Advertisement

Puttur: ವಿಹಿಂಪ ಜಿಲ್ಲಾ ಕಾರ್ಯಾಲಯದ ಭೂಮಿ‌‌ ಪೂಜೆ; ಅರುಣ್ ಪುತ್ತಿಲ ಆಗಮನಕ್ಕೆ ವಿರೋಧ

12:31 PM Oct 23, 2024 | Team Udayavani |

ಪುತ್ತೂರು: ವಿಶ್ವಹಿಂದೂ ಪರಿಷತ್ʼನ ನೂತನ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಬಿಜೆಪಿ‌ ಮುಖಂಡ ಅರುಣ್ ಪುತ್ತಿಲ ಅವರು‌ ಆಗಮಿಸಿದ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಯ‌ ಕೆಲ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಸಂದರ್ಭದ ಉಭಯ ತಂಡಗಳ‌ ನಡುವೆ ಮಾತಿನ ಸಂಘರ್ಷ ನಡೆದಿದೆ.

Advertisement

ಪುತ್ತೂರಿನ ಎಸ್ ಡಿಸಿಸಿ ಬ್ಯಾಂಕ್ ಮುಂಭಾಗದ ಈ ಹಿಂದಿನ ವಿಶ್ವ ಹಿಂದೂ ಪರಿಷದ್ ಕಾರ್ಯಾಲಯವಿದ್ದ ಸ್ಥಳದಲ್ಲಿ ಅ.23 ರಂದು ವಿಶ್ವ ಹಿಂದೂ ಪರಿಷತ್ʼನ ನೂತನ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆಯನ್ನು ಕುಕ್ಕೆ ಸುಬ್ರಹ್ಮಣ್ಯದ ನರಸಿಂಹಸ್ವಾಮಿ ಸಂಪುಟ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯರ ಉಪಸ್ಥಿತಿಯಲ್ಲಿ ಆಯೋಜಿಸಲಾಗಿತ್ತು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ವಿರುದ್ದ ಬಂಡಾಯದ ಬಾವುಟ ಹಾರಿಸಿದ ಅರುಣ್ ಕುಮಾರ್ ಪುತ್ತಿಲ ಹಾಗೂ ಮೂವರು ಬೆಂಬಲಿಗರು ಜತೆಗೂಡಿ ಈ ಸಮಾರಂಭಕ್ಕೆ ಅಗಮಿಸಿದ್ದಾರೆ.

ಇದೇ ವೇಳೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಮತ್ತೂ ಹಿಂದೂ ಜಾಗರಣೆ ವೇದಿಕೆಯ ಮುಂಚೂಣಿಯಲ್ಲಿರುವ ಕೆಲ ಕಾರ್ಯಕರ್ತರು ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿ ತನ್ನ ಕಾರಿನಿಂದ ಇಳಿಯುತ್ತಿದ್ದ ಪುತ್ತಿಲರನ್ನು ತಡೆದಿದ್ದಾರೆ.

ಪುತ್ತೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ ಪುತ್ತಿಲ ನೆರವಿಗೆ ಧಾವಿಸಿದ್ದು, ಪುತ್ತಿಲರನ್ನು ತಡೆಯಲು ಯತ್ನಿಸುತ್ತಿದ್ದ ಕಾರ್ಯಕರ್ತರ ಜತೆ ವಾಗ್ವಾದ ನಡೆಸಿದ್ದಾರೆ. ಪುತ್ತಿಲ‌ ಆಗಮನವನ್ನು ವಿರೋಧಿಸಿದ ತಂಡದಲ್ಲಿ ಹಿಂದೂ ಸಂಘಟನೆಗಳ ಮುಖಂಡರಾದ ದಿನೇಶ್ ಪಂಜಿಗ, ಶ್ರೀಧರ್ ತೆಂಕಿಲ , ಜಯಂತ್ ಬಲ್ನಾಡು, ಜಿತೇಶ್ ಬಲ್ನಾಡು ಮೊದಲಾದವರು‌ ಇದ್ದರು ಎನ್ನಲಾಗಿದೆ.

Advertisement

ಈ ವೇಳೆ ವಿಶ್ವ ಹಿಂದೂ ಪರಿಷತ್ ನ ಹಿರಿಯ ಮುಖಂಡ ಯು ಪೂವಪ್ಪ ಅವರು ಸ್ಥಳಕ್ಕೆ ಆಗಮಿಸಿ‌ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಪುತ್ತಿಲ ಅವರನ್ನು ಸಭಾಂಗಣಕ್ಕೆ‌ ಕರೆದೊಯ್ಯಲಾಯಿತು. ಪುತ್ತೂರು ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಿಗಿ ಬಂದೋಬಸ್ತು ಏರ್ಪಡಿಸಿದ್ದಾರೆ. ಅರುಣ್ ಪುತ್ತಿಲ ಅವರ‌ ಕೆಲ ಹೊತ್ತು ಸಭೆಯಲ್ಲಿ ಉಪಸ್ಥಿತರಿದ್ದು ಬಳಿಕ ಅಲ್ಲಿಂದ ನಿರ್ಗಮಿಸಿದರು ಎನ್ನುವ ಮಾಹಿತಿ ಲಭಿಸಿದೆ.

ಕಳೆದ ಚುನಾವಣೆಯ ಸಂದರ್ಭದಲ್ಲಿ ಸಂಘ ಪರಿವಾರದ ಕೆಲ ಕಾರ್ಯಕರ್ತರು ಹಾಗೂ ಪುತ್ತಿಲ ಪರಿವಾರದ ನಡುವೆ ಏರ್ಪಟ್ಟಿದ್ದ ಸಂಘರ್ಷದ ಮುಂದುವರಿದ ಭಾಗ‌ ಇದಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next