Advertisement

ಹಲವರ ರಾಜಕೀಯ ಬೆಳವಣಿಗೆಗೆ ಸೋಪಾನವಾದ ಕ್ಷೇತ್ರ

12:54 PM Mar 31, 2019 | keerthan |

ಪುತ್ತೂರು: ರಾಜಕೀಯ ಕ್ಷೇತ್ರದಲ್ಲಿ ಹಲವು ಮಂದಿಯ ಬೆಳವಣಿಗೆಗೆ ತೊಟ್ಟಿಲಾದ ಕ್ಷೇತ್ರ ಪುತ್ತೂರು. ಇಲ್ಲಿಂದ ರಾಜಕೀಯ ಜೀವನ ಆರಂಭಿಸಿ ಹಂತಹಂತವಾಗಿ ಮೇಲೇರಿ ರಾಜ್ಯ, ಕೇಂದ್ರ ಸಚಿವ ಸ್ಥಾನವನ್ನು ಪಡೆದವರು, ರಾಜ್ಯದ ಮುಖ್ಯಮಂತ್ರಿ ಯಾದವರಿದ್ದಾರೆ.

Advertisement

ಜನಸಂಘದ ಕಾಲದಿಂದಲೇ ಪುತ್ತೂರು ಸಂಘ ಪರಿವಾರದ ಗಟ್ಟಿ ನೆಲೆಯಾಗಿ ಗುರುತಿಸಿಕೊಂಡಿದೆ. ಈ ಕಾರಣದಿಂದಲೋ ಏನೋ; 1978ರಲ್ಲಿ ಜನತಾ ಪಾರ್ಟಿಯಿಂದ ಉರಿಮಜಲು ರಾಮ ಭಟ್‌ ಅವರು ಗೆದ್ದ ಬಳಿಕ ಹೆಚ್ಚಿನ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. ಹಾಗೆಂದು ಕಾಂಗ್ರೆಸ್‌ ಬಲಹೀನವಾಗಿದೆ ಎಂದೇನಲ್ಲ; ಪ್ರಬಲ ಸ್ಪರ್ಧೆಯನ್ನೇ ಒಡ್ಡಿದೆ.

ವಿನಯ ಕುಮಾರ್‌ ಸೊರಕೆ ಅವರು ಕಾಂಗ್ರೆಸ್‌ ಪಕ್ಷದಿಂದ 1985 ಮತ್ತು 1989ರಲ್ಲಿ ಶಾಸಕ ರಾಗಿ ಆಯ್ಕೆಯಾದ ಬಳಿಕ 2013ರಲ್ಲಿ ಕಾಂಗ್ರೆಸ್‌ನಿಂದ ಶಕುಂತಳಾ ಟಿ. ಶೆಟ್ಟಿ ಗೆಲುವು ಸಾಧಿಸಿದ್ದಾರೆ. ಉಳಿದ ಎಲ್ಲ ಅವಧಿಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. ಪುತ್ತೂರಿನಿಂದ ರಾಜಕೀಯ ಅಸ್ತಿತ್ವವನ್ನು ಸ್ಥಾಪಿಸಿಕೊಂಡ ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಪುತ್ತೂರಿನಲ್ಲಿ ಕಾಂಗ್ರೆಸ್‌ ಶಾಸಕರಿದ್ದರೂ ಬಿಜೆಪಿ ಲೋಕಸಭಾ ಅಭ್ಯರ್ಥಿಗೆ 29,314 ಮತಗಳ ಮುನ್ನಡೆ ಲಭಿಸಿತ್ತು.

ಪುತ್ತೂರು ಕ್ಷೇತ್ರದ ಮುನ್ನಡೆ?
2008ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮಲ್ಲಿಕಾ ಪ್ರಸಾದ್‌ (46,605 ಮತಗಳು) ಅವರು ಕಾಂಗ್ರೆಸ್‌ನ ಬೊಂಡಾಲ ಜಗನ್ನಾಥ ಶೆಟ್ಟಿ (45,180) ಅವರ ವಿರುದ್ಧ 1,425 ಮತಗಳಿಂದ ಗೆಲುವು ಸಾಧಿಸಿದ್ದರು. ಬಿಜೆಪಿಯಿಂದ ಸೀಟು ಸಿಗದ ಹಿನ್ನೆಲೆಯಲ್ಲಿ ಬಂಡಾಯವಾಗಿ ಸ್ವಾಭಿಮಾನಿ ಪಕ್ಷದಿಂದ  ಸ್ಪರ್ಧಿಸಿದ ಶಕುಂತಳಾ ಟಿ. ಶೆಟ್ಟಿ ಅವರು ಸುಮಾರು 25,000
ಮತಗಳನ್ನು ಪಡೆದಿದ್ದರು.

2009ರಲ್ಲಿ ನಳಿನ್‌ ಕುಮಾರ್‌ ಕಟೀಲು ಪ್ರಥಮ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ(70,685)ಯು ಕಾಂಗ್ರೆಸ್‌ ( 52,317) ವಿರುದ್ಧ 18,368 ಮತಗಳಿಂದ ಮುನ್ನಡೆ ಸಾಧಿಸಿತ್ತು. 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶಕುಂತಳಾ ಟಿ. ಶೆಟ್ಟಿ (66,345 ಮತಗಳು) ಅವರು ಬಿಜೆಪಿಯ ಸಂಜೀವ ಮಠಂದೂರು (62,056) ವಿರುದ್ಧ 4,289 ಮತಗಳಿಂದ ಗೆಲುವು ಸಾಧಿಸಿದ್ದರು.
2014ರ ಲೋಕಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ (87,882)ಯು ಕಾಂಗ್ರೆಸ್‌ (58, 568)ನ ವಿರುದ್ಧ 29,314 ಮತಗಳಿಂದ ಮುನ್ನಡೆ ಸಾಧಿಸಿತ್ತು. 2008ರ ಚುನಾವಣೆಗಿಂತಲೂ 10,946 ಮತಗಳು ಹೆಚ್ಚುವರಿಯಾಗಿ ಪುತ್ತೂರಿನಲ್ಲಿ ಬಿಜೆಪಿಗೆ ಲಭಿಸಿದ್ದವು.

Advertisement

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸಂಜೀವ ಮಠಂದೂರು (90,073 ಮತಗಳು) ಅವರು ಕಾಂಗ್ರೆಸ್‌ನ ಶಕುಂತಳಾ ಟಿ. ಶೆಟ್ಟಿ (70,596) ವಿರುದ್ಧ 19,477 ಮತಗಳಿಂದ ಗೆಲುವು ಸಾಧಿಸಿದ್ದರು.

ಈಗಿನ ಚಿತ್ರಣ
2019ರ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದ ಪ್ರಚಾರ ಬಿರುಸು ಪಡೆದುಕೊಳ್ಳುತ್ತಿದೆ. ಬಿಜೆಪಿ ಅಭ್ಯರ್ಥಿ ನಳಿನ್‌ ನೆರೆಯ ಸುಳ್ಯ ತಾಲೂಕಿನವರಾಗಿರುವುದರಿಂದ ಮತ್ತು 2 ಬಾರಿ ಆಯ್ಕೆಯಾಗಿರುವುದರಿಂದ ಈ ಭಾಗದ ಜನರ ಜತೆ ನಿಕಟ ಸಂಪರ್ಕ ಹೆಚ್ಚು. ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಅವರದು ಕ್ಷೇತ್ರಕ್ಕೆ ಹೊಸ ಮುಖ. ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಮಾತ್ರ ಪರಿಚಯ. ಈ ಭಾಗದ ಜನರ ಸಂಪರ್ಕ ಇನ್ನಷ್ಟೇ ಆಗಬೇಕಿದೆ. ಆದರೆ ಯುವ ಅಭ್ಯರ್ಥಿಯಾಗಿರುವುದರಿಂದ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಹುರುಪು ಹೆಚ್ಚಿದೆ.

ಹಾಲಿ ಸಂಸದ ನಳಿನ್‌ ಗ್ರಾಮಾಂತರ ಭಾಗಗಳಿಗೆ ಹೆಚ್ಚಿನ ಕೊಡುಗೆ ನೀಡಿಲ್ಲ ಎಂಬ ಅಸಮಾಧಾನ ಅಲ್ಲಲ್ಲಿ ಇರುವಂತಿದೆ. ಆದರೆ ಮೋದಿ ಹವಾ ಅವರಿಗೆ ಧನಾತ್ಮಕವಾಗುವ ಸಾಧ್ಯತೆ ಇದೆ. ಇತ್ತ ಮಿಥುನ್‌ ರೈ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿರುವುದೂ ಇದೇ ಕಾರಣಕ್ಕೆ. ಎದುರಾಳಿ ಅಭ್ಯರ್ಥಿಯ ಬಗೆಗಿರುವ ಋಣಾತ್ಮಕ ಅಂಶಗಳನ್ನು ಮತಗಳನ್ನಾಗಿಸುವ ತಂತ್ರ ಕಾಂಗ್ರೆಸಿನದು ಎಂಬುದು ಜನರ ತರ್ಕ.

 ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next