Advertisement

ಬಯಸಿದನ್ನು ಭಕ್ತರಿಂದ ಪಡೆಯುವ ಉಳ್ಳಾಲ್ತಿ

11:35 AM May 01, 2019 | Naveen |

ನಗರ: ಪುತ್ತೂರು ಸೀಮೆಯ ಕಾರಣೀಕ ದೈವ ಬಲ್ನಾಡು ಉಳ್ಳಾಲ್ತಿ ಅಮ್ಮ ಮತ್ತೂಮ್ಮೆ ತಮ್ಮ ಕಾರಣೀಕವನ್ನು ತೋರಿಸಿದ್ದಾರೆ. ಬಯಸಿದನ್ನು ಭಕ್ತರಿಂದ ಪಡೆಯುವ ಉಳ್ಳಾಲ್ತಿಯನ್ನು ಈ ಬಾರಿಯ ನೇಮದಲ್ಲಿ ಭಕ್ತರು ಕಣ್ಣಾರೆ ಕಂಡಿರುವುದು ವಿಶೇಷ.

Advertisement

ವರ್ಷಂಪ್ರತಿಯಂತೆ ಉಳ್ಳಾಳ್ತಿ ಅಮ್ಮನ ನೇಮ ನಡೆಯುತ್ತಿತ್ತು. ಆಡಳಿತ ಸಮಿತಿಯವರು, ಅರ್ಚಕರು, ಪಾರಂಪರಿಕ ನೌಕರರು, ಊರ- ಪರವೂರ ಭಕ್ತರು ಕಿಕ್ಕಿರಿದು ಸೇರಿದ್ದರು. ಭಕ್ತರು ಮಲ್ಲಿಗೆ ಚೆಂಡು, ಕುಂಕುಮ, ಎಳನೀರು, ಹರಕೆ ಸೀರೆಗಳನ್ನು ಸರದಿಯಲ್ಲಿ ನಿಂತು ಅರ್ಪಿಸುತ್ತಿದ್ದರು. ಈ ಮಧ್ಯೆ ಭಕ್ತರೊಬ್ಬರು ಬೆಳ್ಳಿ ಲೇಪಿತ ಅತ್ಯಾಕರ್ಷಕ ಹರಿವಾಣದಲ್ಲಿ ಮಲ್ಲಿಗೆ ಹೂವಿನ ಅಟ್ಟೆಯೊಂದಿಗೆ ದೈವದೆದುರು ನಿಂತರು.

ಅವರ ಕಾಣಿಕೆ ಸ್ವೀಕರಿಸಿದ ಉಳ್ಳಾಳ್ತಿಯಮ್ಮ ತಮ್ಮ ನುಡಿಯಲ್ಲಿ, ‘ಕೊಟ್ಟದ್ದು ಸ್ವೀಕರಿಸಿದ್ದೇನೆ. ಹರಿವಾಣವನ್ನು ಭಂಡಾರಕ್ಕೆ ಅರ್ಪಿಸಬೇಕು’ ಎಂದು ಅನುವು ನೀಡಿದಾಗ ಹರಿವಾಣದಲ್ಲಿ ಹೂವು ತಂದ ಭಕ್ತರಿಗೂ ಗ್ರಹಿಸದೇ ನಡೆದ ಘಟನೆಯಿಂದ ಧನ್ಯತಾಭಾವ ಮೂಡಿಬಂತು. ಹರಿವಾಣವನ್ನು ಭಕ್ತಿಯಿಂದಲೇ ಭಂಡಾರಕ್ಕೆ ಸಮರ್ಪಿಸಿ ಆನಂದದಿಂದಲೇ ಸಂತುಷ್ಟರಾಗಿ ದೈವಸ್ಥಾನದಿಂದ ತೆರಳಿದರು.

ಆ ಭಕ್ತರ ಕುರಿತು ವಿಚಾರಿಸಿದಾಗ ಅವರು ಕಾರಿಂಜ ಕ್ಷೇತ್ರದ ಅರ್ಚಕರು, ವೈದಿಕರು, ಜ್ಯೋತಿಷ್ಯರೂ ಆಗಿರುವ ಬಾಲಕೃಷ್ಣ ಆಚಾರ್ಯರು ಎಂದು ತಿಳಿದು ಬಂತು. ಬಲ್ನಾಡಿನಲ್ಲಿ ಪೂರ್ವ ಕಾಲದಿಂದಲೂ ಅರ್ಚಕರಾಗಿರುವ ನೆಲ್ಲಿತ್ತಾಯ ಮನೆತನದವರು ಈ ಹರಿವಾಣವನ್ನು ಶ್ರೀ ದಂಡನಾಯಕ ಗುಡಿಯಲ್ಲಿ ಇರಿಸಿದರು.

ಪಡೆದೇ ತೀರುವ ಅಮ್ಮ
ನೂರು ವರ್ಷಗಳ ಹಿಂದೆ ತನಗಿಷ್ಟವಾದ ಬಂಗಾರದ ಮಲ್ಲಿಗೆ ಮುಗಳನ್ನು ಸ್ವೀಕರಿಸಿ ವರ್ಷಂಪ್ರತಿ ನೇಮ ನಡೆಯುವ ವೇಳೆ ಮೊಗ್ಗಿನ ಜಡೆ ಮದುವಣಗಿತ್ತಿಯ ಶೃಂಗಾರದಿಂದ ಕಲಶ ಹಿಡಿದು ಗಾಂಭೀರ್ಯದ ಹೆಜ್ಜೆಯನ್ನಿಕ್ಕುತ್ತಾ ಸಂಪ್ರದಾಯದಂತೆ ಸುತ್ತು ಬಲಿ ಬರುತ್ತಾ ಭಕ್ತರಿಗೆ ಅಭಯ ನೀಡುವ ಉಳ್ಳಾಳ್ತಿಯಮ್ಮ, ತಾನು ಮೆಚ್ಚಿದ್ದನ್ನು ಪಡೆದೇ ತೀರುವ ಕಾರ್ಣಿಕದ ಘಟನೆಗೆ ಈ ವರ್ಷ ಭಕ್ತರು ಸಾಕ್ಷಿಯಾದರು ಎಂದು ದೇವಾಲಯಗಳ ಅಧ್ಯಯನಕಾರ ಪಿ.ಜಿ. ಚಂದ್ರಶೇಖರ್‌ ರಾವ್‌ ಹೇಳಿದ್ದಾರೆ.

Advertisement

ಸೌಕರ್ಯದ ಬಲ್ನಾಡು
ಪುತ್ತೂರು ಶ್ರೀ ಮಹಾಲಿಂಗೇಶ್ವರ ಸ್ವಾಮಿಗೆ ನೂತನ ದೇಗುಲ ನಿರ್ಮಾಣಗೊಂಡ ಮರುವರ್ಷದಲ್ಲಿ ಬಲನಾಡಿನಲ್ಲೂ ನೂತನ ದೈವಸ್ಥಾನ ನಿರ್ಮಾಣಗೊಂಡಿತು. ಈ ಬಾರಿ ಸ್ಥಳಾವರಣ ಗೊಡೆ, ಅನ್ನಛತ್ರ ನಿರ್ಮಾಣ ಮುಂತಾದ ಕಾರ್ಯಗಳು ನಡೆದಿವೆ. ನೇಮದಲ್ಲಿ ನೆರೆದ ಭಕ್ತರಿಗೆ ನೂಕುನುಗ್ಗಲು ತಪ್ಪಿಸಲು ಅಂಗಣದೊಳಗೆ ವಿವಿಧೆಡೆ ಪ್ರಸಾದ ವಿತರಣೆ, ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಕ್ಲಪ್ತ ಸಮಯದಲ್ಲಿ ಪ್ರಸಾದ ಭೋಜನ ಸುವ್ಯವಸ್ಥೆಯೊಂದಿಗೆ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆದು ಕ್ಷೇತ್ರದ ಹಿರಿಮೆ ಹತ್ತೂರಿಗೆ ಪಸರಿಸುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next