Advertisement
ಮನೀಶ್ ಕುಲಾಲ್ ಅವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿರುವುದನ್ನು ಗಮನಿಸಿ ಶಿಸ್ತು ಕ್ರಮದ ಅನುಸಾರವಾಗಿ ತತ್‍ಕ್ಷಣ ಜಾರಿಗೆ ಬರುವಂತೆ ಜವಾಬ್ದಾರಿಯಿಂದ ವಜಾಗೊಳಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಈ ನಡೆಯೀಗ ಮತ್ತೆ ಚರ್ಚೆಗೆ ಈಡು ಮಾಡಿದೆ.
ಪುತ್ತೂರಿಗೆ ಫೆ. 11 ರಂದು ಆಗಮಿಸಿದ ಅಮಿತ್ ಶಾ ಸ್ವಾಗತ ಕೋರಿ ಅಳವಡಿಸಿದ ಫ್ಲೆಕ್ಸ್ ಸಂಬಂಧಿತವಾಗಿ ಶಾಸಕರು ಮಳೆಗಾಲದಲ್ಲಿ ಅಣಬೆ ಹುಟ್ಟುವುದು ಸಹಜ ಎಂಬ ಹೇಳಿಕೆ ನೀಡಿದ್ದರು. ಇದು ಅರುಣ್ ಕುಮಾರ್ ಪುತ್ತಿಲ ಅವರನ್ನೇ ಗುರಿಯಾಗಿಸಿ ನೀಡಿದ ಹೇಳಿಕೆ ಎಂಬ ಪುತ್ತಿಲ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಚಾರ ಪುತ್ತಿಲ ಬೆಂಬಲಿಗರು ಮತ್ತು ಪಕ್ಷದ ಮುಖಂಡರ ನಡುವಿನ ತಿಕ್ಕಾಟಕ್ಕೆ ಕಾರಣವಾಗಿತ್ತು. ನಗರದಲ್ಲಿ ಅಮಿತ್ ಶಾ ಅವರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ವಿತರಣೆ ಜಾಥಾದಲ್ಲಿ ಈ ವಿವಾದ ಸ್ಫೋಟಗೊಂಡು ಉಭಯ ಬಣಗಳ ನಡುವೆ ಪರಸ್ಪರ ವಾಗ್ವಾದಕ್ಕೆ ಕಾರಣವಾಗಿತ್ತು. ಇದೇ ವಾಗ್ವಾದವೇ ಮನೀಶ್ ಅವರ ವಜಾಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಜಾಲ ತಾಣದಲ್ಲಿ ಮತ್ತೆ ಆಕ್ರೋಶ
ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲರಿಗೆ ನೀಡಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಪುತ್ತಿಲ ಫಾರ್ ಪುತ್ತೂರು ಅಭಿಯಾನದ ಮುಂಚೂಣಿಯಲ್ಲಿ ಮನೀಶ್ ಕುಲಾಲ್ ಗುರುತಿಸಿಕೊಂಡಿದ್ದರು. ವಾಟ್ಸ್ ಆ್ಯಪ್ ಗ್ರೂಪ್‍ಗಳಲ್ಲಿ, ಟ್ವಿಟರ್ ಹಾಗೂ ಫೇಸ್ ಬುಕ್ ನಲ್ಲಿ ಪುತ್ತಿಲ ಪರವಾಗಿ ಕಳೆದೊಂದು ತಿಂಗಳಿನಿಂದ ನಿರಂತರವಾಗಿ ಅಭಿಯಾನ ನಡೆಸಲಾಗುತ್ತಿದೆ. ತಿಂಗಳ ಹಿಂದೆ ಟ್ವಿಟರ್ ನಲ್ಲಿ ಪುತ್ತಿಲ ಫಾರ್ ಪುತ್ತೂರು ಅಭಿಯಾನ ನಡೆಸಿ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರ ಗಮನ ಸೆಳೆಯುವ ಪ್ರಯತ್ನ ನಡೆಸಲಾಗಿತ್ತು. ಇದೀಗ ಮನೀಶ್ ಅವರ ವಜಾಕ್ಕೆ ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲಿ ಪುತ್ತಿಲ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತನ್ನನ್ನು ವಜಾಗೊಳಿಸಿದರೂ ತಾನು ಕೊನೆಯವರೆಗೂ ಬಿಜೆಪಿ ಕಾರ್ಯಕರ್ತನಾಗಿಯೇ ಇರುತ್ತೇನೆ ಎಂದು ಮನೀಶ್ ಪ್ರತಿಕ್ರಿಯಿಸಿದ್ದಾರೆ.