Advertisement

ಜತೆಗೂಡಿ ಆಚರಿಸುವುದೇ ನಿಜವಾದ ಹಬ್ಬ 

03:40 PM Nov 08, 2018 | |

ನೆಹರೂನಗರ: ಎಲ್ಲರ ಜತೆಗೂಡಿ ಹಬ್ಬ ಅಚರಿಸುವುದು ನಮ್ಮ ದೇಶದ ಸಂಸ್ಕೃತಿ. ದೀಪಾವಳಿ ಕೇವಲ ಒಂದು ಮನೆಗೆ ಸೀಮಿತವಲ್ಲ, ಸಮಾಜದ ಪ್ರತಿಯೊಬ್ಬರೂ ಸೇರಿ ಸಂಭ್ರಮದಿಂದ ಆಚರಿಸಬೇಕು. ಕತ್ತಲಿನಿಂದ ಬೆಳಕಿನೆಡೆಗೆ ಸಾಗಿ ಮನಸ್ಸಿಗೆ ನೆಮ್ಮದಿಯನ್ನು ನೀಡುವುದರ ಮೂಲಕ ಅಂಧಕಾರವನ್ನು ಹೋಗಲಾಡಿಸುವ ಹಬ್ಬವೇ ದೀಪಾವಳಿ ಎಂದು ವಿವೇಕಾನಂದ ಕಾಲೇಜಿನ ಪ್ರಾಚಾರ್ಯ ಡಾ| ಪೀಟರ್‌ ವಿಲ್ಸನ್‌ ಪ್ರಭಾಕರ್‌ ಅವರು ಹೇಳಿದರು.

Advertisement

ವಿವೇಕಾನಂದ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದಲ್ಲಿ ಎಂಕಾಂ ವಿಭಾಗದ ನೇತೃತ್ವದಲ್ಲಿ ಮಂಗಳವಾರ ಆಯೋಜಿಸಿದ್ದ ದೀಪಾವಳಿ ಸಂಭ್ರಮಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಬ್ಬಗಳ ಮಹತ್ವ ಅರಿಯಿರಿ
ದೀಪಾವಳಿ ದೀಪಗಳ ಹಬ್ಬ. ಪರಸ್ಪರ ಮಾನವ ಸಂಬಂಧ, ಪ್ರೀತಿ, ವಿಶ್ವಾಸವನ್ನು ಬೆಳೆಸಿ ಒಗ್ಗಟ್ಟಿನಿಂದ ಬಾಳುವುದೇ ಹಬ್ಬಗಳ ಪ್ರಮುಖ ಉದ್ದೇಶ. ಆದರೆ ಇಂದು ಆಚರಣೆ ಎನ್ನುವುದು ಒಂದು ಮನೆಗೆ ಸೀಮಿತವಾಗಿದೆ. ಹಬ್ಬ ಅಂದರೆ ಮಳಿಗೆಗಳಲ್ಲಿ ಬಟ್ಟೆಗಳನ್ನು ರಿಯಾಯಿತಿ ದರದಲ್ಲಿ ಪಡೆಯಲು ಇರಲು ಒಂದು ವಿಧಾನವಾಗಿ ಮಾರ್ಪಟ್ಟಿದೆ. ಹಾಗಾಗಿ ಇಂದು ಹಬ್ಬಗಳ ಮಹತ್ವದ ಬಗ್ಗೆ ಜನರಲ್ಲಿ ಅರಿವು ಕ್ಷೀಣಿಸುತ್ತಿದೆ. ಇದು ಬದಲಾಗ ಬೇಕಿದೆ ಎಂದವರು ಹೇಳಿದರು. 

ಎಂಕಾಂ ವಿಭಾಗದ ವಿದ್ಯಾರ್ಥಿಗಳಾದ ಶ್ವೇತಾ ಮತ್ತು ರವಿ ಅವರು ದೀಪಾವಳಿಯ ಕುರಿತು ಅಭಿಪ್ರಾಯ ಹಂಚಿಕೊಂಡರು. ವಿದ್ಯಾರ್ಥಿ ಅಶೋಕ್‌ ಭಾವಗೀತೆ ಹಾಡಿದರು. ಎಂಸಿಜೆ, ಎಂಕಾಂ, ಎಂಎಸ್ಸಿ ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರಶ್ಮಿ ಪ್ರಾರ್ಥಿಸಿ, ಶ್ರೀಲಕ್ಷ್ಮೀ ಸ್ವಾಗತಿಸಿದರು. ಅನಿತಾ ವಂದಿಸಿ, ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.

ಬದುಕು ಕಟ್ಟಿಕೊಡುತ್ತದೆ 
ಸ್ನಾತಕೋತ್ತರ ವಿಭಾಗಗಳ ಸಂಯೋಜಕಿ ಡಾ| ವಿಜಯಾ ಸರಸ್ವತಿ ಮಾತನಾಡಿ, ದೀಪಾವಳಿ ಜ್ಞಾನದ ಸಂಕೇತ. ಎಲ್ಲರೂ ಒಟ್ಟು ಸೇರಿ ಹಬ್ಬಗಳನ್ನು ಆಚರಿಸಿದಾಗ ಅದರಲ್ಲಿ ಸಿಗುವ ಖುಷಿಯ ಅನುಭವ ಹೆಚ್ಚು. ದೀಪಗಳ ಹಬ್ಬ ಮುಚ್ಚಿದ ಮನಸ್ಸನ್ನು ತೆರೆದು ಪ್ರೀತಿಯನ್ನು ತುಂಬುವುದರ ಮೂಲಕ ಜೀವನಕ್ಕೆ ಮಾದರಿ ಆಗುತ್ತದೆ. ವಿದ್ಯಾರ್ಥಿ ಜೀವನ ಎನ್ನುವುದು ಕೇವಲ ಪುಸ್ತಕಕ್ಕೆ ಸೀಮಿತವಾಗದೇ ಜೀವನ ಮೌಲ್ಯಗಳನ್ನು ಅರಿತುಕೊಳ್ಳುವಂತೆ ಆಗಬೇಕು. ಸಾಧನೆಗೆ ಪೂರಕವಾದ ವಿಷಯಗಳು ಬದುಕನ್ನು ಕಟ್ಟಿಕೊಡುತ್ತವೆ ಎಂದರು. 

Advertisement

ಭಾವನೆ ಕುಂಠಿತವಾಗುತ್ತಿದೆ
ಹಿಂದೆ ಕಾಗದದ ಮೂಲಕ ಶುಭಾಶಯವನ್ನು ತಿಳಿಸುತ್ತಿದ್ದರು. ಆದರೆ ಇಂದು ಮೊಬೈಲ್‌ ಫೋನ್‌ನಿಂದ ಶುಭಾಶಯದ ಸಂದೇಶವನ್ನು ವಿನಿಮಯ ಮಾಡಿಕೊಳ್ಳುತ್ತಿದ್ದೇವೆ. ಯಾಂತ್ರಿಕ ವಿಚಾರಗಳಿಂದಾಗಿ ಜನರ ನಡುವಿನ ಮನೋಭಾವನೆಗಳು ಕುಂಠಿತವಾಗುತ್ತಿದೆ. ಹಬ್ಬಗಳ ಉದ್ದೇಶಗಳನ್ನು ಅರಿತು ಆಚರಿಸಿದಾಗ ಪ್ರತಿಯೊಂದು ಹಬ್ಬಕ್ಕೂ ಪರಿಪೂರ್ಣ ಅರ್ಥ ದೊರಕುತ್ತದೆ ಎಂದು ಡಾ| ಪೀಟರ್‌ ವಿಲ್ಸನ್‌ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next