Advertisement

ಪುತ್ತೂರು: ಕರಾವಳಿಯ ಭರವಸೆಯ ಡೈವರ್‌ ನಂದನ್‌ ನಾಯ್ಕ

01:01 PM Jun 21, 2024 | Team Udayavani |

ಪುತ್ತೂರು: ಕರಾವಳಿಯ ಭರವಸೆಯ ಡೈವರ್‌ ಆಗಿ ಮಿಂಚುತ್ತಿರುವ ಪುತ್ತೂರಿನ ಹದಿನೇಳರ ಹರೆಯದ ನಂದನ್‌ ನಾಯ್ಕ ಈ ಬಾರಿಯ ಕೆಎಸ್‌ಎ ರಾಜ್ಯ ಡೈವಿಂಗ್‌ ಚಾಂಪಿಯನ್‌ ಶಿಪ್‌ನಲ್ಲಿ ಭಾಗವಹಿಸಿದ್ದು ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಇಲ್ಲಿ ಗೆದ್ದರೆ ಜುಲೈ 7ರಿಂದ 11ರವರೆಗೆ ಇಂದೋ ರ್‌ ನಲ್ಲಿ ನಡೆ ಯ ಲಿ ರುವ 50ನೇ ಜೂನಿಯರ್‌ ರಾಷ್ಟ್ರೀಯ ಅಕ್ವಾಟಿಕ್‌ ಚಾಂಪಿಯನ್‌ ಶಿಪ್‌ಗೆ ಅರ್ಹತೆ ಪಡೆದುಕೊಳ್ಳುತ್ತಾರೆ.

Advertisement

ಪುತ್ತೂರಿನ ಸೈಂಟ್‌ ಫಿಲೋಮಿನಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ (ವಿಜ್ಞಾನ) ವಿದ್ಯಾರ್ಥಿ ಆಗಿರುವ ನಂದನ್‌ ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ವಾರಣಾಸಿ ಈಜು ಅಕಾಡೆಮಿ (ವಿಸ್ವಿಮ್‌) ಅನ್ನು ಪ್ರತಿನಿಧಿಸುತ್ತಿದ್ದಾರೆ.

ಎಂಟು ವರ್ಷದ ಹಿಂದಿನ ಪ್ರಯತ್ನ:
ನಂದನ್‌ ಅವರ ಈಜಿನ ಆಸಕ್ತಿಯ ಕಥೆ ಸುಮಾರು ಎಂಟು ವರ್ಷಗಳ ಹಿಂದಿನದ್ದು. ಕರ್ನಾಟಕ ಸ್ವಿಮ್ಮಿಂಗ್‌ ಅಸೋಸಿಯೇಶನ್‌ನ ಕಾರ್ಯಕಾರಿ ಸಮಿತಿ ಸದಸ್ಯೆ ಪ್ರತಿಮಾ ಹೆಗ್ಡೆ ಅವರ ಪ್ಲೇ ಸ್ಕೂಲ್‌ ನಲ್ಲಿ ವಿದ್ಯಾರ್ಥಿ ಆಗಿದ್ದ ನಂದನ್‌ ಅವರನ್ನು ಪ್ರತಿಮಾ ಅವರು
ಈಜುಕೊಳಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲೇ ನೀರಿನ ಆಸಕ್ತಿ ಮೂಡಿತ್ತು. ಅನಂತರ ಕಲಿಕೆ ಆರಂಭಗೊಂಡಿತ್ತು. ಸ್ಪರ್ಧೆಯ ನೆಲೆಯಲ್ಲಿ ನಂದನ್‌ ಐದನೇ ತರಗತಿಯಲ್ಲಿ ಅಧಿಕೃತ ತರಬೇತಿಯನ್ನು ಪ್ರಾರಂಭಿಸಿದರು.

2017 ರಲ್ಲಿ ನಾನು ಸ್ಪರ್ಧಾತ್ಮಕ ಈಜು ತರಬೇತಿಗೆ ಸೇರಿಕೊಂಡೆ. ಪೂಲ್‌ನಲ್ಲಿ ಟ್ರ್ಯಾಂಪೊಲೈನ್‌ನಿಂದ (ಜಂಪಿಂಗ್‌ ಸಾಧನ) ನಾನು ಪ್ರೇರೇಪಿತಗೊಂಡು ತರಬೇತುದಾರ ಪಾರ್ಥ ವಾರಣಾಸಿ ಅವರ ಫ್ಲಿಪ್‌ ಗಳು ನನ್ನ ಆಸಕ್ತಿಯನ್ನು ಹುಟ್ಟು ಹಾಕಿತ್ತು. ಪಾರ್ಥ
ಅವರ ಮಾರ್ಗದರ್ಶನದೊಂದಿಗೆ ನಾನು ಫ್ಲಿಪ್ಸ್‌ ಕಲಿಯಲು ಪ್ರಾರಂಭಿಸಿದೆ ಎನ್ನುತ್ತಾರೆ ನಂದನ್‌.

Advertisement

ಭರವಸೆ ಮೂಡಿಸಿದ ನಂದನ್‌:
ನಂದನ್‌ ಅವರ ಈಜು ಕೌಶಲಗಳು, ಅವರ ಹೊಸ ಚಮತ್ಕಾರಿಕ ಸಾಮರ್ಥ್ಯಗಳ ತೋರ್ಪಡಿಕೆಗೆ ಹೊಸ ಅವಕಾಶ ಕಲ್ಪಿಸಿತ್ತು. 10ನೇ ತರಗತಿಯ ವೇಳೆಯಲ್ಲಿ ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾದರು. ನಂದನ್‌ನ ಸಾಮರ್ಥ್ಯವನ್ನು ಗುರುತಿಸಿದ ಪಾರ್ಥ, ಬೆಂಗಳೂರಿನ ಕೇವೋಸ್‌ನಲ್ಲಿ (ತರಬೇತಿ ಕೇಂದ್ರ) ಚಮತ್ಕಾರಿಕ ಕೌಶಲವನ್ನು ಹೆಚ್ಚಿಸಲು ಅವಕಾಶವನ್ನು ಒದಗಿಸಿದರು. ಕೋಚ್‌ ಡೆಲ್ಸನ್‌ ಮತ್ತು ಇತರರಿಂದ ಒಂದು ತಿಂಗಳ ತರಬೇತಿಯನ್ನು ಪಡೆದು ಮತ್ತಷ್ಟು ಪರಿಣಿತಿ ಹೊಂದಿದರು.

ಡೈವಿಂಗ್‌ ಗಮನ
ಕೋಚ್‌ ಪಾರ್ಥ ವಾರಣಾಸಿ ಅವರು ತನ್ನ ಫಾರ್ಮ್ನಲ್ಲಿ ಡೈವಿಂಗ್‌ ಬ್ಲಾಕ್‌ ಅನ್ನು ಸ್ಥಾಪಿಸಿದಾಗ ನಂದನ್‌ನ ಗಮನವು ಡೈವಿಂಗ್‌ಗೆ ಬದಲಾಯಿತು. ವೃತ್ತಿಪರ ಡೈವರ್‌ ಮತ್ತು ಮಾಜಿ ರಾಷ್ಟ್ರೀಯ ಪದಕ ವಿಜೇತ ವಿಕಾಸ್‌ ಅವರ ಪ್ರೋತ್ಸಾಹದಿಂದ ನಂದನ್‌ ಅವರ ಆಸಕ್ತಿ ಮತ್ತಷ್ಟು ಹೆಚ್ಚಾಯಿತು. ಬೆಂಗಳೂರಿನ ಕೆನ್ಸಿಂಗ್ಟನ್‌ ಈಜುಕೊಳದಲ್ಲಿ ಕೋಚ್‌ ವೆಂಕಟೇಶ್‌ ಅವರಿಂದ ಹತ್ತು ದಿನಗಳ ಕಾಲ ತರಬೇತಿ ಪಡೆದರು. ಅಂದ ಹಾಗೆ ನಂದನ್‌ ಪುತ್ತೂರಿನ ಮೊದಲ ಡೈವರ್‌.

ಆರಂಭದಲ್ಲಿ ಸ್ವಯಂ ಕಲಿಕೆ
ನಂದನ್‌ ಬೆಳಗ್ಗೆ 5 ಗಂಟೆಯಿಂದ 8 ತನಕ ಅಭ್ಯಾಸ ಮಾಡಿ ಕಾಲೇಜಿಗೆ ಹೋಗುತ್ತಾರೆ. ಸಂಜೆ 5.30 ರಿಂದ 8.30 ರ ತನಕ ಮತ್ತೆ ಅಭ್ಯಾಸ, ರವಿವಾರ ವಾರಣಾಶಿ ಫಾರ್ಮ್ನಲ್ಲಿ ಡೈವಿಂಗ್‌ ಅಭ್ಯಾಸ ಮಾಡುತ್ತಾರೆ. ಕಲಿಕೆಯಲ್ಲೂ ಪ್ರತಿಭಾವಂತನಾಗಿರುವ ಇವರು
ಏರೋನಾಟಿಕಲ್‌ ಎಂಜಿನಿಯರ್‌ ಆಗುವ ಕನಸು ಹೊಂದಿದ್ದಾರೆ. ಇವರು ಯೂಟ್ಯೂಬ್‌ ನಲ್ಲಿ ಹಲವು ಜಂಪ್ಸ್‌ಗಳನ್ನು ನೋಡಿ ಸ್ವಯಂ ಆಗಿ ಅಭ್ಯಸಿಸಿದ್ದಾರೆ. ನಂದನ್‌, ರವಿ ಸಂಪತ್‌ ನಾಯ್ಕ ಮತ್ತು ಶಮಿತಾ ಆರ್‌. ನಾಯ್ಕ ಅವರ ಪುತ್ರ.

Advertisement

Udayavani is now on Telegram. Click here to join our channel and stay updated with the latest news.

Next