಬೇಕಾಗಿದ್ದ ಜನರೇಟರ್‌ ವ್ಯವಸ್ಥೆ ಮಾತ್ರ ಇಲ್ಲಿ ಸಮರ್ಪಕವಾಗಿಲ್ಲ. ಪದೇ ಪದೆ ಕೆಡುತ್ತದೆ.

ಹಳೆಯ ಕಾಲದ 50 ಕೆವಿ ಸಾಮರ್ಥ್ಯದ ದೊಡ್ಡ ಜನರೇಟರ್‌ ಇದೆ. ಕೆಟ್ಟು ಹೋಗಿರುವ ಇನ್ನೊಂದು ಸಣ್ಣ ಜನರೇಟರ್‌ ಮೂಲೆ ಸೇರಿದೆ. ದೊಡ್ಡ ಜನರೇಟರ್‌ನ ರಿಪೇರಿಗೆ ಪ್ರತಿ ವರ್ಷ ಬಹಳಷ್ಟು ಹಣ ವ್ಯಯಿಸಬೇಕಾಗಿ ಬರುತ್ತಿದೆ. ಈ ಜನರೇಟರ್‌ ಕೈಕೊಟ್ಟಾಗೆಲ್ಲ ಬಾಡಿಗೆ ಜನರೇಟರ್‌ ತಂದು ವಿದ್ಯುತ್‌ ಪೂರೈಸುವುದು ಇಲ್ಲಿ ಅಭ್ಯಾಸವಾಗಿದೆ.

ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಹೊಸ ಜನರೇಟರ್‌ ವ್ಯವಸ್ಥೆಗಾಗಿ ಜಿಲ್ಲಾ ಆರೋಗ್ಯಾಧಿಕಾರಿ ಸಹಿತ ಸಂಬಂಧಪಟ್ಟವರಿಗೆ ಮನವಿ ಮಾಡುತ್ತಿದ್ದರೂ ಸ್ಪಂದನೆ ಸಿಕ್ಕಿಲ್ಲ. ವಿದ್ಯುತ್‌ ಸಮಸ್ಯೆಯ ಪರಿಹಾರಕ್ಕಾಗಿ ಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಷಿನ್‌ ಒಬ್ಬರನ್ನು ವರ್ಷಾವಧಿಗೆ ನೇಮಕ ಮಾಡಿಕೊಂಡಿದ್ದರೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಹಳೆಯ ಜನರೇಟರ್‌ನ ಬಿಡಿಭಾಗಗಳು ಲಭ್ಯವಿರದ ಕಾರಣ ದುರಸ್ತಿ ದೊಡ್ಡ ತಲೆನೋವಾಗಿದೆ ಎನ್ನುವುದು ಆಸ್ಪತ್ರೆಯವರ ಅಳಲು.

ರವಿವಾರ ರಾತ್ರಿ ಗಾಳಿ ಮಳೆಯಿಂದಾಗಿ ಕೆಲವೆಡೆ ಮರಗಳು ಉರುಳಿ ವಿದ್ಯುತ್‌ ಸ್ಥಗಿತಗೊಂಡಿತ್ತು. ಆಸ್ಪತ್ರೆಯ ಜನರೇಟರ್‌ ಕೆಟ್ಟು ಕುಳಿತಿತ್ತು. ಸೋಮವಾರ ಮಧ್ಯಾಹ್ನದ ತನಕ ವಿದ್ಯುತ್ತಿಲ್ಲದೆ ರೋಗಿಗಳು, ಸಂಬಂಧಿಕರು, ಆಸ್ಪತ್ರೆಯ ವೈದ್ಯರು ಹಾಗೂ ಸಿಬಂದಿ ಪರದಾಡಿದರು. ಡಯಾಲಿಸಿಸ್‌ ವಿಭಾಗದಲ್ಲಿ ಇನ್ವರ್ಟರ್‌ ಇದ್ದರೂ ಚಾರ್ಜ್‌ ಇಲ್ಲದೆ ಸೋಮವಾರ ರೋಗಿಗಳು ತೊಂದರೆ ಅನುಭವಿಸಿದರು. 

Advertisement

ತಾತ್ಕಾಲಿಕ ವ್ಯವಸ್ಥೆ 
ಜನರೇಟರ್‌ನ ದುರಸ್ತಿಗೆ ವ್ಯವಸ್ಥೆ ಮಾಡಿದ್ದೇವೆ. ಹೊಸ ಜನರೇಟರ್‌ ಒದಗಿಸುವಂತೆ ಇಲಾಖೆಯ ರಾಜ್ಯ ನಿರ್ದೇಶನಾಲಯಕ್ಕೆ ಮನವಿ ಮಾಡಿದ್ದೇವೆ. ಹಿರಿಯ ಅಧಿಕಾರಿಗಳಿಗೂ ತಿಳಿಸಿದ್ದೇವೆ. ಸದ್ಯಕ್ಕೆ ತಾತ್ಕಾಲಿಕ ಜನರೇಟರ್‌ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇವೆ.
– ಡಾ| ವೀಣಾ,
ಆಡಳಿತ ವೈದ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next