Advertisement

ಎಪಿಎಂಸಿ ರೈಲ್ವೇ ಕ್ರಾಸಿಂಗ್‌ ಸಮಸ್ಯೆಗೆ ಶೀಘ್ರ ಮುಕ್ತಿ

06:35 AM Feb 22, 2019 | |

ಪುತ್ತೂರು : ಇಲ್ಲಿನ ಎಪಿಎಂಸಿ ರಸ್ತೆಯ ರೈಲ್ವೇ ಕ್ರಾಸಿಂಗ್‌ ಸಮಸ್ಯೆ ಅರಿವಿದೆ. ಆದಷ್ಟು ಶೀಘ್ರ ಇದರ ಕಾಮಗಾರಿ ನಡೆಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ನೈಋತ್ಯ ವಿಭಾಗೀಯ ರೈಲ್ವೇ ಮ್ಯಾನೇಜರ್‌ ಅಪರ್ಣಾ ಗರ್ಗ್‌ ಹೇಳಿದರು. ಗುರುವಾರ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿದ ಅವರು, ಮಾಧ್ಯಮದೊಂದಿಗೆ ಮಾತನಾಡಿದರು.

Advertisement

ಪುತ್ತೂರು ಎಪಿಎಂಸಿ ರೈಲ್ವೇ ಕ್ರಾಸಿಂಗ್‌ ತಪ್ಪಿಸಿ, ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬ ಬೇಡಿಕೆ ಇದೆ. ಸಮಸ್ಯೆಯ ಪರಿಶೀಲನೆಗೆ ಸ್ಥಳಕ್ಕೆ ಆಗಮಿಸಿದ್ದೇನೆ. ಒಂದು ವಾರದೊಳಗೆ ಇದರ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಬಳಿಕ ನೈಋತ್ಯ ರೈಲ್ವೇಯ ಕಾಮಗಾರಿ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಲಿದ್ದಾರೆ. ಇಲ್ಲಿಗೆ ಮೇಲ್ಸೇತುವೆ ಅಥವಾ ಕೆಳಸೇತುವೆ ಬೇಕೋ ಎಂಬ ಬಗ್ಗೆ ಅವರು ನಿರ್ಧರಿಸಲಿದ್ದಾರೆ ಎಂದರು.

ಒಟ್ಟು 1 ಕೋಟಿ ರೂ. ಒಳಗಿನ ಯೋಜನೆಯಾಗಿದ್ದರೆ ನೇರವಾಗಿ ರೈಲ್ವೇ ಇಲಾಖೆಯೇ ಕಾಮಗಾರಿ ನಡೆಸುತ್ತಿತ್ತು. ಆದರೆ ಇದು ದೊಡ್ಡ ಮಟ್ಟದ್ದು. ಕೇಂದ್ರ ಹಾಗೂ ರಾಜ್ಯ ಸರಕಾರದ 50:50 ಸಹಯೋಗದಲ್ಲಿ ಕಾಮಗಾರಿ ಹಮ್ಮಿಕೊಳ್ಳಬೇಕಿದೆ. ರೈಲ್ವೇ ನಿಲ್ದಾಣ ಸಂಪರ್ಕ ರಸ್ತೆಯ ಕಾಮಗಾರಿಯನ್ನು ಇಲಾಖೆಯೇ ಮಾಡಲಿದೆ. ಇದರ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ ಎಂದರು.

ಸೇತುವೆ ಅಗಲಕ್ಕೆ ಠೇವಣಿ
ವಿವೇಕಾನಂದ ಕಾಲೇಜು ರಸ್ತೆಯ ರೈಲ್ವೇ ಮೇಲ್ಸೇತುವೆ ವಿಸ್ತರಣೆಯ ಪ್ರಸ್ತಾವನೆಯನ್ನು 2018ರ ಆಗಸ್ಟ್‌ 8ರಂದೇ ನೀಡಲಾಗಿದೆ. ಕಾಮಗಾರಿಗೆ 5.97 ಕೋಟಿ ರೂ. ಅಗತ್ಯ ಇದೆ. ರಾಜ್ಯ ಸರಕಾರ ಈ ಮೊತ್ತವನ್ನು ಠೇವಣಿ ಇಟ್ಟರೆ, ಕಾಮಗಾರಿಯನ್ನು ರೈಲ್ವೇ ಇಲಾಖೆ ನಿರ್ವಹಿಸಲಿದೆ ಎಂದರು.

ರೈಲ್ವೇ ಫ್ಲಾಟ್‌ಫಾರಂನಲ್ಲಿ ಎಪಿಎಂಸಿ ರೈಲ್ವೇ ಕ್ರಾಸಿಂಗ್‌ಗೆ ಸಾಗುತ್ತಿದ್ದ ಅಧಿಕಾರಿಗಳು ಅರ್ಧದಿಂದಲೇ ವಾಪಾಸಾದರು. ಇದರ ಬಗ್ಗೆ ಪ್ರಶ್ನಿಸಿದಾಗ, ನಾವು ಸ್ಥಳದ ಸಮಸ್ಯೆಯನ್ನು ಅರಿತಿದ್ದೇವೆ. ಮುಂದಿನ ಕಾಮಗಾರಿಗಳ ಬಗ್ಗೆ ನೈಋತ್ಯ ರೈಲ್ವೇಯ ಕನ್‌ಸ್ಟ್ರಕ್ಷನ್‌ ವಿಭಾಗದವರು ಭೇಟಿ ನೀಡಿ, ವಿವರ ನೀಡಬೇಕು ಎಂದರು. ಬಳಿಕ ರೈಲ್ವೇ ನಿಲ್ದಾಣದ ಸವಲತ್ತನ್ನು ಪರಿಶೀಲಿಸಿ, ಲಕ್ಷ್ಮೀದೇವಿ ಬೆಟ್ಟದ ರಸ್ತೆಯನ್ನು ವೀಕ್ಷಿಸಿದರು.

Advertisement

ವಿಭಾಗೀಯ ಎಂಜಿನಿಯರ್‌ ರವೀಂದ್ರ ಬಿರಾದರ್‌, ಎಡಿಇಎನ್‌ ಕೃತ್ಯಾನಂದ, ಹಿರಿಯ ಕಮರ್ಷಿಯಲ್‌ ಮ್ಯಾನೇಜರ್‌ ಯತೀಶ್‌ ಕುಮಾರ್‌, ಪುತ್ತೂರು ಸೆಕ್ಷನ್‌ ಎಂಜಿನಿಯರ್‌ ಕೆ.ಪಿ. ನಾಯ್ಡು, ಎಪಿಎಂಸಿ ಅಧ್ಯಕ್ಷ ದಿನೇಶ್‌ ಮೆದು, ಉಪಾಧ್ಯಕ್ಷ ಮಂಜುನಾಥ್‌ ಎನ್‌. ಎಸ್‌., ರೈಲು ಬಳಕೆದಾರರ ಹಿತರಕ್ಷಣಾ ವೇದಿಕೆ ಸಂಚಾಲಕ ಸುದರ್ಶನ್‌ ಮುರ ಉಪಸ್ಥಿತರಿದ್ದರು.

ರೈಲು ಸೇವೆ ವಿಸ್ತರಿಸಿ
ಪುತ್ತೂರು – ಮಂಗಳೂರು ನಡುವೆ ಓಡಾಡುವ ಪ್ರಯಾಣಿಕ ರೈಲನ್ನು ಸುಬ್ರಹ್ಮಣ್ಯಕ್ಕೂ ವಿಸ್ತರಿಸುವಂತೆ ಸುದರ್ಶನ್‌ ಮನವಿ ಮಾಡಿಕೊಂಡರು. ಬೆಳಗ್ಗೆ 5.45ಕ್ಕೆ ಮಂಗಳೂರಿನಿಂದ ಹೊರಡುವ ರೈಲು, ಪುತ್ತೂರಿನಿಂದ ಸುಬ್ರಹ್ಮಣ್ಯಕ್ಕೆ ತೆರಳಿ ವಾಪಾಸಾದರೆ, 9.30ರ ಸುಮಾರಿಗೆ ಮಂಗಳೂರಿಗೆ ತಲುಪಬಹುದು. ಎಂಜಿನ್‌ ಸಮಸ್ಯೆ ಇರುವುದರಿಂದ ಸ್ವಲ್ಪ ತೊಡಕಾಗಿದೆ. ಇದನ್ನು ಪರಿಹರಿಸಿದರೆ ಎಪಿಎಂಸಿಗೆ ಆಗಮಿಸುವ ರೈತರಿಗೆ, ಕೋರ್ಟ್‌ – ಕಚೇರಿಗೆ ಆಗಮಿಸುವ ಜನರಿಗೆ ಇದರಿಂದ ಪ್ರಯೋಜನ ಆಗಲಿದೆ ಎಂದು ಗಮನ ಸೆಳೆದರು. ಇದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next