Advertisement

ಸಂಸ್ಕೃತಿಯ ಬೇರು ಬಲಹೀನವಾದರೆ ಧರ್ಮ ನಿಷ್ಕ್ರಿಯ: ರಾಜಶೇಖರಾನಂದ ಶ್ರೀ 

05:50 AM Feb 18, 2019 | |

ಪುತ್ತೂರು: ಮೈಮರೆವು ನಮ್ಮ ಸಂಸ್ಕೃತಿಯಲ್ಲ. ಮೈಮರೆತರೆ ದುರ್ಬಲತೆ ಕಾಡುತ್ತದೆ. ಕುರಿಯಂತೆ ದುರ್ಬಲರಾದರೆ ದೇವರು ಕೂಡ ಕ್ಷಮಿಸುವುದಿಲ್ಲ. ಆದ್ದರಿಂದ ಸಂಸ್ಕೃತಿಯ ಬೇರುಗಳನ್ನು ಗಟ್ಟಿ ಮಾಡುವ ಮೂಲಕ ಧರ್ಮವನ್ನು ಉಳಿಸುವ ಕಾರ್ಯ ಆಗಬೇಕಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಹೇಳಿದರು.

Advertisement

ಹಿಂದೂ ಜಾಗರಣಾ ವೇದಿಕೆ ಆಶ್ರಯದಲ್ಲಿ ಫೆ. 17ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ರವಿವಾರ ಜರಗಿದ ಹಿಂದೂ ಚೈತನ್ಯ ಸಮಾವೇಶದ ಧರ್ಮಸಭೆಯಲ್ಲಿ ಮಾತನಾಡಿದರು. ಹಿಂದೂ ಧರ್ಮ ದುರ್ಬಲ ಆಗುತ್ತಿದೆ ಎನ್ನುವುದನ್ನು ನ್ಯಾಯಾಲಯವೂ ಗಮನಿಸುತ್ತಿದೆ. ಆದ್ದರಿಂದ ಶಬರಿಮಲೆ ಕ್ಷೇತ್ರದ ವಿಚಾರದಲ್ಲಿ ನ್ಯಾಯಾಲಯ ಅಂತಹ ತೀರ್ಪು ನೀಡಿತು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಹಿಂದೂಗಳು ಜಾಗೃತರಾಗಬೇಕು. ಜಾಗೃತರಾಗದೇ, ಬಲಿಷ್ಠವಾಗದೇ ಹೋದರೆ ದೇವರು ಕೂಡ ಕ್ಷಮಿಸುವುದಿಲ್ಲ ಎಂದರು.

ರಾಜಕೀಯ ಇಚ್ಛಾಶಕ್ತಿ ಅಗತ್ಯ
ಧರ್ಮ ಬಲಿಷ್ಠವಾಗಬೇಕಾದರೆ ರಾಜಕೀಯ ಇಚ್ಛಾಶಕ್ತಿಯೂ ಬೇಕಾಗಿದೆ.  ಇದಕ್ಕಾಗಿ ಸುದೃಢ, ಸುಲಲಿತ ಸರಕಾರದ ಆಯ್ಕೆಯನ್ನು ನಾವು ಮಾಡಬೇಕಾಗಿದೆ. 56 ಇಂಚಿನ ಎದೆಯಳತೆಯ ರಾಜಕಾರಣಿ ನಮಗೆ ಬೇಕಾಗಿದೆ. ಹಿಂದೂಗಳನ್ನು ಇನ್ನಷ್ಟು ತುಳಿಯಲು ಮುಂದಾಗುತ್ತಿರುವ ಮಹಾ ಘಟಬಂಧನವನ್ನು ಮಣ್ಣು ಮುಕ್ಕಿಸಬೇಕಿದೆ. ಆದ್ದರಿಂದ ಮುಂದೆ ಸರಿಯಾದ ಮುದ್ರೆ ಒತ್ತುವ ಮೂಲಕ, ಹಿಂದೂ ಸಂಸ್ಕೃತಿಯನ್ನು ಉಳಿಸುವ ಕೆಲಸ ಆಗಬೇಕಿದೆ ಎಂದರು.

ಉಗ್ರರಿಗೆ ಪಾಕ್‌ ಆಶ್ರಯ
ಓಲೈಕೆಯ ರಾಜಕಾರಣದಿಂದ ಕಾಶ್ಮೀರ ಬಿಟ್ಟು ಹೋಯಿತು. ಕ್ರಿಕೆಟ್‌ ನಾಯಕನನ್ನು ಬೆಳೆಸಿ, ರಾಜಕೀಯ ನಾಯಕನನ್ನಾಗಿ ಮಾಡಿದ ಪರಿಣಾಮ, ಇಂದು ಪಾಕಿಸ್ತಾನಕ್ಕೆ ಬಹುಪರಾಕ್‌ ಹೇಳುತ್ತಿದ್ದಾರೆ. ಉಣ್ಣಲು ಅನ್ನವಿಲ್ಲದೇ ವಿಲವಿಲ ಒದ್ದಾಡುತ್ತಿರುವ ಪಾಕ್‌, ಉಗ್ರರಿಗೆ ಆಶ್ರಯದಾತವಾಗಿದೆ. ಅಲ್ಲಿಂದ ಆಮದಾಗಿರುವ ವಿವಾದಿತ ಬುದ್ಧಿಜೀವಿಗಳು ಇಲ್ಲಿನ ಸಂಸ್ಕೃತಿಯ ಮೇಲೆ ಸವಾರಿ ಮಾಡುತ್ತಿದ್ದಾರೆ. ಇದನ್ನೆಲ್ಲ ಮಟ್ಟ ಹಾಕಲು ರಾಜಕೀಯ ದೃಢತೆ ಬೇಕಾಗಿದೆ ಎಂದರು.

ಸಂಘಟಿತವಾಗಬೇಕು
ಪುಲ್ವಾಮ ಘಟನೆಯಲ್ಲಿ ಹುತಾತ್ಮರಾದ ಸೈನಿಕರಿಗೆ ನುಡಿನಮನ ಸಲ್ಲಿಸಿದ ಸಂಚಾಲನ ಸಮಿತಿ ಅಧ್ಯಕ್ಷ ಅರುಣ್‌ ಕುಮಾರ್‌ ಪುತ್ತಿಲ ಮಾತನಾಡಿ, ಪುಲ್ವಾಮಾ ಘಟನೆ ದೇಶದ ಕಣ್ಣು ತೆರೆಯುವಂತೆ ಮಾಡಿತು. ಈ ಘಟನೆಯನ್ನು ದೇಶ ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದೆ. ಇಂತಹ ಘಟನೆ ಮುಂದೆ ನಡೆಯಬಾರದು ಎನ್ನುವ ಸಂಕಲ್ಪವನ್ನು ನಾವು ತೊಡಬೇಕಾಗಿದೆ. ಸರ್ವೇ ಜನಃ ಸುಖೀನೋ ಭವಂತು ಎಂಬ ಧ್ಯೇಯದಡಿ ಎಲ್ಲರನ್ನು ಒಂದೇ ಸೂರಿನಡಿ ಬದುಕಲು ಅವಕಾಶ ನೀಡಿದರೆ, ಪಾಕ್‌ ಪರ ಘೋಷಣೆ ಕೂಗುತ್ತಿದ್ದಾರೆ. ಆದ್ದರಿಂದ ಹಿಂದೂ ಸಮಾಜ ಸಂಘಟಿತವಾಗಬೇಕು. ದಮನ ಮಾಡುವವರನ್ನು ಮೆಟ್ಟಿ ನಿಲ್ಲುಬೇಕು. ಆಗ ಸೈನಿಕರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದರು.

Advertisement

ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ್‌ ದೋ| ಕೇಶವ ಮೂರ್ತಿ ದಿಕ್ಸೂಚಿ ಭಾಷಣ ಮಾಡಿದರು. ಸ್ವಾಮಿ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ವಾಮನ್‌ ಪೈ ಅಧ್ಯಕ್ಷತೆ ವಹಿಸಿದ್ದರು. ಮಾಣಿಲ ಶ್ರೀ ಮಹಾಲಕ್ಷ್ಮೀ  ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶಿಲಾಂಜನ ಮಠದ ಕಾಶೀಬೈರವೇಶ್ವರ ಮಹಾಸಂಸ್ಥಾನದ ಸದ್ಗುರು ಡಾ| ಶಶಿಕಾಂತಮಣಿ ಸ್ವಾಮೀಜಿ, ಕಣಿಯೂರ್‌ ಮಠದ ಶ್ರೀ ಮಹಾಬಲ ಸ್ವಾಮೀಜಿ, ಕುಂಟಾರು ರವೀಶ ತಂತ್ರಿ, ವೈದ್ಯಕೀಯ ತಜ್ಞ ಡಾ| ಸುರೇಶ್‌ ಪುತ್ತೂರಾಯ, ಮುಖಂಡರಾದ ಡಾ| ಪ್ರಸಾದ್‌ ಎಂ.ಕೆ., ಚಿನ್ಮಯ್‌ ರೈ, ರಾಧಾಕೃಷ್ಣ ಅಡ್ಯಂತಾಯ, ಅಜಿತ್‌ ಕುಮಾರ್‌ ಹೊಸಮನೆ, ಸಚಿನ್‌ ಪಾಪೆಮಜಲು, ಶಶಿಕಾಂತ್‌ ಕೋರ್ಟ್‌ ರೋಡ್‌, ಅಶೋಕ್‌ ಉಪಸ್ಥಿತರಿದ್ದರು.

ಅರ್ಧ ಏಕಾಹ ಭಜನೆ
ಬೆಳಗ್ಗೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅರ್ಧ ಏಕಾಹ ಭಜನೆ ಜರಗಿತು. ಬಳಿಕ ಭಜನ ಸಂಕೀರ್ತನೆ, ಸಾಮೂಹಿಕ ಹರಿನಾಮ ಸಂಕೀರ್ತನೆ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಜರಗಿತು. ಬಳಿಕ ದರ್ಬೆಯಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಗದ್ದೆವರೆಗೆ ಬೃಹತ್‌ ಶೋಭಾಯಾತ್ರೆ ಸಾಗಿ ಬಂದಿತು. ಶೋಭಾಯಾತ್ರೆ ಗದ್ದೆಗೆ ತಲುಪುತ್ತಿದ್ದಂತೆ ಸತ್ಯನಾರಾಯಣ ಪೂಜೆ ಮಂಗಳಾರತಿ ನಡೆಯಿತು. ಬಳಿಕ ಧರ್ಮಸಭೆ ಜರಗಿತು.

ಕುಂಭ ಮೇಳದ ನೆನಪು
ಒಡಿಯೂರು ಶ್ರೀ ಗುರು ದೇವದತ್ತ ಸಂಸ್ಥಾನದ ಸಾಧ್ವಿ ಮಾತಾನಂದಮಯಿ ಆಶೀರ್ವಚಿಸಿ, ದೇಹಕ್ಕೆ ರೋಗ ಬಂದರೆ ಅದಕ್ಕೆ ಕಾರಣವಾದ ಬ್ಯಾಕ್ಟೀರಿಯಾ ನಿರ್ಮೂಲನೆ ಮಾಡಬೇಕಿದೆ. ಆದ್ದರಿಂದ ಜಡತ್ವದಲ್ಲಿ ನಾವು ಇರಬಾರದು. ಹುಲಿಗಳೆಂಬ ಅರಿವನ್ನು ಮೈಗೂಡಿಸಿಕೊಳ್ಳಬೇಕು. ಹೀಗಾದರೆ ಮಾತ್ರ ಹಿಂದೂ ಧರ್ಮ ನಿರ್ಭಿತಿಯಿಂದ ಬದುಕಲು ಸಾಧ್ಯ. ಚೈತನ್ಯ ಸಮಾವೇಶದ ಸಭೆ ಕುಂಭ
ಮೇಳವನ್ನು ನೆನಪಿಸುವಂತಿದೆ. ಗಂಗಾ, ಯಮುನಾ, ಸರಸ್ವತಿ ಸಂಗಮದ ಪ್ರತಿರೂಪದಂತೆ ಪುತ್ತೂರಿನಲ್ಲಿ ಕಾಣಿಸುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next