Advertisement

ಪುತ್ತೂರು: ಅನುದಾನವಿದ್ದರೂ ಅಂದ್ರಟ್ಟದಲ್ಲಿ ಸೇತುವೆ ಆಗಿಲ್ಲ

01:19 PM Jan 02, 2023 | Team Udayavani |

ಪುತ್ತೂರು: ಚಿಕ್ಕಮುಟ್ನೂರು ಗ್ರಾಮದ ಜಿಡೆಕಲ್ಲು-ಪುರುಷರಕಟ್ಟೆ ಸಂಪರ್ಕ ರಸ್ತೆಯ ಅಂದ್ರಟ್ಟದಲ್ಲಿ ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದರೂ ನಿರ್ಮಾಣ ಕಾರ್ಯ ಮಾತ್ರ ಮೀನಾ-ಮೇಷ ಎಣಿಸುತ್ತಿದೆ. ಹಲವು ದಶಕಗಳ ಬೇಡಿಕೆಯ ಸೇತುವೆ ಇದಾಗಿದ್ದು ಅನುದಾನ ಮಂಜೂರಾತಿ ನಿರೀಕ್ಷೆ ಮೂಡಿಸಿದ್ದರೂ ಕಾಮಗಾರಿ ಆರಂಭಗೊಳ್ಳದೆ ಗ್ರಾಮಸ್ಥರಲ್ಲಿ ನಿರಾಸೆ ಮೂಡಿಸಿದೆ.

Advertisement

40 ವರ್ಷಗಳ ಹಿಂದೆ ಅಣೆಕಟ್ಟು ನಿರ್ಮಾಣ
ಅಂದ್ರಟ್ಟದಲ್ಲಿ 40 ವರ್ಷಗಳ ಹಿಂದೆ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿತ್ತು. ಅದರ ಮೇಲೆ ಪಾದಚಾರಿ ನಡಿಗೆಗೆಂದು ಅಳವಡಿಸಿದ ಸ್ಲಾಬ್‌ನಲ್ಲೇ ಜನರು ಒಂದು ಕಡೆಯಿಂದ ಇನ್ನೊಂದೆಡೆಗೆ ಸಂಚರಿಸುತ್ತಿದ್ದರು. ಈ ಕಿಂಡಿ ಅಣೆಕಟ್ಟೇ ಅಪಾಯದ ಸ್ಥಿತಿಗೆ ತಲುಪಿದೆ. ಪಿಲ್ಲರ್‌ ಕುಸಿದು ಬೀಳುವ ಹಂತಕ್ಕೆ ತಲುಪಿದ ಕಾರಣ ಸ್ಥಳೀಯರು ಎರಡು ವರ್ಷಗಳ ಹಿಂದೆ ಹಳೆ ಸೇತುವೆಯಿಂದ 100-150 ಮೀಟರ್‌ ದೂರದಲ್ಲಿ ತೋಡಿಗೆ ಮಣ್ಣು ತುಂಬಿಸಿ ಪರ್ಯಾಯ ರಸ್ತೆ ನಿರ್ಮಿಸಿದ್ದರು. ಈ ರಸ್ತೆ ನಿರ್ಮಾಣಕ್ಕೆ ಸ್ಥಳೀಯ ನಿವಾಸಿಗಳಿಬ್ಬರು ತೋಟದ ಜಾಗವನ್ನು ಬಿಟ್ಟುಕೊಟ್ಟಿದ್ದರು. ಬೇಸಗೆ ಕಾಲದಲ್ಲಿ ಮಾತ್ರ ಈ ರಸ್ತೆ ಉಪಯೋಗಕ್ಕೆ ಬರುತ್ತಿದ್ದು ಮಳೆಗಾಲದಲ್ಲಿ ಮಳೆ ನೀರಿಗೆ ಕೊಚ್ಚಿ ಹೋಗುತ್ತದೆ.

ಮಳೆಗಾಲದಲ್ಲಿ ಸುತ್ತಾಟ
ಈ ಅಣೆಕಟ್ಟು ಎಪಿಎಂಸಿ- ಜಿಡೆಕಲ್ಲು- ಪುರುಷರಕಟ್ಟೆ ನಡುವೆ ಸಂಪರ್ಕ ಕೊಂಡಿಯಾಗಿರುವುದರಿಂದ ಆನಡ್ಕ, ಪುರುಷರಕಟ್ಟೆ, ಶಾಂತಿಗೋಡು, ಎಲಿಕ ಪ್ರದೇಶಗಳ
ಸಾರ್ವಜನಿಕರು, ವಿದ್ಯಾರ್ಥಿಗಳು ಇದೇ ದಾರಿಯನ್ನು ಬಳಸುತ್ತಿದ್ದರು. ಮಳೆಗಾಲದಲ್ಲಿ ರಕ್ಷಣ ಬೇಲಿ ಇಲ್ಲದ ಸ್ಲ್ಯಾಬ್‌ ಮೇಲೆ ಮಳೆ ನೀರು ಹರಿಯುತ್ತಿರುವ ಸಂದರ್ಭ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿ ಇಲ್ಲಿರುವುದರಿಂದ ಸುತ್ತಾಟವೇ ಅನಿವಾರ್ಯವೆನಿಸಿದೆ.

ಬಹುತೇಕ ವಿದ್ಯಾರ್ಥಿಗಳು ಪುರುಷರಕಟ್ಟೆ-ಪುತ್ತೂರು ಮಾರ್ಗವಾಗಿ ಸಂಚರಿಸಿ ಜಿಡೆಕಲ್ಲು ಭಾಗಕ್ಕೆ ಬರುತ್ತಾರೆ. ಅಂದರೆ 7-8 ಕಿ.ಮೀ. ಸುತ್ತಾಡಿ ಶಾಲೆ, ನಗರಕ್ಕೆ ತಲುಪಬೇಕಿದೆ. ಎರಡು ವರ್ಷಗಳ ಹಿಂದೆ ಕೂಲಿ ಕಾರ್ಮಿಕನೋರ್ವ ಮಳೆಗಾಲದ ಸಂದರ್ಭ ಕಿಂಡಿ ಅಣೆಕಟ್ಟಿನ ಮೇಲಿನಿಂದ ಆಯ ತಪ್ಪಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿ ಪ್ರಾಣ ಕಳೆದುಕೊಂಡ ಘಟನೆಯು ನಡೆದಿತ್ತು.

1. 75 ಕೋಟಿ ರೂ. ಅನುದಾನ
ಎರಡು ಗ್ರಾಮಗಳನ್ನು ಬೆಸೆಯುವ ಅಂದ್ರಟ್ಟದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಶಾಸಕರು 1.75 ಕೋ. ರೂ. ಅನುದಾನ ಮಂಜೂರುಗೊಳಿಸಿ ವರ್ಷ ಸಮೀಪಿಸುತ್ತಿದೆ. ಆದರೆ ಕಾಮಗಾರಿ ಆರಂಭವಾಗಿಲ್ಲ. ಆರು ತಿಂಗಳ ಹಿಂದೆ ಅಳತೆ ಮಾಡಿ ಸರ್ವೇ ಕಾರ್ಯ ಮಾಡಲಾಗಿತ್ತು. ಆದರೆ ಮುಂದಿನ ಕೆಲಸ ಕಾರ್ಯಗಳು ನಡೆದೇ ಇಲ್ಲ. ಬೇಸಗೆ ಕಾಲದಲ್ಲಿ ಜೆಸಿಬಿ ಮೂಲಕ ಮಣ್ಣು ತುಂಬಿಸಿ ಪರ್ಯಾಯ ರಸ್ತೆಯನ್ನಾಗಿ ಮಾಡಿದ್ದೇವೆ. ಮಳೆಗಾಲದಲ್ಲಿ ಈ ಮಣ್ಣು ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಇಲ್ಲಿ ಸೇತುವೆ ನಿರ್ಮಾಣ ಆಗಬೇಕು ಎಂಬ ಮನವಿಯನ್ನು ಮೂರು ವರ್ಷಗಳ ಹಿಂದೆ ಶಾಸಕರು ಸಹಿತ ಸಂಬಂಧಪಟ್ಟ ಇಲಾಖೆಗೆ ನೀಡಿದ್ದೇವೆ. ಮನವಿಗೆ ಸ್ಪಂದಿಸಿ ಅನುದಾನ ಮಂಜೂರುಗೊಂಡಿದ್ದು, ಕೆಲಸ ಆಗಿಲ್ಲ. ಬೇಗನೆ ಕೆಲಸ ಆರಂಭಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

ಟೆಂಡರ್‌ ಆಗಬೇಕು ಚಿಕ್ಕಮುಟ್ನೂರು ಗ್ರಾಮದ ಅಂದ್ರಟ್ಟ ಎಂಬಲ್ಲಿ ಕಿಂಡಿ ಅಣೆಕಟ್ಟಿನ ಪಾದಚಾರಿ ನಡಿಗೆಯ ಸ್ಲ್ಯಾಬ್‌ ಬಿರುಕು ಬಿಟ್ಟು ಅಪಾಯದ ಸ್ಥಿತಿಯಲ್ಲಿರುವುದರಿಂದ ಗ್ರಾಮಸ್ಥರ ಬೇಡಿಕೆಯಂತೆ ಹೊಸ ಸೇತುವೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ 1.75 ಕೋ. ರೂ. ಅನುದಾನ ಮಂಜೂರುಗೊಳಿಸ ಲಾಗಿದೆ. ಕಾಮಗಾರಿ ವಿಚಾರವು ಟೆಂಡರ್‌ ಪ್ರಕ್ರಿಯೆಯಲ್ಲಿದೆ.ಟೆಂಡರ್‌ ಪ್ರಕ್ರಿಯೆ ಮುಗಿದ ತತ್‌ಕ್ಷಣ ಕಾಮಗಾರಿ ಆರಂಭಿಸಲಾಗುವುದು.
-ಸಂಜೀವ ಮಠಂದೂರು,
ಶಾಸಕರು ಪುತ್ತೂರು

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next