Advertisement
ಪ್ರಕರಣವು ಬಗೆದಷ್ಟು ಆಳವಾಗುತ್ತಿದ್ದು, ಕೆದಕಿದಷ್ಟು ಮತ್ತಷ್ಟು ಸಂಗತಿಗಳು ಹೊರ ಬರುತ್ತಿವೆ. ಆರೋಪಿಗೆ ಗೌರಿ ಹಲವು ವರ್ಷಗಳಿಂದಲೇ ಪರಿಚಯದಲ್ಲಿದ್ದು, ಯುವತಿಯು ಪ್ರೀತಿಯ ವಿಚಾರದಲ್ಲಿ ತನ್ನ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾಳೆ ಎಂಬ ಕಾರಣಕ್ಕೆ ಆತ ಕೃತ್ಯ ಎಸಗಿರುವುದು ವಿಚಾರಣೆಯ ವೇಳೆ ದೃಢಪಟ್ಟಿದೆ.
ವಿಟ್ಲದ ಶಾಲೆಯೊಂದರಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿದ್ದ ಗೌರಿಯನ್ನು ಪದ್ಮರಾಜ್ ಪರಿಚಯ ಮಾಡಿಕೊಂಡಿದ್ದ. ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿತ್ತು. ಕೆಲವು ವರ್ಷಗಳಲ್ಲಿ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಆತನ ವಿರುದ್ಧವೇ ಆಕೆ ವಿಟ್ಲ ಠಾಣೆಗೆ ದೂರು ನೀಡಿದ್ದಳು. ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆಯಿಸಿ ಮುಂದಕ್ಕೆ ಪರಸ್ಪರ ಮಾತುಕತೆ ಇಲ್ಲ ಎಂಬುದಾಗಿ ಮುಚ್ಚಳಿಕೆ ಬರೆಯಿಸಿ ಕಳುಹಿಸಲಾಗಿತ್ತು. ಆದರೆ ಆ ಬಳಿಕವೂ ಇಬ್ಬರ ನಡುವೆ ಮಾತುಕತೆ ಮುಂದುವರಿದಿತ್ತು ಎನ್ನುವ ಅಂಶ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಮೊಬೈಲ್ ಗಿಫ್ಟ್ ಕೊಟ್ಟಿದ್ದ?
ಆ. 24ರಂದು ಪದ್ಮರಾಜ್ ಗೌರಿ ಕೈಯಿಂದ ಕಸಿದುಕೊಂಡು ಹೋಗಿದ್ದ ಮೊಬೈಲ್ ಆತ ಈ ಹಿಂದೆ ಗಿಫ್ಟ್ ರೂಪದಲ್ಲಿ ನೀಡಿರುವುದು ಎನ್ನಲಾಗಿದೆ. ಈ ಮಧ್ಯೆ ಬೇರೊಬ್ಬ ಯುವಕನ ವಿಚಾರದಲ್ಲಿ ಗೌರಿ ಜತೆ ಮನಸ್ತಾಪ ಹೊಂದಿದ್ದ ಪದ್ಮರಾಜ್ ಅದೇ ಕಾರಣಕ್ಕೆ ಆತ, ಗೌರಿ ಕೆಲಸ ಮಾಡುತ್ತಿದ್ದ ಪುತ್ತೂರಿನ ಫ್ಯಾನ್ಸಿ ಅಂಗಡಿ ಸನಿಹ ಬಂದು ಆಕೆಯನ್ನು ಕರೆದು ಮೊಬೈಲ್ ಕಿತ್ತುಕೊಂಡಿದ್ದ ಎನ್ನಲಾಗಿದೆ.
Related Articles
ಆರೋಪಿಯು ಪೊಲೀಸ್ ಠಾಣೆಯಿಂದ ಏಳೆಂಟು ಹೆಜ್ಜೆ ದೂರದಲ್ಲಿಯೇ ಯುವತಿಗೆ ಚಾಕುವಿನಿಂದ ಇರಿದಿರುವ ವಿಚಾರ ಇಡೀ ನಗರವನ್ನೇ ಬೆಚ್ಚಿ ಬೀಳಿಸಿದೆ. ಘಟನೆ ನಡೆದ ಆಸುಪಾಸಿನಲ್ಲೇ ಒಟ್ಟು ಮೂರು ಪೊಲೀಸ್ ಠಾಣೆಗಳಿದ್ದರೂ, ಆತ ಕೃತ್ಯಕ್ಕೆ ಮುಂದಾಗಿರುವುದು ಆಶ್ಚರ್ಯ ಮೂಡಿಸಿದೆ. ಯುವತಿಯ ಮೇಲೆ ದಾಳಿ ಮಾಡುತ್ತಿದ್ದ ವೇಳೆ ತಡೆಯಲು ಬಂದ ಕೆಲವರಿಗೆ ಆರೋಪಿಯು ಚೂರಿಯಿಂದ ಬೆದರಿಕೆಯನ್ನೂ ಒಡ್ಡಿದ್ದ ಎನ್ನಲಾಗಿದೆ.
Advertisement
ಕೃತ್ಯಕ್ಕೆ ಬಳಸಿದ್ದ ಬೈಕ್ ವಶಆರೋಪಿಯು ತಾನು ಕೆಲಸ ನಿರ್ವಹಿಸುತ್ತಿದ್ದ ಸಂಸ್ಥೆಯ ಓರ್ವರ ಬೈಕ್‌ನಲ್ಲಿ ಬಂದಿದ್ದು, ಆ ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜತೆಗೆ ಫ್ಯಾನ್ಸಿ ಅಂಗಡಿ ಬಳಿ ಆತ ಜಗಳ ಮಾಡಿರುವ ಕುರಿತಂತೆ ಸಿಸಿ ಕೆಮರಾ ದೃಶ್ಯಾವಳಿಯನ್ನು ಪಡೆದುಕೊಂಡಿದ್ದಾರೆ. ಆರೋಪಿ ಕೃತ್ಯಕ್ಕೆ ಬಳಸಿದ ಚಾಕು ಅನ್ನು ವಶಕ್ಕೆ ಪಡೆದಿರುವ ಮಾಹಿತಿ ಲಭ್ಯವಾಗಿದೆ. ಪಿಯುಸಿ ಓದಿ ಕೆಲಸಕ್ಕೆ ಸೇರಿದ್ದಳು
ಗೌರಿ ಪದವಿ ಪೂರ್ವ ಶಿಕ್ಷಣ ಪಡೆದು ಮೂರು ವಾರಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿದ್ದಳು. ಮಧ್ಯಾಹ್ನ ಮನೆಗೆ ತೆರಳುವುದಾಗಿ ಹೇಳಿ ಅಂಗಡಿಯಿಂದ ಬಂದಿದ್ದಳು ಎನ್ನುವ ಮಾಹಿತಿ ಲಭಿಸಿದೆ. ಅಂಗಡಿ ಮಾಲಕ ನೀಡಿದ ಮಾಹಿತಿ ಪ್ರಕಾರ, ಆಕೆ ಕೆಲಸಕ್ಕೆ ಬರುವುದಿಲ್ಲ ಎಂದು ತಿಳಿಸಿ ಗುರುವಾರ ಮಧ್ಯಾಹ್ನ 12.30ರ ವೇಳೆಯಲ್ಲಿ ಸಂಬಳ ಪಡೆದು ಹೋಗಿದ್ದಾಳೆ ಎಂದು ತಿಳಿದುಬಂದಿದೆ.