ಪುತ್ತೂರು: ದೇಯಿ ಬೈದ್ಯೆತಿ, ಕೋಟಿ-ಚೆನ್ನಯ ಮೂಲಸ್ಥಾನ ಕ್ಷೇತ್ರವಾದ ಪುತ್ತೂರು ತಾ|ನ ಬಡಗನ್ನೂರು ಗ್ರಾಮದ ಗೆಜ್ಜೆಗಿರಿ ನಂದನ ಬಿತ್ತ್ಲ್‌ನಲ್ಲಿ ದೇಯಿ ಬೈದ್ಯೆತಿ ಸಮಾಧಿ ಪುನರುತ್ಥಾನ ಕಾರ್ಯ ಅಂತಿಮ ಹಂತ ತಲುಪಿದ್ದು, ನೂರಾರು ಭಕ್ತರು ಕರಸೇವೆ ಮಾಡುತ್ತಿದ್ದಾರೆ.
ವಾಸ್ತುಶಿಲ್ಪಿ ರಮೇಶ್ ಕಾರಂತರ ಮಾರ್ಗದರ್ಶನದಲ್ಲಿ ಪುನರುಜ್ಜೀವನ ನಡೆಯುತ್ತಿದೆ. ಕುಶಲಕರ್ಮಿಗಳು ಕೆಂಪು ಕಲ್ಲಿನ ಕೆಲಸ ಮಾಡುತ್ತಿದ್ದು, ಭಕ್ತರು ಶ್ರಮದಾನದ ಸೇವೆಯನ್ನೂ ಸಲ್ಲಿಸುತ್ತಿದ್ದಾರೆ. ಸಮಾಧಿಯ ಮೂಲ ಸ್ವರೂಪದಲ್ಲೇ ಪುನರುಜ್ಜೀವನ ಮಾಡಲಾಗುತ್ತಿದೆ. ಶೇ. 90ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರ ಮುಕ್ತಾಯಗೊಳ್ಳಲಿದೆ ಎಂದು ಕ್ಷೇತ್ರಾಡಳಿತ ಸಮಿತಿಯ ಪ್ರಭಾರ ಅಧ್ಯಕ್ಷ ಜಯಂತ ನಡುಬೈಲ್ ತಿಳಿಸಿದ್ದಾರೆ.
ಆರು ತಿಂಗಳಿನಿಂದ ಕರಸೇವಾ ಆಂದೋಲನದಲ್ಲಿ 3,000ಕ್ಕೂ ಹೆಚ್ಚು ಭಕ್ತರು ಧರ್ಮಚಾವಡಿ, ಮೂಲಸ್ಥಾನ ಗರಡಿ, ಧೂಮಾವತಿ ದೈವಸ್ಥಾನ, ಸರೋಳಿ ಸೈಮಂಜ ಕಟ್ಟೆಗಳ ಕಾಮಗಾರಿಯಲ್ಲಿ ಸೇವೆ ಮಾಡಿದ್ದಾರೆ. 1,500 ಕರಸೇವಕರು ಸಮಾಧಿ ಕಾಮಗಾರಿ ಮಾಡಿದ್ದಾರೆಂದು ಗೆಜ್ಜೆಗಿರಿ ನಂದನ ಬಿತ್ತಿಲ್ ಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿ ತಿಳಿಸಿದ್ದಾರೆ.
ದೇಯಿ ಬೈದ್ಯೆತಿ ಸಮಾಧಿ ಗದ್ದೆಯ ಬದುವಿನಲ್ಲಿ ಬನದ ರೂಪದಲ್ಲಿತ್ತು. ಅದನ್ನು ಪವಿತ್ರ ಭಾವನೆಯಿಂದ ಸಂರಕ್ಷಿಸಿಕೊಂಡು ಬಂದಿದ್ದೇವೆ. ಅದೇ ಪ್ರಾಕೃತಿಕರೂಪ ಉಳಿಸಿಕೊಳ್ಳಬೇಕೆಂದು ಅಷ್ಟಮಂಗಲ ಚಿಂತನೆಯಲ್ಲೂ ಕಂಡುಬಂದ ಕಾರಣ ಮೂಲ ಸ್ವರೂಪಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಕಾಮಗಾರಿ ನಡೆದಿದೆ ಎಂದಿದ್ದಾರೆ. ಧೂಮಾವತಿ ಕರಸೇವಾ ಸಮಿತಿಯ ಸಮನ್ವಯದಲ್ಲಿ ಶ್ರಮದಾನ ನಡೆಯುತ್ತಿದ್ದು, ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ, ಮಂಗಳೂರು, ಕಾಸರಗೋಡು, ಉಡುಪಿ, ಕಾರ್ಕಳ ಸಹಿತ ಕರಾವಳಿಯ ಎಲ್ಲೆಡೆಯಿಂದ ಭಕ್ತರು ಕರಸೇವೆಗೆ ಆಗಮಿಸುತ್ತಿದ್ದಾರೆ.
450 ವರ್ಷಗಳ ಹಿಂದೆ ದೇಯಿ ಬೈದ್ಯೆತಿ ಗೆಜ್ಜೆಗಿರಿಯ ಮಣ್ಣಲ್ಲಿ ಸಮಾಧಿಯಾಗಿದ್ದು, ಇಂದಿನವರೆಗೂ ಸುಪ್ತವಾಗಿಯೇ ಉಳಿದಿತ್ತು. ಪ್ರಸ್ತುತ ಗೆಜ್ಜೆಗಿರಿಯಲ್ಲಿ ದೇಯಿ ಬೈದ್ಯೆತಿ ಧರ್ಮಚಾವಡಿ, ಮಹಾ ಸಮಾಧಿ ಪುನರುಜ್ಜೀವನಗೊಳ್ಳುತ್ತಿದ್ದು, ಇಲ್ಲಿಂದ 3 ಕಿ.ಮೀ. ದೂರದ ಮುಡಿ³ನಡ್ಕದಲ್ಲಿ ಅರಣ್ಯ ಇಲಾಖೆ ನಿರ್ಮಿಸಿದ ದೇಯಿ ಬೈದ್ಯೆತಿ ಔಷಧ ವನವೂ ಜನಾಕರ್ಷಣೆ ಪಡೆದಿದೆ.
ಔಷಧೀಯ ವನ
ದೇಯಿ ಬೈದ್ಯೆತಿಯನ್ನು ಸಮಾಧಿ ಮಾಡಲಾದ ಸ್ಥಳದ ಪ್ರಾಕೃತಿಕ ಸ್ವರೂಪವನ್ನು ಉಳಿಸಿಕೊಂಡು ಸುತ್ತಲೂ ಅಷ್ಟಕೋನಾಕೃತಿಯ ಸ್ಮಾರಕವನ್ನು ಕೆಂಪು ಕಲ್ಲಿನಲ್ಲಿ ನಿರ್ಮಿಸಲಾಗಿದೆ. ಇದರ ಸುತ್ತಲೂ ಭವಿಷ್ಯದಲ್ಲಿ ಔಷ ಧೀಯ ಸಸ್ಯಗಳನ್ನು ಬೆಳೆಸಲು ನಿರ್ಧರಿಸಲಾಗಿದೆ. ಸ್ವತಃ ನಾಟಿ ವೈದ್ಯೆಯಾಗಿದ್ದ ಮಾತೆಯ ಸಮಾಧಿ ಮುಂದಿನ ದಿನಗಳಲ್ಲಿ ನೈಜ ಔಷಧೀಯ ವನವಾಗಿ ಕಂಗೊಳಿಸಲಿದೆ.