Advertisement

ಜಿಲ್ಲಾ ಕೇಂದ್ರ ಆಗುವ ನಿರೀಕ್ಷೆಯಲ್ಲಿ ಪುತ್ತೂರು

01:13 PM Apr 23, 2018 | Team Udayavani |

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರಿನ ಅನಂತರ ಸ್ಥಾನದಲ್ಲಿ ಪುತ್ತೂರು ಪಟ್ಟಣವಿದೆ. ವಿಧಾನಸಭಾ ಕ್ಷೇತ್ರವಾಗಿ ಪುತ್ತೂರು ಹಿಂದಿನಿಂದಲೂ ಅಸ್ತಿತ್ವದಲ್ಲಿದೆ. ಹಣಕಾಸು, ಕೃಷಿ, ವಾಣಿಜ್ಯ ಬೆಳೆಗಳು, ಸಾಂಸ್ಕೃತಿಕ- ಹೀಗೆ ಹಲವು ರಂಗಗಳಲ್ಲಿ ಕರಾವಳಿಯ ಪ್ರಮುಖ ಕೇಂದ್ರಗಳಲ್ಲಿ ಒಂದಾದ ಪುತ್ತೂರು ಬೆಳೆಯುತ್ತಿರುವಂತೆ ಈ ಕ್ಷೇತ್ರದ ಬೇಡಿಕೆಗಳೂ ಬೆಳೆಯುತ್ತಿವೆ. 

Advertisement

ಗ್ರಾಮಾಂತರ ಜಿಲ್ಲೆ
1 ಪುತ್ತೂರಿನ ಆಸುಪಾಸಿನ ತಾಲೂಕುಗಳನ್ನು ಸೇರಿಸಿ ಜಿಲ್ಲೆಯಾಗಿ ಘೋಷಿಸಬೇಕು ಎಂಬುದು ಬಹುಕಾಲದ ಬೇಡಿಕೆ. ಇದರಿಂದ ಸುಳ್ಯ, ಬೆಳ್ತಂಗಡಿ ಗ್ರಾಮದವರು ಕಂದಾಯ, ಇನ್ನಿತರ ಕೆಲಸಕ್ಕೆ ಮಂಗಳೂರಿಗೆ ಅಲೆದಾಟ ತಪ್ಪುತ್ತದೆ.

ಪುತ್ತೂರಿನಲ್ಲಿ ಎಸ್ಪಿ ಕಚೇರಿ
2 ಮಂಗಳೂರು ಕಮಿಷನರೆಟ್‌ ವ್ಯಾಪ್ತಿಗೆ ಒಳಪಡುತ್ತದೆ. ತನಗೆ ಅಧಿಕಾರವೇ ಇಲ್ಲದ ಮಂಗಳೂರಿನಲ್ಲಿ ಎಸ್‌ಪಿಗೆ ಕಚೇರಿ ಯಾಕೆ? ಈ ಹಿನ್ನೆಲೆಯಲ್ಲಿ ಪುತ್ತೂರಿಗೆ ಸ್ಥಳಾಂತರಿಸಬೇಕು. ಸೂಕ್ಷ್ಮ ಸಂದರ್ಭಗಳಲ್ಲಿ ಇದು ಸಹಕಾರಿಯೂ ಆಗುತ್ತದೆ.

ಎಂಡೋ ಸಂತ್ರಸ್ತರು
3 ತಮ್ಮದಲ್ಲದ ತಪ್ಪಿಗೆ ಎಂಡೋ ಬಾಧಿತರು ನೋವು ಅನುಭವಿಸುತ್ತಿದ್ದಾರೆ. ಸರಕಾರಿ ಕೃಪಾಪೋಷಿತ ನೋವಿದು. ಕನಸು ತುಂಬಿರಬೇಕಿದ್ದ ಕಂಗಳಲ್ಲಿ ನೋವು ಇಣುಕುತ್ತಿದೆ. ಇವರಿಗೆ ಸೂಕ್ತ ಪರಿಹಾರ ಮತ್ತು ಪುನರ್ವಸತಿ ಅಗತ್ಯ.

ಬಾವಿಯೊಳಗಿನ ಎಂಡೋ ವಿಷ
4 ಕೇರಳ ಗೇರು ಪ್ಲಾಂಟೇಷನ್‌ನ ಬಾವಿಯಲ್ಲಿ ಎಂಡೋಸಲ್ಫಾನ್‌ ತುಂಬಿಸಿ ಮುಚ್ಚಿರುವುದರಿಂದ ಗಡಿ ಗ್ರಾಮ ಗಾಳಿಮುಖದ ಬಾವಿ, ಬೋರ್‌ ವೆಲ್‌ ನೀರು ಕಲುಷಿತವಾಗಿದೆ. ಇದರ ಪರಿಣಾಮ ಘೋರವಾದೀತು. ಪೂರಕ ಕಾರ್ಯಾಚರಣೆ ಅಗತ್ಯ.

Advertisement

ಮುಳುಗು ಸೇತುವೆ
5 ಬ್ರಿಟಿಷರ ಕಾಲದ ಮುಳುಗು ಸೇತುವೆಗಳು ಇನ್ನೂ ಪುತ್ತೂರು ತಾಲೂಕಿನಲ್ಲಿವೆ. ಪ್ರತಿ ಮಳೆಗಾಲದಲ್ಲಿ ಸದಾ ಸುದ್ದಿಯಲ್ಲಿರುವ ಮುಳುಗು ಸೇತುವೆಗಳ ಪೈಕಿ ಚೆಲ್ಯಡ್ಕಕ್ಕೆ ಮೊದಲ ಸ್ಥಾನ. ಇವುಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಅತ್ಯಗತ್ಯ.

ವೈದ್ಯಕೀಯ ಕಾಲೇಜು
6 ಪುತ್ತೂರಿಗೆ ವೈದ್ಯಕೀಯ ಕಾಲೇಜಿನ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಜಾಗವನ್ನು ಗೊತ್ತುಪಡಿಸಲಾಗಿದೆ. ಆದರೆ ಇದಕ್ಕೆ ಮೊದಲು 100 ಬೆಡ್‌ಗಳ ಪುತ್ತೂರು ಸರಕಾರಿ ಆಸ್ಪತ್ರೆಯನ್ನು 300 ಬೆಡ್‌ಗಳಿಗೆ ಏರಿಸುವ ಕೆಲಸವೂ ಆಗಬೇಕು.

ಪುತ್ತೂರು ಪೇಟೆ ವಿಸ್ತರಿಸಿ
7 ಪುತ್ತೂರು ಪೇಟೆ ಎಂದರೆ ಜನ, ವಾಹನಗಳ ದಟ್ಟಣೆ. ಕಿರಿದಾದ ರಸ್ತೆ, ಅಕ್ರಮ ಕಟ್ಟಡ -ಹೀಗೆ ಸಾಲು ಸಾಲು ಸಮಸ್ಯೆಗಳಿವೆ. ಪೇಟೆಯನ್ನು ವಿಸ್ತರಿಸುವ ಅಗತ್ಯವಿದೆ. ಮುಂದಿನ ಯೋಜನೆಗಳನ್ನು ಗ್ರಾಮಾಂತರದತ್ತ ಅನುಷ್ಠಾನಿಸಬೇಕು.

ರೈಲ್ವೇ  ಮೇಲ್ಸೇತುವೆ 
8 ಪುತ್ತೂರು ಎಪಿಎಂಸಿ ಬಳಿಯ ರೈಲ್ವೇ ಮೇಲ್ಸೇತುವೆಯಿಂದ ಎಪಿಎಂಸಿಗೆ ಹೊರಟ ರೈತರು ರೈಲು ಹಳಿ ಬಳಿ ಕಾಯುವ ಅನಿವಾರ್ಯ ಆಗಾಗ ಸೃಷ್ಟಿಯಾಗುತ್ತದೆ. ಮೇಲ್ಸೇತುವೆ ನಿರ್ಮಿಸಿದರೆ ಎಲ್ಲರಿಗೂ ಪ್ರಯೋಜನ.

ಉಪ್ಪಿನಂಗಡಿ ನದಿ
9 ಉಪ್ಪಿನಂಗಡಿಯ ಸಂಗಮ ಕ್ಷೇತ್ರದಲ್ಲಿ ತುರ್ತು ಸಂದರ್ಭಕ್ಕಾಗಿ ಬೋಟ್‌ ನೀಡಲಾಗಿದೆ. ಆದರೆ ನಾವಿಕನೇ ಇಲ್ಲ. ಮಳೆಗಾಲದಲ್ಲಿ ಪಿಂಡ ಬಿಡಲೆಂದು ನದಿಗಿಳಿಯುವುದೂ ಅಪಾಯ. ನದಿ ಮಧ್ಯದ ತನಕ ಸೇತುವೆ ನಿರ್ಮಿಸುವ ಅಗತ್ಯ ಇದೆ.

ಪ್ರವಾಸೋದ್ಯಮ ಅಭಿವೃದ್ಧಿ
10 ಬೆಟ್ಟಂಪಾಡಿಯ ಬೆಂದ್ರ್ತೀರ್ಥ, ಕೋಟಿ- ಚೆನ್ನಯರ ಹುಟ್ಟೂರು ಪಡುಮಲೆ, ಬಿರುಮಲೆ ಗುಡ್ಡ, ಡಾ| ಕಾರಂತರ ಬಾಲವನ ಹೀಗೆ ಸಾಕಷ್ಟು ಕೇಂದ್ರಗಳು ಅಭಿವೃದ್ಧಿಗಾಗಿ ಕಾಯುತ್ತಿವೆ. ಪ್ರವಾಸೋದ್ಯಮ ಅಭಿವೃದ್ಧಿಗೂ ಇವು ಪೂರಕ.

ಶಿವರಾಮ ಕಾರಂತ ರಂಗಮಂಟಪ
11 ನೆಲ್ಲಿಕಟ್ಟೆಯಲ್ಲಿ ಡಾ| ಶಿವರಾಮ ಕಾರಂತರು ಗೆಜ್ಜೆ ಕಟ್ಟಿದ ಶಾಲೆಯಿದೆ. ಇದರೊಳಗೆ ಅವರೇ ರೂಪಿಸಿದ ರಂಗ ವೇದಿಕೆಯಿದೆ. ಸದ್ಯ ಈ ಶಾಲೆ ಕುಸಿಯುವ ಹಂತದಲ್ಲಿದ್ದು, ರಂಗ ವೇದಿಕೆಯ ವೈಶಿಷ್ಟ é ಉಳಿಸಿಕೊಳ್ಳುವ ಅನಿವಾರ್ಯ ಇದೆ.

ಸವಣೂರು ಹೋಬಳಿ ಕೇಂದ್ರ
12 ಕಡಬ ತಾಲೂಕು ರಚನೆ ವೇಳೆ ಸವಣೂರು ಆಸುಪಾಸಿನ ಗ್ರಾಮಗಳನ್ನು ಪುತ್ತೂರು ತಾಲೂಕಿಗೆ ಸೇರಿಸಬೇಕು ಮತ್ತು ಸವಣೂರನ್ನು ಹೋಬಳಿ ಕೇಂದ್ರವಾಗಿ ಘೋಷಿಸಬೇಕು ಎಂಬ ಬೇಡಿಕೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next