Advertisement

ಗುದ್ದಲಿ ಪೂಜೆಯಾಗಿ 7 ತಿಂಗಳು; ಪ್ರಾರಂಭವಾಗದ ಕಾಮಗಾರಿ

01:28 AM Mar 29, 2021 | Team Udayavani |

ಪುತ್ತೂರು: ನಗರಸಭೆ ಕಚೇರಿ ಹೊಸ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆದು 7 ತಿಂಗಳು ಕಳೆದರೂ ಕಾಮಗಾರಿ ಪ್ರಾರಂಭಗೊಳ್ಳುವ ಲಕ್ಷಣ ಕಾಣುತ್ತಿಲ್ಲ.

Advertisement

ಈ ಹಿಂದೆ ಪ.ಪಂ., ಪುರಸಭೆ ಅವಧಿಯ ಲ್ಲಿನ ಕಾರ್ಯನಿರ್ವಹಣೆಗೆ ಬಳಸಿದ ಹಳೆ ಕಟ್ಟಡ ತೆರವು ಮಾಡಿ ಆ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ 2020 ಆ.26 ರಂದು ಶಾಸಕರ ನೇತೃತ್ವದಲ್ಲಿ ಗುದ್ದಲಿ ಪೂಜೆ ನಡೆದಿತ್ತು.

ಅನುದಾನದ ಗೊಂದಲ
ಸುಮಾರು 8 ಕೋ.ರೂ.ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ನಗರೋತ್ಥಾನದ 1 ಕೋ.ರೂ. ಅನುದಾನ ಹೊರತುಪಡಿಸಿ ಉಳಿದ ಹಣವನ್ನು ಬೇರೆ ಬೇರೆ ಮೂಲ ಗಳಿಂದ ಭರಿಸಿ ಕಟ್ಟಡ ನಿರ್ಮಿಸುವ ಬಗ್ಗೆ ಪ್ರಸ್ತಾವಿಸಲಾಗಿತ್ತು. ಅನುದಾನ ಜೋಡಣೆ ಅಂತಿಮಗೊಳ್ಳುವ ಮೊದಲೇ ಕಾಮಗಾರಿಗೆ ಗುದ್ದಲಿಪೂಜೆ ನಡೆದಿತ್ತು. ಹೀಗಾಗಿ ಕಟ್ಟಡ ನಿರ್ಮಾಣ ಕಾರ್ಯವೀಗ ಗುದ್ದಲಿಪೂಜೆಗಷ್ಟೇ ಸೀಮಿತ ಎಂಬ ಮಾತು ಕೇಳಿ ಬಂದಿದೆ.

ಸಂತೆ ಕಟ್ಟಡದಲ್ಲಿ ನಗರಸಭೆ ಕಚೇರಿ
ನಗರಾಡಳಿತವು ಪ.ಪಂ. ಕಾಲದಿಂದ ಪುರಸಭೆ ಅವಧಿಯ ಕೆಲವು ವರ್ಷಗಳ ತನಕ ಮಿನಿ ವಿಧಾನಸೌಧದ ಬಳಿಯಿದ್ದ ಹಳೆ ಕಟ್ಟಡದಲ್ಲಿ ಕಾರ್ಯನಿರ್ವಹಿಸಿ 16 ವರ್ಷಗಳ ಹಿಂದೆ ಗ್ರಾಮ ಚಾವಡಿ ಸಮೀಪದ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಈಗ ಕಚೇರಿ ಕಾರ್ಯ ನಿರ್ವಹಿಸುವ ಕಟ್ಟಡದ ನೆಲ ಮಹಡಿಯಲ್ಲಿ ಸಂತೆ ವ್ಯವಹಾರಕ್ಕೆಂದು ವ್ಯಾಪಾರಿ ವಿಭಾಗಗಳನ್ನು ನಿರ್ಮಿಸಲಾಗಿತ್ತು. ಮೇಲಿನ ಮಹಡಿಯಲ್ಲಿ ಆಡಳಿತ ಕಚೇರಿ, ಕಾರ್ಯಾಲಯ ನಿರ್ಮಿಸಲಾಗಿತ್ತು. ಕಟ್ಟಡ ಪೂರ್ಣಗೊಂಡ ಬಳಿಕ ಸಂತೆಗೆ ಮೀಸಲಿಟ್ಟ ಜಾಗವನ್ನು ನಗರಸಭೆ ಆವರಿಸಿಕೊಂಡ ಕಾರಣ ಸಂತೆ ವ್ಯವಹಾರ ಕಿಲ್ಲೆ ಮೈದಾನದಲ್ಲೇ ಮುಂದುವರಿದಿತ್ತು. ಎರಡು ವರ್ಷಗಳ ಹಿಂದೆ ಕಿಲ್ಲೆ ಮೈದಾನದ ಪುತ್ತೂರು ಸೋಮವಾರದ ಸಂತೆಯನ್ನು ಎಪಿಎಂಸಿಗೆ ಸ್ಥಳಾಂತರ ಮಾಡಲಾಗಿತ್ತು. ಅದಕ್ಕೆ ಆಕ್ಷೇಪ ವ್ಯಕ್ತವಾದ ಕಾರಣ ಮರಳಿ ಕಿಲ್ಲೆ ಮೈದಾನಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ಇದೇ ಸಂದರ್ಭ ಆಗಿನ ನಗರಸಭೆ ಆಡಳಿತವು ಸಂತೆ ವ್ಯಾಪಾರಕ್ಕೆ ಪ್ರತ್ಯೇಕ ಸಂತೆಕಟ್ಟೆ ನಿರ್ಮಿಸುವ ಭರವಸೆ ನೀಡಿ ಹಿಂದಿನ ಪುರಸಭೆ ಕಾರ್ಯನಿರ್ವಹಿಸುತ್ತಿದ್ದ ಜಾಗದಲ್ಲಿ ಸಂತೆ ಕಟ್ಟೆ ನಿರ್ಮಿಸಲು 1 ಕೋ. ರೂ. ಅನುದಾನವನ್ನೂ ನಿಗದಿಪಡಿಸಿತ್ತು. ಈಗ ಅದೇ ಜಾಗದಲ್ಲಿ ಸಂತೆ ಕಟ್ಟೆ ಕೈಬಿಟ್ಟು ನಗರಸಭೆ ನೂತನ ಕಟ್ಟಡ ನಿರ್ಮಾಣಕ್ಕೆ ಯೋಜನೆ ಹಾಕಿ ಕೊಳ್ಳಲಾಗಿದೆ. ಈಗಿರುವ ನಗರಸಭೆ ಕಟ್ಟಡವನ್ನು ವಾಣಿಜ್ಯ ಸಂಕೀರ್ಣ, ದಿನವಹಿ ಮಾರುಕಟ್ಟೆ ಉದ್ದೇಶಕ್ಕೆ ಬಳಸುವ ಸಾಧ್ಯತೆ ಬಗ್ಗೆ ಪ್ರಸ್ತಾವಿಸಲಾಗಿತ್ತು.

ತಾಂತ್ರಿಕ ಒಪ್ಪಿಗೆಯು ಸಿಕ್ಕಿಲ್ಲ
ಕಳೆದ ತಿಂಗಳು ಮಂಡಿಸಿದ ನಗರಸಭೆಯ 2021-22 ನೇ ಸಾಲಿನ ಬಜೆಟ್‌ನಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ 7 ಕೋ.ರೂ.ಮೊತ್ತವನ್ನು ಕಾದಿರಿಸಲಾಗಿದೆ. ಜತೆಗೆ ಶಾಸಕರು ವಿಶೇಷ ಅನುದಾನಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇವೆಲ್ಲ ಪ್ರಕ್ರಿಯೆ ಪೂರ್ಣಗೊಂಡು ಅನುದಾನ ಮಂಜೂರುಗೊಳ್ಳಬೇಕಿದೆ. ಪ್ರಸ್ತುತ ನಗರಾಡಳಿತವು ಹೊಸ ಕಟ್ಟಡ ನಿರ್ಮಾಣಕ್ಕೆ ತಾಂತ್ರಿಕ ಒಪ್ಪಿಗೆಗೆ ಜಿಲ್ಲಾಧಿಕಾರಿಗೆ ಕಳುಹಿಸಿದ್ದು ಅಲ್ಲಿಂದ ಸರಕಾರಕ್ಕೆ ಹೋಗಿ ಬಳಿಕ ಅನುಮೋದನೆ ಸಿಗಬೇಕಿದೆ. ಹೀಗಾಗಿ ಸದ್ಯ ಹೊಸ ಕಟ್ಟಡದ ಕಾಮಗಾರಿ ಪ್ರಾರಂಭಗೊಳ್ಳುವ ಸಾಧ್ಯತೆ ಕೂಡ ಇಲ್ಲ ಅನ್ನುವುದು ಸ್ಪಷ್ಟ.

Advertisement
Advertisement

Udayavani is now on Telegram. Click here to join our channel and stay updated with the latest news.

Next