Advertisement

Puttur: ಕಂದಕಕ್ಕೆ ಉರುಳಿದ ಕಾರು:ಜೀವ ಉಳಿಸಿಕೊಂಡ ಐವರು

11:40 PM Jan 02, 2025 | Team Udayavani |

ಪುತ್ತೂರು: ಚಾಲಕ ನಿದ್ದೆ ಮಂಪರಿಗೆ ಒಳಗಾದ ಕಾರಣ ಕಾರು ನಿಯಂತ್ರಣ ತಪ್ಪಿ ರಸ್ತೆ ಅಂಚಿನ ಕಂದಕಕ್ಕೆ ಉರುಳಿ ಬಿದ್ದಿದ್ದು, ಅದರಲ್ಲಿದ್ದ ಬಾಲಕನೋರ್ವ ಸಮಯಪ್ರಜ್ಞೆ ಮೆರೆದು ಸ್ಥಳೀಯರ ಸಹಾಯದಿಂದ ಇತರರನ್ನು ರಕ್ಷಿಸಿದ ಘಟನೆ ಉಪ್ಪಿನಂಗಡಿ ಹೆದ್ದಾರಿಯ ಸೇಡಿಯಾಪು ಸಮೀಪದ ಕಾಪು ಎಂಬಲ್ಲಿ ಗುರುವಾರ ಬೆಳಗ್ಗೆ 5.45ರಿಂದ 6 ಗಂಟೆ ಸುಮಾರಿಗೆ ಸಂಭವಿಸಿದೆ.

Advertisement

ಮುಂಡೂರಿನಲ್ಲಿ ನಡೆದಿದ್ದ ಒತ್ತೆಕೋಲದಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿದಾಗ ಅಪಘಾತ ಸಂಭವಿಸಿದೆ. ಕಾರು ಪುತ್ತೂರಿನಿಂದ ಉಪ್ಪಿನಂಗಡಿ ಕಡೆಗೆ ಸಾಗುತ್ತಿದ್ದಾಗ ಸೇಡಿಯಾಪು ಜಂಕ್ಷನ್‌ನಿಂದ 250 ಮೀ. ದೂರದ ಕಾವು ಎಂಬಲ್ಲಿ ಎಡ ಬದಿಗೆ ಚಲಿಸಿ ತೋಟದ ನೀರು ಹರಿಯುವ ಕಾಲುವೆಗೆ ಬಿದ್ದಿತು. ಕಾರು ಕಾಲುವೆ ಒಳಗೆ ಸಿಲುಕಿದ್ದು, ಚಾಲಕನ ಬದಿಯ ಬಾಗಿಲು ಮೇಲ್ಮುಖವಾಗಿತ್ತು. ಮತ್ತೂಂದು ಬದಿ ಮಣ್ಣಿನಡಿಗೆ ಬಿದ್ದಿತ್ತು. ಬೆಳ್ತಂಗಡಿ ತಾಲೂಕಿನ ಉಜಿರೆಯ ಪಾರ ನಿವಾಸಿ ಚರಣ್‌ ಅವರು ಕಾರನ್ನು ಚಲಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಕಾರಿನಲ್ಲಿ ಚರಣ್‌ ಅವರ ತಂದೆ, ಬಾವ ಹಾಗೂ ಇಬ್ಬರು ಮಕ್ಕಳಿದ್ದರು.
ಕಾರು 10 ಅಡಿ ಆಳಕ್ಕೆ ಬಿದ್ದ ಕೂಡಲೇ ಚರಣ್‌ನ ಅಕ್ಕನ ಮಗ, 5ನೇ ತರಗತಿ ವಿದ್ಯಾರ್ಥಿ ವನೀಶ್‌ ಕಷ್ಟಪಟ್ಟು ಕಾರಿನ ಬಾಗಿಲು ತೆಗೆದು ಹೊರ ಬಂದ. ಉಳಿದವರು ಹೊರ ಬರಲು ಪ್ರಯಾಸ ಪಟ್ಟರೂ ಸಾಧ್ಯವಾಗಲಿಲ್ಲ. ಈತನೂ ಬಾಗಿಲು ತೆಗೆಯಲು ಪ್ರಯತ್ನಿಸಿ ವಿಫ‌ಲನಾದ. ಬಳಿಕ ಕೂಡಲೇ ಕಂದಕದಿಂದ ಮೇಲೆ ಬಂದು ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನವನ್ನು ನಿಲ್ಲಿಸಿ ಅವರ ಸಹಾಯಕ್ಕೆ ಕರೆದ. ಇವರ ಸಹಾಯದಿಂದ ಎಲ್ಲರೂ ಪ್ರಾಣಾಪಾಯ ದಿಂದ ಪಾರಾಗಿದ್ದಾರೆ. ಐವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next