ಪುತ್ತೂರು: ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಸಾಮಾಜಿಕ ಕ್ಷೇತ್ರಗಳಲ್ಲೂ ಗುರುತಿಸಿಕೊಳ್ಳುವಂತೆ ಆಗಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ತಾ.ಪಂ. ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಆಶ್ರಯದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ 113 ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಣೆ ಮಾಡಿ ಮಾತನಾಡಿದರು.
ತಾಲೂಕು ಕ್ರೀಡಾಪಟುಗಳು ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ, ಅವರ ಭವಿಷ್ಯದ ಯೋಚನೆಯೊಂದಿಗೆ ಸರಕಾರ ಪ್ರತಿ ವರ್ಷ ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಇದರ ಸದುಪಯೋಗ ಪಡೆದುಕೊಂಡ ವಿದ್ಯಾರ್ಥಿಗಳು ಪುತ್ತೂರಿನ ಕೀರ್ತಿ ಪತಾಕೆಯನ್ನು ಹಾರಿಸಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಮಾತನಾಡಿ, ಕ್ರೀಡಾಪಟುಗಳಲ್ಲಿ ಯಾವುದೇ ಭೇದ ಭಾವ ಕಾಣದ ರೀತಿಯಲ್ಲಿ ಸರಕಾರ ಮೂಲಭೂತ ಸೌಕರ್ಯಗಳನ್ನು ಕ್ರೀಡಾ ಪಟುಗಳಿಗೆ ನೀಡುತ್ತಾ ಬಂದಿದೆ. ಇದರ ಸದುಪಯೋಗ ಪಡೆದುಕೊಂಡು ಜಿಲ್ಲೆಯನ್ನು ಪ್ರತಿನಿಧಿಸಿ ಪುತ್ತೂರಿನ ಹೆಸರನ್ನು ಬೆಳಗಿಸಿ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್ ಮಾತನಾಡಿ, ಈ ಬಾರಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಅ. 12 ಮತ್ತು 13ರಂದು ಉಜಿರೆ ಎಸ್‌ಡಿಎಂ ಕಾಲೇಜಿನ ರತ್ನವರ್ಮ ಕ್ರೀಡಾಂಗಣದಲ್ಲಿ ನಡೆಯಲಿದೆ. ತಾಲೂಕಿನಿಂದ ಆಯ್ಕೆಯಾದ ಕ್ರೀಡಾಪಟುಗಳ ಸಾಧನೆಗಾಗಿ ಪ್ರತಿವರ್ಷ ತಾ.ಪಂ. ಸಹಕಾರದೊಂದಿಗೆ ಸಮವಸ್ತ್ರ ಸಹಿತ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಲಾಗುತ್ತಿದೆ. ಈ ಬಾರಿ ಸುಮಾರು 80 ಸಾವಿರ ರೂಪಾಯಿ ವೆಚ್ಚದಲ್ಲಿ ಸಮವಸ್ತ್ರ ವಿತರಿಸಲಾಗಿದೆ. ಕ್ರೀಡಾಪಟುಗಳು ಉತ್ತಮ ರೀತಿಯಲ್ಲಿ ಸದಪಯೋಗ ಪಡಿಸಿಕೊಳ್ಳಿ ಎಂದರು.
ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ, ಸದಸ್ಯರಾದ ಮೀನಾಕ್ಷಿ ಮಂಜುನಾಥ, ಸಾಜ ರಾಧಾಕೃಷ್ಣ ಆಳ್ವ, ಹರೀಶ್ ಬಿಜತ್ರೆ, ತೇಜಸ್ವಿನಿ, ತಾ.ಪಂ. ಸದಸ್ಯ ಮುಕುಂದ, ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಡಿ.ಎನ್., ಶಿಕ್ಷಕಿ ಪುಷ್ಪಾವತಿ ಉಪಸ್ಥಿತರಿದ್ದರು. ತಾಲೂಕು ದೈಹಿಕ ಶಿಕ್ಷಣ ಶಿಕ್ಷಕ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷೆ ಐರಿ ಗ್ರೆಟ್ಟಾ ಪಾಯಸ್ ವಂದಿಸಿದರು. ತಾಲೂಕಿನಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ 113 ಮಂದಿಗೆ ಕ್ರೀಡಾ ಸಮವಸ್ತ್ರ ವಿತರಿಸಲಾಯಿತು.
ಸಿಂಥೆಟಿಕ್ ಟ್ರ್ಯಾಕ್
ಪುತ್ತೂರಿನ ಕ್ರೀಡಾಪಟುಗಳ ಅಭ್ಯಾಸಕ್ಕಾಗಿ ಸಿಂಥೆಟಿಕ್ ಟ್ರ್ಯಾಕ್‌ನ ಆವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಸಿಂಥೆಟಿಕ್‌ಟ್ರ್ಯಾಕನ್ನು ಅತೀ ಶೀಘ್ರದಲ್ಲಿ ಒದಗಿಸಿಕೊಡುವಂತೆ ದೈಹಿಕ ಶಿಕ್ಷಣ ಶಿಕ್ಷಕ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಅವರು ಶಾಸಕರಲ್ಲಿ ಮನವಿ ಮಾಡಿದರು.