Advertisement

ಪುತ್ತೂರು ಸರಕಾರಿ ಆಸ್ಪತ್ರೆ ಶೀಘ್ರವೇ ಇ- ಹಾಸ್ಪಿಟಲ್‌

10:24 PM Oct 21, 2019 | Team Udayavani |

ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆ ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಬೇಕು ಮತ್ತು ಸರಕಾರಿ ವೈದ್ಯಕೀಯ ಕಾಲೇಜು ಆಗಬೇಕೆನ್ನುವ ಬೇಡಿಕೆಯ ಮಧ್ಯೆ ಆಸ್ಪತ್ರೆ ಹಂತ ಹಂತವಾಗಿ ಸೌಕರ್ಯಗಳನ್ನು ಹೊಂದುತ್ತಿರುವುದು ಪುತ್ತೂರು ಹಾಗೂ ಸುತ್ತಮುತ್ತಲಿನ ತಾಲೂಕುಗಳ ಬಡ ಫಲಾನುಭವಿಗಳಿಗೆ ಆಶಾಕಿರಣವಾಗುತ್ತಿದೆ.

Advertisement

ಸರಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ ಯಂತ್ರ ಬೇಕು ಎನ್ನುವ ಬೇಡಿಕೆಯಂತೆ ಅಲ್ಟ್ರಾ ಸೌಂಡ್‌ ಸ್ಕ್ಯಾನಿಂಗ್‌ ಯಂತ್ರ ಬಂದಿದ್ದು, ಅಳವಡಿಕೆ ಆಗುತ್ತಿದೆ. ಜಿಲ್ಲಾ ಮಟ್ಟದ ಅನುಮತಿ ಪಡೆದು ನೋಂದಣಿ ಪ್ರಕ್ರಿಯೆ ಮುಗಿದ ಬಳಿಕ ಈ ವ್ಯವಸ್ಥೆ ಲಭ್ಯವಾಗಲಿದೆ. ಸ್ಕ್ಯಾನಿಂಗ್‌ ವ್ಯವಸ್ಥೆಯನ್ನು ನಿಭಾಯಿಸಲು ರೇಡಿಯೋಗ್ರಾಫರ್‌ ನೇಮಕಾತಿ ಆಗಬೇಕಿದೆ. 2 ಎಕ್ಸ್‌ರೇ ಯಂತ್ರಗಳು ಮಂಜೂರಾಗಿದ್ದು, ಒಂದನ್ನು ಅಳವಡಿಸಲಾಗಿದೆ.

ಜನರೇಟರ್‌ ಮಂಜೂರು
ಸರಕಾರಿ ಆಸ್ಪತ್ರೆಯಲ್ಲಿ ಜನರೇಟರ್‌ ಅವ್ಯವಸ್ಥೆ ಪ್ರಮುಖ ಸಮಸ್ಯೆಯಾಗಿತ್ತು. ಕೈಕೊಡುತ್ತಿದ್ದ ಹಳೆಯ ಜನರೇಟರ್‌ಗೆ ಪರ್ಯಾಯವಾಗಿ ವೆಚ್ಚದಾಯಕ ಬಾಡಿಗೆ ಜನರೇಟರ್‌ ಬಳಕೆ ಅನಿವಾರ್ಯವಾಗಿತ್ತು. ಈ ಸಮಸ್ಯೆ ದೂರ ಮಾಡುವ ನಿಟ್ಟಿನಲ್ಲಿ ಜಿಲ್ಲಾ ವೆನಲಾಕ್ ಆಸ್ಪತ್ರೆಯಿಂದ ಪುತ್ತೂರಿನ ಆಸ್ಪತ್ರೆಗೆ 80 ಕೆ.ವಿ. ಸಾಮರ್ಥ್ಯ ಜನರೇಟರ್‌ ಸ್ಥಳಾಂತರಿಸಲು ಅನುಮತಿ ಲಭಿಸಿದೆ. ಇದು ಸದ್ಯಕ್ಕೆ ದುರಸ್ತಿಯಲ್ಲಿದ್ದು, ಶೀಘ್ರ ಪುತ್ತೂರು ಆಸ್ಪತ್ರೆಗೆ ಬರಲಿದೆ. ಸರಕಾರಕ್ಕೆ ಸಲ್ಲಿಸಿದ ಮನವಿಯ ಪರಿಣಾಮವಾಗಿ ಡಯಾಲಿಸಿಸ್‌ ವ್ಯವಸ್ಥೆಯಲ್ಲಿ ಬಳಕೆಗೆ ಹೊಸದಾಗಿ 30 ಕೆ.ವಿ. ಜನರೇಟರ್‌ ಮಂಜೂರಾಗಿದೆ. ಒಂದು ವಾರದಲ್ಲಿ ಆಸ್ಪತ್ರೆಯಲ್ಲಿ ಅಳವಡಿಕೆಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ನಿರೀಕ್ಷಣ ಕೊಠಡಿ, ಲಾಂಡ್ರಿ
ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸುವ ಕೊಠಡಿಯ ಬಳಿ ಸಂಬಂಧಿಕರು ಹಾಗೂ ಪೊಲೀಸರಿಗೆ ನಿಲ್ಲಲು ನಿರೀಕ್ಷಣ ಕೊಠಡಿ ನಿರ್ಮಾಣ, ತ್ಯಾಜ್ಯ ಸಂಗ್ರಹ ಕೇಂದ್ರ ನಿರ್ಮಾಣಕ್ಕೆ ಮಂಜೂರಾತಿ ಆಗಿದ್ದು, ಟೆಂಡರ್‌ ಹಂತದಲ್ಲಿದೆ. ಸಹಾಯಕ ಕಮಿಷನರ್‌ ವರ್ಗಾವಣೆಯ ಕಾರಣದಿಂದ ಒಂದಷ್ಟು ವಿಳಂಬವಾಗಿದೆ. ಜತೆಗೆ ಲಾಂಡ್ರಿ ನಿರ್ಮಾಣದ ಉದ್ದೇಶದಿಂದ ಬೆಡ್‌ ಹಾಕಲಾಗಿದ್ದು, ವಾಶಿಂಗ್‌ ಮೆಶಿನ್‌ ಖರೀದಿಗೆ ಮಂಜೂರಾತಿ ಆಗಿದೆ.

ಇ -ಹಾಸ್ಪಿಟಲ್‌
ತಾಂತ್ರಿಕವಾಗಿಯೂ ಪುತ್ತೂರು ಸರಕಾರಿ ಆಸ್ಪತ್ರೆ ಪ್ರಗತಿಯ ಕಡೆಗೆ ಸಾಗುತ್ತಿದ್ದು, ಇ ಹಾಸ್ಪಿಟಲ್‌ ವ್ಯವಸ್ಥೆಗೆ ಸಿದ್ಧಗೊಳ್ಳುತ್ತಿದೆ. ಈ ವ್ಯವಸ್ಥೆ ಜಾರಿಗೊಂಡರೆ ಆಸ್ಪತ್ರೆಯಲ್ಲಿ ಇರುವ ಮ್ಯಾನ್ಯುಯಲ್‌ ಪ್ರಕ್ರಿಯೆಗೆ ಮುಕ್ತಾಯ ಹಾಡಿ ಆನ್‌ಲೈನ್‌ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಆನ್‌ಲೈನ್‌ ನೋಂದಣಿ ಚೀಟಿ ಲಭ್ಯವಾಗಲಿದ್ದು, ಇ ಹಾಸ್ಪಿಟಲ್‌ ವೆಬ್‌ಸೈಟ್‌ನಲ್ಲಿ ಒಮ್ಮೆ ಆಸ್ಪ³ತ್ರೆಗೆ ಭೇಟಿ ನೀಡಿದ ರೋಗಿಯ ಎಲ್ಲ ಮಾಹಿತಿಗಳು ಶೇಖರಣೆಗೊಂಡಿರುತ್ತವೆ. ಮತ್ತೆ ಭೇಟಿ ನೀಡಿದ ಸಂದರ್ಭ ನೋಂದಣಿ ಸಂಖ್ಯೆಯ ಮೂಲಕ ಎಲ್ಲ ಡಾಟಾಗಳನ್ನು ತೆಗೆಯಲು ಸುಲಭ ಸಾಧ್ಯವಾಗುತ್ತದೆ.

Advertisement

ಇ-ಹಾಸ್ಪಿಟಲ್‌ ವ್ಯವಸ್ಥೆಗಾಗಿ ಪ್ರತ್ಯೇಕ ಕೌಂಟರನ್ನು ಆಸ್ಪತ್ರೆಯಲ್ಲಿ ತೆರೆಯಲಾಗಿದೆ. ಈ ವ್ಯವಸ್ಥೆಗೆ ಶಿಫ್ಟ್‌ ಮುಖಾಂತರ ಕಾರ್ಯನಿರ್ವಹಿಸಲು 4-5 ಸಿಬಂದಿ ನೇಮಕವಾಗಬೇಕಿದೆ. ಈಗ ಓರ್ವ ಸಿಬಂದಿ ಇದ್ದು, ಸದ್ಯಕ್ಕೆ ಆಫ್‌ಲೈನ್‌ ಎಂಟ್ರಿ ಮಾತ್ರ ನಡೆಯುತ್ತಿದೆ. ಶೀಘ್ರ ಆನ್‌ಲೈನ್‌ ನೋಂದಣಿ ವ್ಯವಸ್ಥೆ ಜಾರಿಗೊಳ್ಳಲಿದೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

5 ಡಯಾಲಿಸಿಸ್‌ ಯಂತ್ರ ಕಾರ್ಯನಿರ್ವಹಣೆ
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಖಾಸಗಿ ಆಸ್ಪತ್ರೆಯಂತೆ ಇಎನ್‌ಟಿ ಆಪರೇಷನ್‌, ಸರ್ಜರಿ, ಹೆರಿಗೆ ಆಪರೇಷನ್‌, ಅನಸ್ತೇಶಿಯಾ ಸಹಿತ ತಜ್ಞ ವೈದ್ಯರ ಉಪಸ್ಥಿತಿಯಲ್ಲಿ ನಡೆಯುತ್ತಿದೆ. ಆಯುಷ್ಮಾನ್‌ ಭಾರತ್‌ -ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ನಿತ್ಯ ಸರಾಸರಿ 80 ಕಾರ್ಡುಗಳ ವಿತರಣೆ ನಡೆಯುತ್ತಿದೆ. ಸೋರಿಕೆಯಾಗುತ್ತಿದ್ದ ಛಾವಣಿಯನ್ನು ಅರ್ಧ ಭಾಗ ದುರಸ್ತಿಗೊಳಿಸಲಾಗಿದೆ. 5 ಡಯಾಲಿಸಿಸ್‌ ಯಂತ್ರಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ.

ನಿರಂತರ ಪ್ರಯತ್ನ
ರಕ್ಷಾ ಸಮಿತಿಯ ಮೂಲಕ ಆಸ್ಪತ್ರೆಯ ವಿವಿಧ ಬೇಡಿಕೆಗಳ ಈಡೇರಿಕೆಗೆ ನಿರಂತರ ಪ್ರಯತ್ನ ನಡೆಸುತ್ತಿದ್ದೇವೆ. ಹೆಚ್ಚಿನ ಸೌಕರ್ಯಗಳು ಆಸ್ಪತ್ರೆಗೆ ಲಭ್ಯವಾಗುತ್ತಿದೆ. ಈ ನಿಟ್ಟನಲ್ಲಿ ಶಾಸಕರೂ ಸಹಕಾರ ನೀಡುತ್ತಿದ್ದಾರೆ.
– ವಿದ್ಯಾ ಗೌರಿ ರಕ್ಷಾ ಸಮಿತಿ ಸದಸ್ಯರು

ಪೂರಕ ಕ್ರಮ
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಇ ಹಾಸ್ಪಿಟಲ್‌ ವ್ಯವಸ್ಥೆ ಜಾರಿಗೆ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಸಿಬಂದಿ ನೇಮಕಾತಿಗೆ ಬರೆಯಲಾಗಿದೆ. ಒಟ್ಟು ಮೂಲ ಸೌಕರ್ಯಗಳ ಜೋಡಣೆಗೆ ಆದ್ಯತೆ ನೀಡಿ ಆ ನಿಟ್ಟಿನಲ್ಲಿ ಯಶಸ್ವಿಯಾಗುತ್ತಿದ್ದೇವೆ.
– ಡಾ| ಆಶಾ ಪುತ್ತೂರಾಯ,
ಆಡಳಿತ ವೈದ್ಯಾಧಿಕಾರಿ, ಸರಕಾರಿ ಆಸ್ಪತ್ರೆ ಪುತ್ತೂರು

-  ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next