ಪುತ್ತೂರು: ಸ್ನೇಹಿತನಿಗೆ ಫೋನ್ ಕರೆ ಮಾಡಿ ಬೆದರಿಕೆಯೊಡ್ಡಿರುವುದನ್ನು ವಿಚಾರಿಸಿದಾತನಿಗೆ ತಂಡವೊಂದು ಬಾರ್‌ನೊಳಗೆ ಹಲ್ಲೆ ನಡೆಸಿ, ದರೋಡೆ ಮಾಡಿರುವ ಘಟನೆ ಪುತ್ತೂರು ಮುಖ್ಯರಸ್ತೆಯಲ್ಲಿ ಸೆ. 17ರಂದು ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಹಲ್ಲೆ ನಡೆಸಿದ ನಾಲ್ವರು ಆರೋಪಿಗಳನ್ನು ಸೆ. 19ರಂದು ಬಂಧಿಸಲಾಗಿದೆ.
ದರ್ಬೆಯಲ್ಲಿರುವ ಚೋಳಮಂಡಲ ಫೈನಾನ್ಸ್‌ನಲ್ಲಿ ಲೋನ್ ರಿಕವರಿ ಕರ್ತವ್ಯ ಮಾಡುತ್ತಿರುವ ಆರ್ಯಾಪು ಗ್ರಾಮದ ವಳತ್ತಡ್ಕ ನಿವಾಸಿ ಅವಿನಾಶ್ ಹಲ್ಲೆಗೊಳಗಾದವರು. ಅವರ ಕಿಸೆಯಲ್ಲಿದ್ದ ನಗದನ್ನು ಆರೋಪಿಗಳು ದೋಚಿದ್ದರು. ಘಟನೆಯಿಂದ ಅವಿನಾಶ್ ಅವರ ಕಣ್ಣಿಗೆ ತೀವ್ರ ಗಾಯವಾಗಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಅವಿನಾಶ್ ಅವರ ಗೆಳೆಯ ಸಚಿನ್ ಅವರಿಗೆ ಪ್ರತಾಪ್ ಕರೆ ಮಾಡಿ ಬೆದರಿಕೆಯೊಡ್ಡಿದ್ದರು. ಈ ಕುರಿತು ಅವಿನಾಶ್ ಅವರು ಪ್ರತಾಪ್ ಅವರನ್ನು ವಿಚಾರಿಸಿದಾಗ ಪುತ್ತೂರು ಮಹಾಲಿಂಗೇಶ್ವರ ದೇಗುಲದ ಗದ್ದಗೆ ಬರುವಂತೆ ತಿಳಿಸಿದ್ದ. ಅದೇ ರೀತಿ ಅಲ್ಲಿ ಪ್ರತಾಪ್ ಮತ್ತು ಅಚ್ಚು ಯಾನೆ ಜಗದೀಶ್ ಅವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ಸಂಜೆ ಅವಿನಾಶ್ ಅವರು ತನ್ನ ಸ್ನೇಹಿತ ಸಚಿನ್ ಜತೆಗೆ ಬಾರ್‌ಗೆ ಹೋಗಿದ್ದು, ಮೇಲಿನ ಅಂತಸ್ತಿನಲ್ಲಿ ಕುಳಿತಿದ್ದಾಗ ಅಲ್ಲಿಗೆ ಬಂದ ಪ್ರತಾಪ್, ಅಚ್ಚು ಯಾನೆ ಜಗದೀಶ್, ಶರತ್, ಅಭಿಜಿತ್ ಅವರು ಸಚಿನ್ ಮತ್ತು ಅವಿನಾಶ್ ಅವರಿಗೆ ಹಲ್ಲೆ ನಡೆಸಿದ್ದಾರೆ.
ಅವಿನಾಶ್ ಕಿಸೆಯಲ್ಲಿದ್ದ ಲೋನ್ ರಿಕವರಿ ಹಣ 3,720 ರೂ. ಮತ್ತು ಮೊಬೈಲ್ ಅನ್ನು ಹಲ್ಲೆ ನಡೆಸಿದ ಆರೋಪಿಗಳು ದೋಚಿಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.
ಅವಿನಾಶ್ ಅವರ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಬನ್ನೂರು ನಿವಾಸಿ ಪ್ರತಾಪ್, ಅಚ್ಚು ಯಾನೆ ಜಗದೀಶ್, ಶರತ್ ಜೈನರಗುರಿ, ಅಭಿಜಿತ್‌ನನ್ನು ಸೆ. 19ರಂದು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.