ಪುತ್ತೂರು: ಪರಿಸರ ರಕ್ಷಣೆಯ ಉದ್ದೇಶದಿಂದ ನಡೆಯುವ ಗಿಡ ನೆಡುವ ಕಾರ್ಯಕ್ರಮ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ವರ್ಷವಿಡೀ ನಿರಂತರ ಚಟುವಟಿಕೆಯಾಗಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ರವಿವಾರ ಪುತ್ತೂರು ಅಸಹಾಯಕರ ಸೇವಾ ಟ್ರಸ್ಟ್ ಹಾಗೂ ನೆಲ್ಲಿಕಟ್ಟೆ ಮಹಾಲಿಂಗೇಶ್ವರ ಸ್ಪೋರ್ಟ್ಸ್ ಕ್ಲಬ್ ಜಂಟಿ ಆಶ್ರಯದಲ್ಲಿ ನೆಲ್ಲಿಕಟ್ಟೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮವನ್ನು ತೆಂಗಿನ ಸಸಿ ನೆಡುವ ಮೂಲಕ ಉದ್ಘಾಟಿಸಿದರು.
ಆಧುನಿಕತೆಗೆ ಜನ ಒಗ್ಗಿಕೊಂಡರೂ ಹಿಂದಿನವರು ಹಾಕಿಕೊಟ್ಟ ಸಂಸ್ಕೃತಿ, ಸಂಸ್ಕಾರ, ಪರಿಸರ ರಕ್ಷಣೆಯ ಜಾಗೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕಾಳಜಿ ಪ್ರತಿಯೊಬ್ಬರೂ ತೋರಬೇಕು. ಆಮ್ಲಜನಕ ನೀಡುವ ಮರಗಳನ್ನು ಶಾಲಾ ಪರಿಸರ ಸಹಿತ ಎಲ್ಲೆಡೆ ಬೆಳೆಸುವ ಅಗತ್ಯ ಇದೆ ಎಂದರು.
ಶಾಸಕರಿಗೆ ಮನವಿ ಸಲ್ಲಿಕೆ
ಅಸಹಾಯಕರ ಸೇವಾ ಟ್ರಸ್ಟ್ ಅಧ್ಯಕ್ಷೆ ನಯನಾ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ಹಳ್ಳಿ ಶಾಲೆಗಳು ಮೂಲ ಸೌಕರ್ಯಗಳಲ್ಲಿ ಮುಂದಿದೆ. ಪೇಟೆಯ ನಡುವೆ ಇರುವ ಈ ನೆಲ್ಲಿಕಟ್ಟೆ ಶಾಲೆಯನ್ನು ಅಸಹಾಯಕರ ಸೇವಾ ಟ್ರಸ್ಟ್ , ಶಿಕ್ಷಣ ಸಂಪನ್ಮೂಲ ಕೇಂದ್ರ ಹಾಗೂ ಸ್ಥಳೀಯ ಸಹಕಾರದೊಂದಿಗೆ ಅಭಿವೃದ್ಧಿಯತ್ತ ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಶಾಲಾ ಅಭಿವೃದ್ಧಿ ಮತ್ತಷ್ಟು ಅನುದಾನಗಳು ಬೇಕಾಗಿದೆ ಎಂದರು. ಈ ಕುರಿತು ಶಾಸಕರಿಗೆ ಮನವಿಯನ್ನು ಸಲ್ಲಿಸಿದರು.
ಎಸ್‌ಡಿಎಂಸಿ ಅಧ್ಯಕ್ಷೆ ಸವಿತಾ, ಮಹಾಲಿಂಗೇಶ್ವರ ನ್ಪೋರ್ಟ್ಸ್ ಕ್ಲಬ್‌ನ ಹರೀಶ್, ಶಾಲಾ ಶಿಕ್ಷಕಿ ಮೀನಾಕ್ಷಿ ಉಪಸ್ಥಿತರಿದ್ದರು. ಶಿಕ್ಷಕಿ ಮೀನಾಕ್ಷಿ ವಂದಿಸಿದರು. ನ್ಯಾಯವಾದಿ ಹರಿಣಾಕ್ಷಿ ಜೆ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.