Advertisement

ಬಂಧಿತರ ಮೇಲೆ ಪೊಲೀಸ್‌ ದೌರ್ಜನ್ಯ: ರಾಜ್ಯಾದ್ಯಂತ ವ್ಯಾಪಕ ಆಕ್ರೋಶ

12:10 AM May 19, 2023 | Team Udayavani |

ಪುತ್ತೂರು: ಪೊಲೀಸರ ದೌರ್ಜನ್ಯಕ್ಕೊಳಗಾದ ಹಿಂದೂ ಕಾರ್ಯಕರ್ತರ ಪೈಕಿ ಅವಿನಾಶ್‌ ಅವರ ತಂದೆ ವೇಣುನಾಥ ನರಿಮೊಗರು ಮೇ 17ರಂದು ನೀಡಿದ ದೂರಿನಂತೆ, ಡಿವೈಎಸ್‌ಪಿ, ಸಂಪ್ಯ ಠಾಣೆಯ ಪಿಎಸ್‌ಐ ಮತ್ತು ಪಿಸಿಯೊಬ್ಬರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ನಗರದ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದ ಬಳಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಮತ್ತು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಫೋಟೋ ಬಳಸಿ ಭಾವಪೂರ್ಣ ಶ್ರದ್ಧಾಂಜಲಿ ಎಂದು ಬರೆದು ಚಪ್ಪಲಿ ಹಾರ ಹಾಕಿ ಬ್ಯಾನರ್‌ ಅಳವಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ 9 ಮಂದಿ ಆರೋಪಿಗಳ ಮೇಲೆ ಪೊಲೀಸರು ದೌರ್ಜನ್ಯ ಎಸಗಿರುವ ಚಿತ್ರ, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಕೃತ್ಯದ ಬಗ್ಗೆ ವ್ಯಾಪಕ ಆಕ್ರೋಶ ಕೇಳಿ ಬಂದಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಎಸ್ಪಿ ಡಾ| ವಿಕ್ರಂ ಅಮ್ಟೆ ಮತ್ತು ಎಡಿಷನಲ್‌ ಎಸ್ಪಿ ಕುಮಾರ್‌ ಪುತ್ತೂರು ಡಿವೈಎಸ್ಪಿ ಕಚೇರಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಹೆಚ್ಚಿನ ತನಿಖೆಯನ್ನು ಬಂಟ್ವಾಳ ಡಿವೈಎಸ್ಪಿಗೆ ವಹಿಸಲಾಗಿದೆ. ಈ ಮಧ್ಯೆ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರ ವಿಚಾರಣೆ ವರದಿ ಆಧರಿಸಿ ಪಿಎಸ್‌ಐ ಮತ್ತು ಪಿಸಿಯನ್ನು ಅಮಾನತುಗೊಳಿಸಲಾಗಿದೆ.

ಲಾಕಪ್‌ಡೆತ್‌ ಆಗಿರುತ್ತಿತ್ತು!: ಗಂಭೀರವಾಗಿ ಗಾಯಗೊಂಡ ಅವಿನಾಶ್‌ ಪ್ರತಿಕ್ರಿಯಿಸಿದ್ದು, ಬಂಧನ ದಿನ ರಾತ್ರಿ ಅರುಣ್‌ ಕುಮಾರ್‌ ಪುತ್ತಿಲ ಅವರು ಠಾಣೆಗೆ ಬರದಿರುತ್ತಿದ್ದರೆ ನಮ್ಮ ಲಾಕಪ್‌ ಡೆತ್‌ ಆಗುತ್ತಿತ್ತು ಎಂದು ಭೀತಿ ವ್ಯಕ್ತಪಡಿಸಿದ್ದಾರೆ.

ಇಂದು ಪುತ್ತೂರಿಗೆ ಯತ್ನಾಳ್‌: ಪ್ರಕರಣದ ಮಾಹಿತಿ ಪಡೆಯಲು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮೇ 19ರಂದು ಪುತ್ತೂರಿಗೆ ಆಗಮಿಸುವರು. ಯತ್ನಾಳ್‌ ಅವರು ಪುತ್ತಿಲರಿಗೆ ದೂರವಾಣಿ ಕರೆ ಮಾಡಿ ಈ ವಿಷಯ ತಿಳಿಸಿದ್ದಾರೆ.

Advertisement

ಬಿಜೆಪಿ ಖಂಡನೆ: ಚಿತ್ರಹಿಂಸೆ ಪ್ರಕರಣವನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಖಂಡಿಸಿದ್ದಾರೆ. ಕೃತ್ಯಕ್ಕೆ ಕಾರಣಕರ್ತರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕಾರ್ಯಕರ್ತರ ಮೇಲೆಯೇ ಹಲ್ಲೆ ಮಾಡಿಸಿದ್ದಾರೆ: ಪುತ್ತಿಲ
ಘಟನೆಯ ಕುರಿತಂತೆ ಪತ್ರಿಕಾಗೋಷ್ಠಿ ನಡೆಸಿದ ಸಂಘ ಪರಿವಾರದ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ, ಈ ಪ್ರಕರಣದ ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ಮತ್ತು ಪ.ಜಾತಿ ಕಲ್ಯಾಣ ಇಲಾಖೆಗೆ ದೂರು ನೀಡಲಾಗುವುದು. ಪೊಲೀಸರ ಮೇಲೆ ಒತ್ತಡ ಹೇರಿ ಈ ಕೃತ್ಯ ಎಸಗಲಾಗಿದೆ. ಘಟನೆಯ ವಿರುದ್ಧ ನಡೆದ ಪ್ರತಿಭಟನೆಯ ವೇಳೆ ಹಿಂದೂ ಕಾರ್ಯಕರ್ತರಿಗೆ ಧಿಕ್ಕಾರದ ಕೂಗು ಮೊಳಗಿದೆ. ಹಾಗಾಗಿ ದೌರ್ಜನ್ಯ ಮಾಡಿದವರು ಯಾರೆನ್ನುವುದು ಜನರಿಗೆ ತಿಳಿದಿದೆ. ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಿದ್ದಾರೆ ಎಂದು ಭಾವಿಸಿ ತಮ್ಮ ಪಕ್ಷದ ಕಾರ್ಯಕರ್ತರ ಮೇಲೆಯೇ ಹಲ್ಲೆ ಮಾಡಿಸಲಾಗಿದೆ ಎಂದರು. ಮತ ಎಣಿಕೆಯ ಬಳಿಕ ಹಲವು ಘಟನೆಗಳು ನಡೆಯುತ್ತಿವೆ. ವಿಟ್ಲದಲ್ಲಿ ಅತ್ಯಾಚಾರ ಯತ್ನ, ಗ್ಯಾಸ್‌ ವಿತರಕರ ಮೇಲೆ ಹಲ್ಲೆ, ಕೂರ್ನಡ್ಕದಲ್ಲಿ ಹಲ್ಲೆ, ಕಾವುವಿನಲ್ಲಿ ಕೇಸರಿ ಫ್ಲೆಕ್ಸ್‌ ಹರಿದು ಹಾಕಿರುವುದು, ಸವಣೂರಿನಲ್ಲಿ ಕೇಸರಿ ಧ್ವಜಕ್ಕೆ ಅವಮಾನ ಮೊದಲಾದ ಘಟನೆ ನಡೆದಿವೆ, ಇವು ಹೀಗೆ ಮುಂದುವರಿದರೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದಿದ್ದಾರೆ.

ನಳಿನ್‌, ಡಿ.ವಿ. ವಿರುದ್ಧ ಆಕ್ರೋಶ
ಬಂಧಿತ ಹಿಂದೂ ಕಾರ್ಯಕರ್ತರ ಮೇಲಿನ ದೌರ್ಜನ್ಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ನೇರ ಕಾರಣ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದು ಎರಡು ದಿನವಾದರೂ ಅವರಿಬ್ಬರು ಗಾಯಾಳುಗಳನ್ನು ವಿಚಾರಿಸಿಲ್ಲ. ಹಿಂದಿನ ಅವಧಿಯ ಮಾಜಿ ಶಾಸಕರೂ ಬಂದಿಲ್ಲ ಎಂಬ ಬಗ್ಗೆ ಆಕ್ರೋಶದ ಸಂದೇಶಗಳು ಹರಿದಾಡುತ್ತಿವೆ.

ಕಾಂಗ್ರೆಸ್‌ ಪ್ರೇರಿತ ದೌರ್ಜನ್ಯ: ಆರೋಪ
ಪುತ್ತೂರು: ಸರಕಾರ ಬದಲಾದ ತತ್‌ಕ್ಷಣ ಏನು ಬೇಕಾದರು ಮಾಡಬಹುದು ಅನ್ನುವುದಕ್ಕೆ ಈ ಘಟನೆ ಉದಾಹರಣೆ. ಕಾರ್ಯಕರ್ತರ ಮೇಲಿನ ಈ ದೌರ್ಜನ್ಯ ನೂರಕ್ಕೆ ನೂರರಷ್ಟು ಕಾಂಗ್ರೆಸ್‌ನ ಕಿತಾಪತಿ ಎಂದು ಸಂಘ ಪರಿವಾರದ ಮುಖಂಡ ಡಾ| ಪ್ರಭಾಕರ ಭಟ್‌ ಕಲ್ಲಡ್ಕ ಟೀಕಿಸಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ವಿಚಾರಿಸಿದ ಬಳಿಕ ಮಾತನಾಡಿದ ಅವರು, ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಡಿವೈಎಸ್ಪಿಯನ್ನು ಅಮಾನತು ಮಾಡಬೇಕು. ಕಾರ್ಯಕರ್ತರಿಂದ ಸಣ್ಣ-ಪುಟ್ಟ ವ್ಯತ್ಯಾಸ ಆಗುತ್ತದೆ. ಹಾಗೆಂದು ಇದು ಅಕ್ಷಮ್ಯ ಅಲ್ಲ. ನಾವು ಇದನ್ನು ಹೀಗೆ ಬಿಡುವುದಿಲ್ಲ. ಇದರ ಹಿಂದಿನ ಶಕ್ತಿ ಯಾರೆಂದು ಗೊತ್ತಾಗಬೇಕು ಎಂದರು.

ಬಿಜೆಪಿಯೇ ಕಾರಣ: ಅಶೋಕ್‌ ರೈ
ಡಾ| ಪ್ರಭಾಕರ ಭಟ್‌ ಅವರ ಹೇಳಿಕೆಯನ್ನು ಕಾಂಗ್ರೆಸ್‌ ತೀವ್ರವಾಗಿ ಖಂಡಿಸಿದೆ. ಬಿಜೆಪಿ ನಾಯಕರ ಒತ್ತಡವೇ ಈ ಹಲ್ಲೆಗೆ ಕಾರಣ. ಅಧಿಕಾರಿಗಳಿಗೆ ದೂರವಾಣಿ ಕರೆ ಮೂಲಕ ಒತ್ತಡ ಹೇರಿದವರ ಹೆಸರುಗಳನ್ನು ಎರಡು ದಿನದಲ್ಲಿ ಬಹಿರಂಗಪಡಿಸುವೆ ಎಂದು ಶಾಸಕ ಅಶೋಕ್‌ ಕುಮಾರ್‌ ರೈ ತಿಳಿಸಿದ್ದಾರೆ.

ನನ್ನ ಕ್ಷೇತ್ರದಲ್ಲಿ ಅನ್ಯಾಯವಾದವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಮಾಡಿರುವ ಎ. ಪ್ರಕರಣದ ತನಿಖೆ ನಡೆಸಿ ಎಫ್‌ಐಆರ್‌ ದಾಖಲಿಸಿ ಅಮಾನತು ಮಾಡುವಂತೆಯೂ ಹೇಳಿದ್ದೆ. ಅದರಂತೆ ತನಿಖೆ ನಡೆಸಿ ಕ್ರಮ ಜರಗಿಸಲಾಗಿದೆ. ಬಿಜೆಪಿಯೊಳಗಿನ ಸಂಘರ್ಷವನ್ನು ಕಾಂಗ್ರೆಸ್‌ ತಲೆಗೆ ಕಟ್ಟುವ ಪ್ರಯತ್ನ ಪ್ರಭಾಕರ ಭಟ್‌ ಅವರಿಗೆ ಶೋಭೆ ತರುವಂಥದ್ದಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next