Advertisement

ಪುತ್ತೂರು: ಈಶನ ಪ್ರಿಯ ದಿನದಂದೇ ನಾಮಪತ್ರ ಸಲ್ಲಿಕೆ

01:25 PM Apr 24, 2018 | Team Udayavani |

ಪುತ್ತೂರು : ಸೋಮವಾರ ಶ್ರೀ ಮಹಾಲಿಂಗೇಶ್ವರ ದೇವರಿಗೆ ಪ್ರಿಯವಾದ ದಿನ. ಮಹಾಲಿಂಗೇಶ್ವರನ ಭಕ್ತರೆಲ್ಲರಿಗೂ ಅದೇ ದಿನ ಪ್ರಿಯ. ಆದ್ದರಿಂದ ಸೋಮವಾರ ಒಂದೇ ದಿನ ಒಟ್ಟು ಐದು ನಾಮಪತ್ರಗಳು ಸಲ್ಲಿಕೆಯಾದವು.

Advertisement

ಹಾಲಿ ಶಾಸಕಿ ಶಕುಂತಳಾ ಶೆಟ್ಟಿ ಕಾಂಗ್ರೆಸ್‌ನಿಂದ, ಸಂಜೀವ ಮಠಂದೂರು ಬಿಜೆಪಿಯಿಂದ, ಸಸಂತ್ರ ತುಳುನಾಡು ಪಕ್ಷದಿಂದ ವಿದ್ಯಾಶ್ರೀ, ಪ್ರಜಾ ಪರಿವರ್ತನಾ ಪಕ್ಷದಿಂದ ಶೇಖರ ಮಾಡಾವು, ಪಕ್ಷೇತರ ಅಭ್ಯರ್ಥಿಯಾಗಿ ಅಮರನಾಥ ಸೋಮವಾರ ಪುತ್ತೂರು ಮಿನಿ ವಿಧಾನಸೌಧದಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮ ಪತ್ರ ಸಲ್ಲಿಸಿದರು. ಸಹಾಯಕ ಆಯುಕ್ತ ಎಚ್‌. ಕೆ. ಕೃಷ್ಣಮೂರ್ತಿ ನಾಮಪತ್ರ ಪಡೆದುಕೊಂಡರು. ತಹಶೀಲ್ದಾರ್‌, ಸಹಾಯಕ ಚುನಾವಣಾಧಿಕಾರಿ ಅನಂತಶಂಕರ ಜತೆಗಿದ್ದರು.

ಬೆಳಗ್ಗೆ 11ರಿಂದ ಮಧ್ಯಾಹ್ನ 3ರ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಮಧ್ಯಾಹ್ನದ ಮೊದಲೇ ಐದು ನಾಮಪತ್ರಗಳು ಸಲ್ಲಿಕೆ ಆಗಿದ್ದವು. ಎ. 24 ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದ್ದು, ಮೂರು ನಾಮಪತ್ರ ಸಲ್ಲಿಕೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಎ. 25ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಇದಾಗಿ ಎ. 27ರಂದು ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಹಿಂತೆಗೆದುಕೊಳ್ಳಲು ಅವಕಾಶವಿದೆ. ಎ. 12ರಂದು ಮತದಾರ ತನ್ನ ತೀರ್ಮಾನವನ್ನು ತಿಳಿಸಲಿದ್ದು, ಎ. 15ರಂದು ತೀರ್ಪು ಹೊರಬೀಳಲಿದೆ.

ಚುನಾವಣೆಯ ಈ ಎಲ್ಲ ಪ್ರಕ್ರಿಯೆಗಳಿಗೆ ಅಖಾಡ ಈಗ ಸಿದ್ಧವಾಗಿದೆ. ಇದುವರೆಗೆ ಟಿಕೆಟ್‌ ಪಡೆಯುವ ವಿಷಯದಲ್ಲೇ ರಣರಂಗವಾಗಿದ್ದ ಕಣದಲ್ಲಿ ಈಗಷ್ಟೇ ರಾಜಕೀಯ ಪಕ್ಷಗಳ ರಂಗು ಮೆತ್ತಿಕೊಂಡಿದೆ. ಸೋಮವಾರ ಎರಡೂ ರಾಷ್ಟ್ರೀಯ ಪಕ್ಷಗಳು ಮೆರವಣಿಗೆಯಲ್ಲಿ ತೆರಳುವ ಮೂಲಕ ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಸುವ ಪ್ರಯತ್ನ ನಡೆಸಿದರು. ಬಿಜೆಪಿ ಹಾಗೂ ಕಾಂಗ್ರೆಸ್‌ ಎರಡೂ ಪಕ್ಷದಲ್ಲೂ ಬಲಾಬಲ ಸಮವಾಗಿತ್ತು. ಯಾರಿಗೇನೂ ಕಡಿಮೆಯಿಲ್ಲ ಎಂಬಂತೆ ಕಾರ್ಯಕರ್ತರನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿಯಾಗಿದ್ದರು.

Advertisement

ಬಿಜೆಪಿ ನಾಮಪತ್ರ ಸಲ್ಲಿಕೆಗೆ ಮೊದಲು ಸಭೆ ನಡೆಸಿದರೆ, ಕಾಂಗ್ರೆಸ್‌ ನಾಮಪತ್ರ ಸಲ್ಲಿಸಿದ ಬಳಿಕ ಕಾರ್ಯಕರ್ತರ ಸಭೆ ನಡೆಸಿತು. ಈ ಎರಡೂ ಪಕ್ಷಗಳಲ್ಲೂ ಟಿಕೆಟ್‌ ಗಾಗಿ ಪೈಪೋಟಿ ಏರ್ಪಟ್ಟಿತ್ತು. ಆದರೆ ಇದೀಗ ಹೈಕಮಾಂಡ್‌ ಧ್ವನಿಗೆ ಸಹಮತ ವ್ಯಕ್ತಪಡಿಸಿದಂತೆ ಕಾಣುತ್ತಿದೆ. ಬಿಜೆಪಿಯ ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಅಶೋಕ್‌ ಕುಮಾರ್‌ ರೈ ತಟಸ್ಥರಾಗಿದ್ದು, ಅರುಣ್‌ ಕುಮಾರ್‌ ಪುತ್ತಿಲ ಕರೆಗೇ ಸಿಗುತ್ತಿಲ್ಲ. ಕಾಂಗ್ರೆಸ್‌ನ ಕಾವು ಹೇಮನಾಥ ಶೆಟ್ಟಿ ನಡೆ ಇನ್ನೂ ನಿಗೂಢ. ದಿವ್ಯಪ್ರಭಾ ಚಿಲ್ತಡ್ಕ ಹೈಕಮಾಂಡ್‌ ತೀರ್ಮಾನಕ್ಕೆ ಆಗಲೇ ಬದ್ಧರಾಗಿದ್ದಾರೆ.

ಕೊನೆ ದಿನದ ಕುತೂಹಲ
ನಾಮಪತ್ರ ಸಲ್ಲಿಸಲು ಎ. 24 ಕೊನೆ ದಿನ. ಈ ದಿನ ಮೂರು ನಾಮಪತ್ರಗಳು ಸಲ್ಲಿಕೆಯಾಗುವ ಸಾಧ್ಯತೆ ಇದೆ. ಎಸ್‌ಡಿಪಿಐ ಈ ಬಾರಿ ನಾಮಪತ್ರ ಸಲ್ಲಿಸುವ ಯಾವುದೇ ಸಾಧ್ಯತೆ ಕಾಣುತ್ತಿಲ್ಲ. ಕೋಮುವಾದಿ ಪಕ್ಷಗಳನ್ನು ಸೋಲಿಸುವುದಷ್ಟೇ ಎಸ್‌ಡಿಪಿಐ ಉದ್ದೇಶ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಎಸ್‌ ಡಿಪಿಐ ತಟಸ್ಥವಾದರೆ, ಆ ಎಲ್ಲ ಮತಗಳು ಕಾಂಗ್ರೆಸ್‌ ಪಾಲಾಗಲಿವೆ. ಈ ಮೂಲಕ ಬಿಜೆಪಿಗೆ ಸಡ್ಡು ಹೊಡೆಯುವ ಲೆಕ್ಕಾಚಾರವಿದೆ.

Advertisement

Udayavani is now on Telegram. Click here to join our channel and stay updated with the latest news.

Next